ಸರ್ಕಾರಿ ಶಾಲೆಗಳೆಂದರೆ ಅದೇನೋ ಅಸಡ್ಡೆ. ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಓದಿದರೆ ಮಾತ್ರವೇ ಮಕ್ಕಳಿಗೆ ಉಜ್ವಲ ಭವಿಷ್ಯವೆನ್ನುವ ಮನಸ್ಥಿತಿ ಹೆಚ್ಚಿನ ಪೋಷಕರಲ್ಲಿದೆ. ಎಷ್ಟು ಡೊನೇಶನ್ ಕಟ್ಟಿದ್ದೇವೆ ಎನ್ನುವುದೇ ಬಹುತೇಕ ಪೋಷಕರ ಪ್ರತಿಷ್ಠೆಯ ಸಂಕೇತವಾಗಿದೆ. ಅದಕ್ಕೆ ಪೂರಕವಾಗಿಯೂ ಒಳ ರಾಜಕೀಯ ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕೆಲ ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆಗಳೂ ಇವೆ.
ಆದರೆ, ಶಿವಮೊಗ್ಗದ ಸರ್ಕಾರಿ ಶಾಲೆಯೊಂದು ಯಾರಿಗೇನು ಕಮ್ಮಿಯಿಲ್ಲ ಅನ್ನುವಂತೆ ಸದ್ದಿಲ್ಲದೆ ಸುದ್ದಿಮಾಡುತ್ತಿದೆ. ಆಗುಂಬೆ ಹೋಬಳಿಯ ಆಗುಂಬೆ ಗ್ರಾಪಂ ವ್ಯಾಪ್ತಿಯ ಹೊಸೂರು ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆ ಇಂತಹದ್ದೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.

1965 ರಲ್ಲಿ ಕಾಡಮ್ಮ ಹೆಗ್ಗಡತಿ ಹಾಗೂ ಅಂದಿನ ಹಲವು ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಈ ಶಾಲೆ ಆರಂಭವಾಯಿತು. ಕಾಡಮ್ಮ ಹೆಗ್ಗಡತಿಯವರು ಮನೆಯಲ್ಲಿ ವಿದ್ಯಾರ್ಥಿಗಳಿಗೆ ಉಳಿಯಲು ವ್ಯವಸ್ಥೆ, ಊಟದ ಜೊತೆಜೊತೆಯಲ್ಲಿ ವಿದ್ಯಾಭ್ಯಾಸ ನೀಡಲು ಪ್ರಾರಂಭಿಸಿದರು. ತದನಂತರ ಶಾಲೆಗೆ ಮಕ್ಕಳ ದಾಖಲಾತಿ ದಿನ ಕಳೆದಂತೆ ಹೆಚ್ಚಾಗತೊಡಗಿತು. ಉಡುಪಿ ಜಿಲ್ಲೆಯ ಗಡಿ ಭಾಗದಲ್ಲಿರುವ ಈ ಶಾಲೆ ರಾಜ್ಯದ ಅತ್ಯುತ್ತಮ ಶಾಲೆಗಳಲ್ಲಿ ಒಂದು ಎಂಬ ಖ್ಯಾತಿ ಕೂಡ ಪಡೆದಿದೆ.
ಒಂದು ಸರ್ಕಾರಿ ಶಾಲೆಯನ್ನು ಅತ್ಯುತ್ತಮವಾಗಿ ನಿರ್ಮಾಣ ಮಾಡಲು ಸಮುದಾಯದ ಸಹಕಾರ ಮತ್ತು ಸಹಭಾಗಿತ್ವ ಅತ್ಯಂತ ಮಹತ್ವ ಎನ್ನುವುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. ಈ ವಿಚಾರದಲ್ಲಿ ಶಾಲೆಯನ್ನು ಸರ್ವಾಂಗೀಣವಾಗಿ ಕಟ್ಟಬೇಕು ಎನ್ನುವ ಎಲ್ಲಾ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕ ಮಂಜು ಬಾಬುರವರು ಈ ಮಹೋನ್ನತ ಉದ್ದೇಶಕ್ಕೆ ನೀರೆರೆದು ಪೋಷಿಸಿದರು. ಶಾಲೆಯ ಅಧ್ಯಕ್ಷರು, ಸದಸ್ಯರು ಹಾಗೂ ಪೋಷಕರು, ಹಿರಿಯ ವಿದ್ಯಾರ್ಥಿಗಳು, ದಾನಿಗಳು, ನಿವೃತ್ತ ಶಿಕ್ಷಕರು, ಜೊತೆಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಮಸ್ತ ತಂಡ ಶಾಲೆಯ ಸಮಗ್ರ ಪ್ರಗತಿಗೆ ಟೊಂಕ ಕಟ್ಟಿ ನಿಂತಿದೆ.
ಶಿಕ್ಷಕರ ಆಶೋತ್ತರಗಳಿಗೆ ಸಹಕಾರಿಯಾಗಿ, ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ, ಕ್ರೀಡಾಕೂಟಗಳಲ್ಲಿ, ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಸಂಘಟಿಸುವಲ್ಲಿ, ಶಾಲೆಗೆ ಮೂಲಭೂತ ಸೌಕರ್ಯಗಳನ್ನ ತರಿಸುವಲ್ಲಿ, ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರ ಪಾತ್ರ ಅತ್ಯಂತ ಅವಿಸ್ಮರಣೀಯವಾಗಿದೆ.
ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ವಿಶೇಷ ರಾತ್ರಿ ಶಾಲಾ ತರಗತಿಗಳನ್ನು ನಡೆಸಲಾಗುತ್ತದೆ. ಇದು ಈ ಶಾಲೆಯ ಅತ್ಯಂತ ವಿಶೇಷ ಸಂಗತಿಗಳಲ್ಲೊಂದು. ಕಳೆದ ಐದಾರು ವರ್ಷಗಳಿಂದ ಪರೀಕ್ಷೆ ಆರಂಭವಾಗುವ ಒಂದು ತಿಂಗಳು ಮುಂಚೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪೋಷಕರು, ಮುಖ್ಯ ಶಿಕ್ಷಕರು ಶಿಕ್ಷಕರ ಸಹಕಾರದಿಂದ ಗಂಡು ಮತ್ತು ಹೆಣ್ಣು ಮಕ್ಕಳನ್ನು ಶಾಲೆಯಲ್ಲಿ ಉಳಿಸಿ ಅವರಿಗೆ ವಿಶೇಷ ಊಟದ ವ್ಯವಸ್ಥೆ ಕಲಿಸಿ, ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಈ ವಿಶೇಷ ತರಗತಿಗಳಿಂದ ಮಕ್ಕಳು ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಅನುಕೂಲವಾಗುತ್ತದೆ.

ದಶಕದಿಂದಲೂ ಈ ಶಾಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಕ್ರೀಡೆ ಮತ್ತು ಸಹಪಠ್ಯ ಚಟುವಟಿಕೆಗಳಲ್ಲೂ ಗಮನಾರ್ಹ ಸಾಧನೆಗಳನ್ನು ಮಾಡಿ ಹೆಮ್ಮೆಯ ಕೇಂದ್ರವಾಗಿ ಹೊರಹೊಮ್ಮಿದೆ. ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ನಿರಂತರವಾಗಿ ಭಾಗವಹಿಸುವ ಮೂಲಕ ಶಾಲೆಯು ಅಸಾಧಾರಣ ಯಶಸ್ಸನ್ನು ಗಳಿಸಿದೆ.
ವಿಶೇಷವಾಗಿ, ಖೋ-ಖೋ ಮತ್ತು ವಾಲಿಬಾಲ್‌ನಂತಹ ಗುಂಪು ಆಟಗಳಲ್ಲಿ ಶಾಲೆಯು ಕಳೆದ ಹಲವು ವರ್ಷಗಳಿಂದ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸ್ಥಿರವಾದ ಉತ್ತಮ ಸಾಧನೆ ತೋರಿದೆ. ತಂಡ ಆಟಗಳಲ್ಲಿ ಮಕ್ಕಳ ಸಾಮೂಹಿಕ ಪ್ರಯತ್ನ ಮತ್ತು ದಕ್ಷತೆ ಎದ್ದು ಕಾಣುತ್ತದೆ. ಅದೇ ರೀತಿ, ಅಥ್ಲೆಟಿಕ್ ವಿಭಾಗದಲ್ಲಿಯೂ ಶಾಲೆಯ ಸಾಧನೆ ಶ್ಲಾಘನೀಯ. ಕಳೆದ ಐದು ವರ್ಷಗಳಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಶೇಕಡಾ 80ರಷ್ಟು ಸಮಗ್ರ ಪ್ರಶಸ್ತಿಗಳನ್ನು ಗೆದ್ದಿರುವುದು ನಿಜಕ್ಕೂ ಹೆಮ್ಮೆಯ ವಿಷಯ.
ಈ ಯಶಸ್ಸಿನ ಹಿಂದಿರುವುದು ಶಾಲೆಯ ವ್ಯವಸ್ಥಿತ ತರಬೇತಿ ಮತ್ತು ಮಾರ್ಗದರ್ಶನ. ಶಾಲೆಯಲ್ಲಿ ಮಕ್ಕಳ ಆಸಕ್ತಿಯನ್ನು ಗುರುತಿಸಿ, ಅವರಿಗೆ ದೈಹಿಕ ಶಿಕ್ಷಣ ಶಿಕ್ಷಕರಿಂದ ಮತ್ತು ಅನೇಕ ಹಿರಿಯ ತರಬೇತುದಾರರಿಂದ ವಿಶೇಷ ಮಾರ್ಗದರ್ಶನ ಹಾಗೂ ವ್ಯವಸ್ಥಿತ ತರಬೇತಿ ನೀಡಲಾಗುತ್ತಿದೆ. ಇದರ ಫಲವಾಗಿ ಅನೇಕ ಮಕ್ಕಳು ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಶಾಲೆಯನ್ನು ಯಶಸ್ವಿಯಾಗಿ ಪ್ರತಿನಿಧಿಸುವ ಮೂಲಕ ಶಾಲೆಯ ಗೌರವಕ್ಕೆ ಭಾಜನರಾಗಿದ್ದಾರೆ.
ಪ್ರಬಂಧ, ರಸಪ್ರಶ್ನೆ, ಭಾಷಣ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಚುನಾವಣಾ ಸಾಕ್ಷರತಾ ಕ್ಲಬ್‌ನ ರಾಜ್ಯಮಟ್ಟದ ರಸಪ್ರಶ್ನೆಯಲ್ಲಿ ಒಂದು ಬಾರಿ ಚಾಂಪಿಯನ್ಸ್, ಒಂದು ಬಾರಿ ರನ್ನರ್ ಅಪ್ ಮತ್ತು ಒಂದು ಬಾರಿ ತೃತೀಯ ಸ್ಥಾನ ಗಳಿಸಿರುವುದು ಶಾಲೆಯ ಬುದ್ಧಿಮತ್ತೆಯ ಹೆಗ್ಗುರುತಾಗಿದೆ. ಕಳೆದ ವರ್ಷ ಪ್ರತಿಭಾ ಕಾರಂಜಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಕರ್ನಾಟಕ ಚಾಂಪಿಯನ್ಸ್ ಆಗಿ ಹೊರಹೊಮ್ಮಿರುವುದು ಅತ್ಯಂತ ಖುಷಿಯ ವಿಷಯ. ಅನೇಕ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿಯೂ ಈ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿ ಶಾಲೆಯ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ.

ಹಿಂದೆ ಕೇರ್‌ವರ್ಕ್ಸ್ ಫೌಂಡೇಶನ್ ಎಂದು ಕರೆಯಲ್ಪಡುತ್ತಿದ್ದ ಕ್ವೆಸ್ ಫೌಂಡೇಶನ್, ಬೆಂಗಳೂರು, ತೀರ್ಥಹಳ್ಳಿ ತಾಲೂಕಿನ ಐದು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಅವುಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮೂಲಭೂತ ಸೌಕರ್ಯಗಳ ಸುಧಾರಣೆಯಿಂದ ಹಿಡಿದು ಸಮುದಾಯದ ಸಹಭಾಗಿತ್ವದವರೆಗೆ, ಈ ಫೌಂಡೇಶನ್‌ನ ಪ್ರಯತ್ನಗಳು ಸರ್ಕಾರಿ ಶಾಲೆಗಳನ್ನು ಪ್ರಕಾಶಮಾನವಾಗಿ ಬೆಳಗುವಂತೆ ಮಾಡಿವೆ.
ಶಾಲೆಯ ಸಮಗ್ರ ಅಭಿವೃದ್ಧಿಗಾಗಿ, ಸಂಸ್ಥೆಯ ಸಿಬ್ಬಂದಿ ಶಾಲೆಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ಶಾಲಾ ಸಿಬ್ಬಂದಿ, ಶಿಕ್ಷಕರು, ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC), ಪೋಷಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಈ ಮಾಹಿತಿಯ ಆಧಾರದ ಮೇಲೆ, ಅಭಿವೃದ್ಧಿಯ ಅಧ್ಯತಾ ವಲಯಗಳನ್ನು ಗುರುತಿಸುತ್ತಾರೆ. ‘ಮ್ಯಾಪಿಂಗ್’ ಕಾರ್ಯದಲ್ಲಿ ಕ್ವೆಸ್ ಫೌಂಡೇಶನ್ ತನ್ನ ಪಾತ್ರವನ್ನು ಸ್ಪಷ್ಟಪಡಿಸುತ್ತದೆ. ಶಾಲೆ ಎಲ್ಲರಿಗಾಗಿ, ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂಬ ತತ್ವದ ಮೇಲೆ ಇದು ಕೆಲಸ ಮಾಡುತ್ತದೆ. ಈ ಕಾರ್ಯದಲ್ಲಿ, ಕ್ವೆಸ್ ಫೌಂಡೇಶನ್‌ನವರು ನಿರ್ವಹಿಸಬಲ್ಲ ಕೆಲಸ, ಮತ್ತು ಪೋಷಕರು, SDMC, ದಾನಿಗಳು ಹಾಗೂ ಜನಪ್ರತಿನಿಧಿಗಳ ಪಾತ್ರಗಳನ್ನು ವರ್ಗೀಕರಿಸಿ, ಅಭಿವೃದ್ಧಿ ಕಾರ್ಯದಲ್ಲಿ ಎಲ್ಲರೂ ಸಮಾನವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಾರೆ. ಈ ಸಹಭಾಗಿತ್ವದ ವಿಧಾನವು ಶಾಲೆಯ ಅಭಿವೃದ್ಧಿಗೆ ಸಹಕಾರಿಯಾಗಿದೆ.

ಶಾಲೆಯು ಕಣ್ಣು, ಹಲ್ಲು ಮತ್ತು ಸಮಗ್ರ ಆರೋಗ್ಯ ತಪಾಸಣಾ ಶಿಬಿರಗಳನ್ನು ನಿಯಮಿತವಾಗಿ ನಡೆಸುತ್ತದೆ. ಅಗತ್ಯವಿರುವ ಮಕ್ಕಳಿಗೆ ಆರೋಗ್ಯ ಪೂರಕ ಸೌಲಭ್ಯಗಳನ್ನು ಒದಗಿಸುವ ಮೂಲಕ, ಅವರು ಯಾವುದೇ ಕೀಳರಿಮೆ ಇಲ್ಲದೆ ಎಲ್ಲರಂತೆ ಸಮಾಜದಲ್ಲಿ ಬೆರೆಯಲು ಪ್ರೋತ್ಸಾಹ ನೀಡುತ್ತಿದೆ. 10ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ನಿರಂತರ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಈ ಪ್ರೋತ್ಸಾಹವು ಅವರನ್ನು ಸಮಾಜದಲ್ಲಿ ಉತ್ತಮ ಸ್ಥಾನಕ್ಕೆ ತಲುಪಲು ಪ್ರೇರೇಪಿಸಿದೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿವರೆಗೆ ಪ್ರತಿ ವರ್ಷ ₹10,000, ಪದವಿ ಶಿಕ್ಷಣಕ್ಕೆ ₹15,000, ಇಂಜಿನಿಯರಿಂಗ್ ಮತ್ತು ಇತರೆ ವೃತ್ತಿಪರ ಕೋರ್ಸ್‌ಗಳಿಗೆ ಕನಿಷ್ಠ ₹25,000, ಸ್ನಾತಕೋತ್ತರ ಪದವಿಗೆ ₹30,000, ಈ ಆರ್ಥಿಕ ನೆರವನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಒದಗಿಸಲು, ಕಂಪ್ಯೂಟರ್‌ಗಳನ್ನು ಪೂರೈಸಿ, ಶಿಕ್ಷಕರನ್ನು ನೇಮಿಸಿ ಕಲಿಕೆಯನ್ನು ಸುಗಮಗೊಳಿಸಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್ ಜ್ಞಾನ ಮತ್ತು ಪರಿಜ್ಞಾನವನ್ನು ಹೆಚ್ಚಿಸಿದೆ. ಗ್ರಂಥಾಲಯಕ್ಕೆ ಹೊಸ ಪುಸ್ತಕಗಳು, ಉತ್ತಮ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ವಿಜ್ಞಾನ ಪ್ರಯೋಗಾಲಯವನ್ನು ರೂಪಿಸಿ, ಅಗತ್ಯ ಪರಿಕರಗಳನ್ನು ಒದಗಿಸಿ, ವಿದ್ಯಾರ್ಥಿಗಳು ಪ್ರಯೋಗಗಳ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಮಕ್ಕಳಿಗೆ ಅಗತ್ಯ ಕೌಶಲ್ಯ ತರಬೇತಿಯನ್ನು ಅಂತರಾಷ್ಟ್ರೀಯ ಮಟ್ಟದ ತರಬೇತಿ ಕೇಂದ್ರಗಳಲ್ಲಿ ನೀಡುವ ಮೂಲಕ ಅವರ ಪ್ರತಿಭೆಗೆ ಅವಕಾಶ ಕಲ್ಪಿಸಲಾಗಿದೆ. ಶಾಲಾ ಮಕ್ಕಳ ಸಮಗ್ರ ದೈಹಿಕ ಮತ್ತು ಮಾನಸಿಕ ಸುಸ್ಥಿರತೆಗಾಗಿ ದೈಹಿಕ ಶಿಕ್ಷಕರನ್ನು ನೇಮಿಸಿ, ಮಕ್ಕಳು ಸರ್ವಾಂಗೀಣವಾಗಿ ಆಟೋಟಗಳಲ್ಲಿ ತೊಡಗಿಕೊಳ್ಳುವಂತೆ ಮಾಡಲಾಗಿದೆ. ಶಿಕ್ಷಕರಿಗೆ ಅಗತ್ಯ ಬೋಧನಾ ಪರಿಕರಗಳು, ಕಲಿಕೋಪಕರಣಗಳನ್ನು ಒದಗಿಸುವ ಮೂಲಕ ಕಲಿಕಾ-ಪೂರಕ ವಾತಾವರಣ ನಿರ್ಮಿಸಿ, ಗುಣಮಟ್ಟದ ಶಿಕ್ಷಣ ನೀಡಲು ಪ್ರೋತ್ಸಾಹ ನೀಡಲಾಗುತ್ತಿದೆ. ಇದು ಕ್ವೆಸ್ ಫೌಂಡೇಶನ್ ಮತ್ತು ಶಿಕ್ಷಕರ ನಡುವೆ ಉತ್ತಮ ಬಾಂಧವ್ಯ ಬೆಸೆಯುವಂತೆ ಮಾಡಿದೆ. ಬದಲಾದ ಸನ್ನಿವೇಶದಲ್ಲಿ ಶಿಕ್ಷಕರಿಗೆ ಇಂಗ್ಲಿಷ್ ಭಾಷಾ ಕೌಶಲ್ಯ ತರಬೇತಿ ಹಮ್ಮಿಕೊಳ್ಳಲಾಗಿದೆ. ಇದರ ಮೂಲಕ ಶಿಕ್ಷಕರು ಇಂಗ್ಲಿಷ್ ಕಲಿತು, ಮಕ್ಕಳಿಗೂ ಮಾತನಾಡುವ ಕೌಶಲ್ಯ ಕಲಿಸಿ, ಕೀಳರಿಮೆ ಹೋಗಲಾಡಿಸಲು ಕ್ರಮವಹಿಸಿದ್ದಾರೆ.
ಕ್ವೆಸ್ ಫೌಂಡೇಶನ್‌ನ ಕೊಡುಗೆಯಿಂದಾಗಿ ಸರ್ಕಾರಿ ಪ್ರೌಢಶಾಲೆ ಹೊಸೂರು-ಗುಡ್ಡಕೇರಿ ದಶಕದ ಅವಧಿಯಲ್ಲಿ ಅಪ್ರತಿಮ ಸಾಧನೆ ಮಾಡಿದೆ.
- ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ವಿಚಾರ ಸಂಕಿರಣಕ್ಕೆ ಆಯ್ಕೆ.
- 2017ರಲ್ಲಿ ಡಯಟ್, ಶಿವಮೊಗ್ಗದಿಂದ ‘ಅತ್ಯುತ್ತಮ ಗುಣಮಟ್ಟದ ಶಾಲೆ’ ಎಂಬ ಹೆಗ್ಗಳಿಕೆ ಪ್ರಶಸ್ತಿ.
- 2018-19ರಲ್ಲಿ ತೀರ್ಥಹಳ್ಳಿ ತಾಲ್ಲೂಕಿನಿಂದ ‘ಅತ್ಯುತ್ತಮ ಪ್ರೌಢಶಾಲಾ ಪ್ರಶಸ್ತಿ’.
- 2024ರಲ್ಲಿ ಶಿಕ್ಷಣವಾರ್ತೆ ಬೆಂಗಳೂರು ಇವರಿಂದ ರಾಜ್ಯ ಪ್ರಶಸ್ತಿ.
- 2015-16ರಲ್ಲಿ ‘ರಾಜ್ಯ ಮಟ್ಟದ ಅತ್ಯುತ್ತಮ ಪ್ರೌಢಶಾಲಾ ಪ್ರಶಸ್ತಿ’ – ಜಿ. ಗೋವಿಂದೇಗೌಡ ಸ್ಮರಣಾರ್ಥ ರಾಜ್ಯಮಟ್ಟಕ್ಕೆ ನಾಮ ನಿರ್ದೇಶನಗೊಂಡ ಶಿವಮೊಗ್ಗ ಜಿಲ್ಲೆಯ ಏಕೈಕ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆ.

2010-11 ರಿಂದ 2023ರ ವರೆಗೆ ಸತತವಾಗಿ ಶಾಲೆಯು 100% ಫಲಿತಾಂಶವನ್ನು ದಾಖಲಿಸಿದೆ. ಇದು ಶಾಲೆಯ ಶಿಕ್ಷಕರ ಬದ್ಧತೆ ಮತ್ತು ವಿದ್ಯಾರ್ಥಿಗಳ ಶ್ರಮಕ್ಕೆ ಕನ್ನಡಿ ಹಿಡಿಯುತ್ತದೆ. ವಿಶೇಷವಾಗಿ, 30 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸಮಾಜ ವಿಜ್ಞಾನ, ಕನ್ನಡ ಮತ್ತು ಹಿಂದಿ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿರುವುದು ಅತ್ಯಂತ ಗಮನಾರ್ಹ ಸಾಧನೆಯಾಗಿದೆ. ಇದು ವಿಷಯವಾರು ಕಲಿಕೆಯಲ್ಲಿನ ಶಾಲೆಯ ಶ್ರೇಷ್ಠತೆಯನ್ನು ತೋರಿಸುತ್ತದೆ.

ಮಲೆನಾಡಿನ ಸುಂದರ ಗಡಿಭಾಗದಲ್ಲೊಂದು ಸರ್ಕಾರಿ ಶಾಲೆಯು ಕ್ರೀಡೆ, ಶಿಕ್ಷಣ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಅದ್ಭುತ ಸಾಧನೆಗಳನ್ನು ಮಾಡುತ್ತಿದೆ. “ನಮ್ಮ ಶಾಲೆ ನಮ್ಮ ಹೆಮ್ಮೆ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಷ್ಟು ಮಕ್ಕಳು ಸಂತಸದಿಂದ ಪ್ರತಿದಿನ ಶಾಲೆಗೆ ಬರುತ್ತಿದ್ದಾರೆ. ಈದಿನ.ಕಾಮ್ ನೊಂದಿಗೆ ಮಾತನಾಡಿದ 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಾದ ಸೃಷ್ಟಿ, ಶೈಫಾ, ಮನೋಘ್ನ, ಅಶ್ವಿನಿ, ಏಕತಾ ಮತ್ತು ಅನೂಪ್, ತಮ್ಮ ಶಾಲೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಉತ್ಸಾಹದಿಂದ ವಿವರಿಸಿದ್ದಾರೆ.
ಶಾಲೆಯಲ್ಲಿ ಸಿಗುತ್ತಿರುವ ಉತ್ತಮ ಸೌಲಭ್ಯಗಳ ಬಗ್ಗೆ ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ. ಕೇವಲ ಪಾಠಕ್ಕಷ್ಟೇ ಅಲ್ಲದೆ, ಆಟಗಳಿಗೂ ಸಮಾನ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಇದು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಿದೆ. ಡಿಜಿಟಲ್ ತಂತ್ರಜ್ಞಾನದ ತರಬೇತಿ, ತೆರೆದ ಗ್ರಂಥಾಲಯ, ಒಳಾಂಗಣ ಕ್ರೀಡಾಂಗಣ, ಧ್ವಜ ಸ್ತಂಭ, ಸುಸಜ್ಜಿತ ಆಟದ ಮೈದಾನ ಹೀಗೆ ಎಲ್ಲಾ ರೀತಿಯ ಅಗತ್ಯ ಮೂಲ ಸೌಕರ್ಯಗಳು ಈ ಶಾಲೆಯಲ್ಲಿವೆ.

ಶಾಲೆಯಲ್ಲಿ ಒಟ್ಟು 6 ಶಿಕ್ಷಕರಿದ್ದು, 8 ರಿಂದ 10ನೇ ತರಗತಿವರೆಗೂ ಒಟ್ಟು 90 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಷ್ಟೊಂದು ಸೀಮಿತ ಶಿಕ್ಷಕರ ಬಲದೊಂದಿಗೆ ಶಾಲೆಯು ಸಾಧಿಸುತ್ತಿರುವ ಯಶಸ್ಸು ಮಾದರಿಯಾಗಿದೆ. ಶಾಲೆಯ ಉತ್ತಮ ವಾತಾವರಣ, ಶಿಕ್ಷಕರ ಪರಿಶ್ರಮ ಮತ್ತು ಮುಖ್ಯಶಿಕ್ಷಕರ ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಹಲವು ಜಿಲ್ಲೆಗಳಿಂದ ಪೋಷಕರು ತಮ್ಮ ಮಕ್ಕಳನ್ನು ಕರೆತಂದು ಈ ಶಾಲೆಗೆ ದಾಖಲಾತಿ ಮಾಡಿಸುತ್ತಿದ್ದಾರೆ.
ವಿಜಯಪುರದ ಕೂಲಿ ಕಾರ್ಮಿಕರ ಮಗಳಾದ ಅಶ್ವಿನಿ, ಶಾಲೆಯಲ್ಲಿ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸ್ವಚ್ಛಂದ ವಾತಾವರಣ, ಶಿಕ್ಷಕರ ಬದ್ಧತೆ ಮತ್ತು ಮುಖ್ಯಶಿಕ್ಷಕರಾದ ಮಂಜು ಬಾಬು ಅವರ ನಾಯಕತ್ವವು ಶಾಲೆಯ ಯಶಸ್ಸಿಗೆ ಕಾರಣವಾಗಿದೆ. ಮಂಜು ಬಾಬು ಅವರಿಗೆ 2022ರಲ್ಲಿ ಪ್ರಜಾವಾಣಿ ವರ್ಷದ ಸಾಧಕ ಪ್ರಶಸ್ತಿ ಲಭಿಸಿರುವುದು ಶಾಲೆಯ ಶ್ರೇಷ್ಠತೆಗೆ ಮತ್ತೊಂದು ಗರಿ. ಶಾಲೆಯ ಹಲವು ಶಿಕ್ಷಕರಿಗೂ ಪ್ರಶಸ್ತಿಗಳು ಲಭಿಸಿವೆ ಎಂಬುದು ಗಮನಾರ್ಹ.

ಇಂತಹ ಸರ್ಕಾರಿ ಶಾಲೆಯನ್ನು ತನ್ನ ಸಹಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿಗಳು, ದಾನಿಗಳು, ಊರಿನವರ ಜೊತೆಯಲ್ಲಿ ಮುಂಚೂಣಿಗೆ ತರುವಲ್ಲಿ ತಮ್ಮ ಅವಿರತವಾದ ಶ್ರಮಹಾಕಿದವರು ಶಾಲೆಯ ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ. KES
ಮಂಜು ಬಾಬುರವರ ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ಹುಣಸೇಕಟ್ಟೆ. ತಮ್ಮ ಶಿಕ್ಷಣವನ್ನು ಕೋಟೆಯ ನಾಡು ಚಿತ್ರದುರ್ಗದಲ್ಲಿ ಮುಗಿಸಿದರು. ಮೊದಲಿಗೆ ರಕ್ಷಣಾ ಇಲಾಖೆಯಲ್ಲಿ ಸಿಕ್ಕ ಕೆಲಸವನ್ನು ತೊರೆದು ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿಯಿಂದ ಮುಖ್ಯ ಶಿಕ್ಷಕರಾದರು. ಸರ್ಕಾರಿ ಶಾಲೆಯ ಸಬಲೀಕರಣಕ್ಕೆ ಇವರ ಶ್ರಮ ನಿಜಕ್ಕೂ ಬೆರಗುಹುಟ್ಟಿಸುವಂತದ್ದು. ಇವರ ಶ್ರಮದ ಪರಿಚಯವಾಗಬೇಕೆಂದರೆ ಒಮ್ಮೆ ಇವರ ಶಾಲೆಗೆ ಭೇಟಿ ನೀಡಬೇಕು. ಕೇವಲ ಒಂದು ಕೈಯಿಂದ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ. ಎರಡೂ ಕೈ ಸೇರಬೇಕು. ಇವರ ಜೊತೆಗೆ ಸಮಾನ ಮನಸ್ಕ ಶಿಕ್ಷಕರು ದೊರಕಿದ್ದು ಇವರ ಪುಣ್ಯ. ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವವರು ಒಮ್ಮೆ ಇವರ ಶಾಲೆಗೆ ಭೇಟಿ ನೀಡಲೇಬೇಕು ಎನ್ನುತ್ತದೆ ಶಿಕ್ಷಕ ವೃಂದ. ಹಾಗೆಯೇ ಶಾಲೆಗೆ ವಸತಿ ನಿಲಯದ ಅವಶ್ಯಕತೆ ಉಂಟಾಗಿದೆ. ಸರ್ಕಾರ ವಸತಿ ನಿಲಯದ ವ್ಯವಸ್ಥೆ ಮಾಡಿಕೊಡುವ ನಿರೀಕ್ಷೆಯಲ್ಲಿದೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.
ಸರ್ಕಾರಿ ಶಾಲೆ ಉಳಿಯಲಿ.