ಕರ್ನಾಟಕ ರೈತ ಸುರಕ್ಷಾ, ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೋಟಗಾರಿಕಾ ಬೆಳೆಗಳಿಗೆ ಬೆಳೆ ವಿಮೆ ನೊಂದಣಿ ಪ್ರಾರಂಭವಾಗಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಟೊಮ್ಯಾಟೋ ಹಾಗೂ ಕೆಂಪು ಮೆಣಸಿನಕಾಯಿ ಬೆಳೆಗಳಿಗೆ ವಿಮೆ ನೊಂದಣಿಗೆ ಅವಕಾಶ ಕಲ್ಪಿಸಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಗೆ 2025ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅಧಿಸೂಚಿತ ತೋಟಗಾರಿಕೆ ಬೆಳೆಗಳ ತಾಲೂಕುವಾರು ವಿಂಗಡಿಸಿ ವಿಮೆ ನೊಂದಣಿಗೆ ಅವಕಾಶ ನೀಡಲಾಗಿದೆ. 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿದೆ. ನೀರಾವರಿ ಆಶ್ರಿತ ಈರುಳ್ಳಿ ಬೆಳೆ ವಿಮೆ ನೊಂದಣಿಗೆ ಜುಲೈ 15 ಕಡೆಯ ದಿನ. ಚಿತ್ರದುರ್ಗ ಜಿಲ್ಲೆಗೆ ವಿಮಾ ಕಂಪನಿಯಾಗಿ ದಿ ಓರಿಎಂಟಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಅನ್ನು ನಿಗಧಿಪಡಿಸಲಾಗಿದೆ.

ಚಿತ್ರದುರ್ಗ ತಾಲೂಕಿನ ಕಸಬಾ, ತುರುವನೂರು ಹಾಗೂ ಹಿರೇಗುಂಟನೂರು ಹೋಬಳಿ (ಈರುಳ್ಳಿ ನೀರಾವರಿ, ಈರುಳ್ಳಿ ಮಳೆಯಾಶ್ರಿತ), ಭರಮಸಾಗರ ಹೋಬಳಿ (ಈರುಳ್ಳಿ ನೀರಾವರಿ, ಟೊಮೋಟೊ). ಹಿರಿಯೂರು ತಾಲೂಕಿನ ಕಸಬಾ ಹೋಬಳಿ (ಈರುಳ್ಳಿ ನೀರಾವರಿ) ಧರ್ಮಪುರ ಹೋಬಳಿ (ಈರುಳ್ಳಿ ನೀರಾವರಿ, ಟೊಮೋಟೋ) ಐಮಂಗಲ, ಜೆ.ಜಿ.ಹಳ್ಳಿ ಹೋಬಳಿಗೆ (ಈರುಳ್ಳಿ ನೀರಾವರಿ, ಈರುಳ್ಳಿ ಮಳೆಯಾಶ್ರಿತ). ಹೊಳಲ್ಕೆರೆ ತಾಲೂಕಿನ ರಾಮಗಿರಿ ಹಾಗೂ ತಾಳ್ಯ ಹೋಬಳಿ (ಈರುಳ್ಳಿ ನೀರಾವರಿ, ಈರುಳ್ಳಿ ಮಳೆಯಾಶ್ರಿತ, ಟೊಮೋಟೊ), ಹೊಸದುರ್ಗ ತಾಲೂಕಿನ ಕಸಬಾ ಹೋಬಳಿ (ಈರುಳ್ಳಿ ಮಳೆಯಾಶ್ರಿತ, ಟೊಮೊಟೊ, ಕೆಂಪು ಮೆಣಸಿನಕಾಯಿ (ಮಳೆಯಾಶ್ರಿತ). ಚಳ್ಳಕೆರೆ ತಾಲೂಕಿನ ಕಸಬಾ, ನಾಯಕನಹಟ್ಟಿ, ಪರುಶುರಾಂಪುರ ಹಾಗೂ ತಳಕು ಹೋಬಳಿಗೆ (ಈರುಳ್ಳಿ ನೀರಾವರಿ, ಟೊಮೋಟೊ).ಮೊಳಕಾಲ್ಮುರು ತಾಲೂಕಿನ ದೇವಸಮುದ್ರ ಹಾಗೂ ಕಸಬಾ ಹೋಬಳಿ (ಈರುಳ್ಳಿ ನೀರಾವರಿ, ಟೊಮೋಟೊ) ಬೆಳೆಗಳ ನೋಂದಣಿಗೆ ಅವಕಾಶವಿದೆ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನ್ಯಾಯವಾದಿಗಳು ಸಂವಿಧಾನದ ರಾಯಭಾರಿಗಳು ಮೂಲಭೂತ ಹಕ್ಕುಗಳ ರಕ್ಷಕರು; ನ್ಯಾ. ಶಿವರಾಜ ವಿ. ಪಾಟೀಲ
ಟೊಮ್ಯಾಟೋ ಬೆಳೆಯ ವಿಮೆ ಮೊತ್ತ ಹೆಕ್ಟೇರಿಗೆ ರೂ.141500 ಇದ್ದು, ರೈತರ ವಿಮಾ ಕಂತು ರೂ.7075 ಆಗಿದೆ. ನೀರಾವರಿ ಈರುಳ್ಳಿ ವಿಮೆ ಮೊತ್ತ ಹೆಕ್ಟೇರಿಗೆ ರೂ.80500 ಇದ್ದು, ರೈತರ ವಿಮಾ ಕಂತು ರೂ.4025 ಆಗಿದೆ. ಮಳೆ ಆಶ್ರಿತ ಈರುಳ್ಳಿ ವಿಮಾ ಮೊತ್ತ ಹೆಕ್ಟೇರಿಗೆ ರೂ. 75750 ಆಗಿದ್ದು, ರೈತರ ವಿಮಾ ಕಂತು ರೂ.3787.50 ಆಗಿದೆ. ಮಳೆ ಆಶ್ರಿತ ಕೆಂಪು ಮೆಣಸಿಕಾಯಿ ವಿಮಾ ಮೊತ್ತ ಹೆಕ್ಟೇರಿಗೆ ರೂ.78750 ಆಗಿದ್ದು, ರೈತರ ವಿಮಾ ಕಂತು 3937.50 ಆಗಿದೆ. ಅಧಿಸೂಚಿತ ಬೆಳೆಗಳ ವಿಮೆಯನ್ನು ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ ಹಾಗೂ ಗ್ರಾಮ ಒನ್ ಹಾಗೂ ಇತರ ಅಧಿಕೃತ ಕೇಂದ್ರಗಳಲ್ಲಿ ನೊಂದಣಿ ಮಾಡಬಹುದು.