ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಮಹತ್ವ ನಿರ್ಧಾರ ಕೈಗೊಂಡಿದೆ. ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ವಸತಿ ಯೋಜನೆಯಲ್ಲಿ ಅಲ್ಪ ಸಂಖ್ಯಾತರಿಗೆ ಮೀಸಲಾತಿಯನ್ನು ಶೇ.10ರಿಂದ ಶೇ.15ಕ್ಕೆ ಏರಿಸಲು ಸಚಿವ ಸಂಪುಟ ಅಸ್ತು ಎಂದಿದೆ.
ಗುತ್ತಿಗೆಯಲ್ಲಿ ಮೀಸಲಾತಿ ನೀಡಿದ ಬಳಿಕ ಈಗ ವಸತಿ ಯೋಜನೆಯಲ್ಲೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ. ವಸತಿ ಯೋಜನೆಯಲ್ಲೂ ಮೀಸಲಾತಿಯನ್ನು ಹೆಚ್ಚಿಸುವಂತೆ ವಸತಿ ಇಲಾಖೆ ಸಚಿವ ಜಮೀರ್ ಅಹಮದ್ ಸರ್ಕಾರದ ಮುಂದೆ ಪ್ರಸ್ತಾಪ ಇಟ್ಟಿದ್ದರು.
ಈ ಪ್ರಸ್ತಾವನೆಯನ್ನು ಇಂದಿನ ಸಚಿವ ಸಂಪುಟ ಅಂಗೀಕರಿಸಿದೆ. ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಜಾರಿಗೊಳಿಸುವ ಎಲ್ಲ ವಸತಿ ಯೋಜನೆಗಳಿಗೆ ಈ ಮೀಸಲಾತಿ ಅನ್ವಯಿಸುತ್ತದೆ.
ಸಚಿವ ಸಂಪುಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕಾನೂನು ಸಚಿವ ಹೆಚ್ ಕೆ ಪಾಟೀಲ್, “ವಸತಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ವಿವಿಧ ಯೋಜನೆ ಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಳ ಮಾಡಲಾಗಿದ್ದು, ಶೇಕಡಾ 10ರಿಂದ ಶೇ.15ಕ್ಕೆ ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ” ಎಂದು ತಿಳಿಸಿದರು.
ಮುಸ್ಲಿಮರಿಗೆ ಮಾತ್ರವಲ್ಲ ಅಲ್ಪಸಂಖ್ಯಾತರಿಗೂ ಅನ್ವಯ
‘ಎಸ್‌ಸಿ, ಎಸ್‌ಟಿ ಹಾಗೂ ಸಾಮಾನ್ಯ ಕೆಟಗರಿಯಲ್ಲಿ ಮೀಸಲಾತಿ ಇರಲಿದೆ. ಅಲ್ಪ ಸಂಖ್ಯಾತರಲ್ಲಿ ವಸತಿ ಸೌಲಭ್ಯ ಇಲ್ಲದವರ ಸಂಖ್ಯೆಯನ್ನು ಪರಿಗಣಿಸಿ ಈ ನಿರ್ಧಾರವನ್ನು ಮಾಡಲಾಗಿದೆ. ಈ ಬಗ್ಗೆ ಅಧ್ಯಯನ ವರದಿ ಇದೆ. ಇದನ್ನೆಲ್ಲಾ ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದರು.
“ನ್ಯಾಯಮೂರ್ತಿ ಸಾಚಾರ್ ಕಮಿಟಿ ವರದಿಯನ್ನೂ ಕೂಡ ಈಗ ಕೇಂದ್ರ ಪರಿಗಣಿಸುತ್ತಿದೆ. ಕೇಂದ್ರದ ಸೂಚನೆಗಳನ್ನು ಗಮನಿಸಿ ಸಾಮಾಜಿಕ ನ್ಯಾಯದ ಪಾಲನೆ ಮಾಡುತ್ತಿದ್ದೇವೆ. ನಿಯಮಗಳಿಗೆ ಕ್ಯಾಬಿನೆಟ್ ಅನುಮೋದನೆ ಸಾಕು. ಇದು ಎಲ್ಲ ಅಲ್ಪಸಂಖ್ಯಾತರಿಗೂ ಅನ್ವಯವಾಗುತ್ತದೆ. ಮುಸ್ಲಿಂ, ಜೈನರು, ಕ್ರಿಶ್ಚಿಯನ್ ಎಲ್ಲರೂ ಕೂಡ ಇದರಲ್ಲಿ ಒಳಗೊಳ್ಳುತ್ತಾರೆ. ಇದಕ್ಕೆ ಬೇಕಾದ ಹಲವು ಅಧ್ಯಯನ ವರದಿಗಳೂ ಕೂಡ ಇವೆ” ಎಂದರು.
“ಬಡವರಿಗೆ ಮನೆ ಮಾಡಿಕೊಡುವುದರಲ್ಲಿ ರಾಜಕೀಯ ವಾಸನೆ ಹುಡುಕುವವರಿಗೆ ನಾವು ಉತ್ತರ ಕೊಡಲ್ಲ. ವಸತಿ ರಹಿತರಿಗೆ ಹೆಚ್ಚಿನ ಸೌಲಭ್ಯಗಳನ್ನು ಕೊಡಬೇಕು ಎಂಬುದು ಸರ್ಕಾರದ ಉದ್ದೇಶ” ಎಂದು ಹೇಳಿದರು.
ಬಡ ವರ್ಗದ ಜನರಿಗೆ ನೆರವು: ಡಿ.ಕೆ. ಶಿವಕುಮಾರ್
“ವಸತಿ ಇಲಾಖೆಯಿಂದ ನಗರ ಪ್ರದೇಶಗಳಲ್ಲಿ ನಿರ್ಮಿಸಲಾಗಿರುವ ವಸತಿಗಳು ಹೆಚ್ಚಾಗಿ ಖಾಲಿ ಇದ್ದು, ಅಲ್ಪಸಂಖ್ಯಾತರು ಈ ಮನೆಗಳಿಗೆ ಹೋಗಲು ಮುಂದಾಗಿದ್ದಾರೆ. ಹೀಗಾಗಿ ಅವರಿಗೆ ನೀಡಲಾಗಿದ್ದ ವಸತಿ ಹಂಚಿಕೆ ಮೀಸಲಾತಿಯನ್ನು ಶೇ. 10 ರಿಂದ 15 ಕ್ಕೆ ಏರಿಕೆ ಮಾಡುತ್ತಿದ್ದೇವೆ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ವಿಧಾನಸೌಧದ ಆವರಣದಲ್ಲಿ ಸಚಿವ ಸಂಪುಟ ಸಭೆ ಬಳಿಕ ಪ್ರತಿಕ್ರಿಯೆ ನೀಡಿ, “ಕೆಲವು ನಗರ ಪ್ರದೇಶಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಶೇ. 20-30 ರಷ್ಟು ಬಡವರು ಇದ್ದಾರೆ. ಹೀಗಾಗಿ ಅವರಿಗೆ ಮೀಸಲಾತಿ ಹೆಚ್ಚಳ ಮಾಡಲು ಪ್ರಸ್ತಾವನೆ ಬಂದಿದೆ. ಈ ಮನೆಗಳಿಗೆ ಹಣ ಪಾವತಿ ಮಾಡಬೇಕು. ಇತರರು ಇದಕ್ಕೆ ಹೆಚ್ಚಿನ ಆಸಕ್ತಿ ತೋರಿಲ್ಲ. ಬೆಂಗಳೂರಿನಲ್ಲೂ ಅನೇಕ ವಸತಿ ಕಟ್ಟಡಗಳಲ್ಲಿ ಮನೆಗಳು ಖಾಲಿ ಇವೆ. ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಸಹಾಯಧನ ತೀರಾ ಕಡಿಮೆ ಇದೆ. ಈ ಮನೆಗಳನ್ನು ಕಟ್ಟಿದ ನಂತರ ಖಾಲಿ ಬಿದ್ದಿವೆ. ಇವುಗಳನ್ನು ಯಾರಿಗೆ ನೀಡಬೇಕು” ಎಂದು ಪ್ರಶ್ನಿಸಿದರು.
ಮಂಡ್ಯದಲ್ಲಿಯೂ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆದರೆ ಅಲ್ಲಿಗೆ ಯಾರು ಹೋಗದೇ ಖಾಲಿ ಬಿದ್ದಿವೆ. ಈ ಮನೆಗಳಿಗೆ ಹೋಗಲು ಅಲ್ಪಸಂಖ್ಯಾತರು ಮುಂದಾಗಿದ್ದಾರೆ. ಹೀಗಾಗಿ ಸರ್ಕಾರ ಈ ತೀರ್ಮಾನ ಮಾಡಿದೆ” ಎಂದರು.
ಇದು ಓಲೈಕೆ ರಾಜಕಾರಣ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಯಾರು ಏನಾದರೂ ಹೇಳಿಕೊಳ್ಳಲಿ. ನಾವು ಬಡ ವರ್ಗದ ಜನರಿಗೆ ನೆರವು ನೀಡುತ್ತಿದ್ದೇವೆ. ಈ ಮನೆಗಳಿಗೆ ಯಾರೂ ಅರ್ಜಿ ಹಾಕದೇ ಇದ್ದಾಗ ನಾವು ಏನು ಮಾಡಬೇಕು? ಮನೆಯನ್ನು ಹಾಗೇ ಖಾಲಿ ಬಿಡಬೇಕೇ? ಉಳಿದ ವಿಚಾರವನ್ನು ಕಾನೂನು ಸಚಿವರು ವಿವರಿಸಲಿದ್ದಾರೆ” ಎಂದು ತಿಳಿಸಿದರು.