ಬ್ಯಾನ್ ಆಗಿರುವ ಸಂಸ್ಥೆಯಿಂದಲೇ ಪರೀಕ್ಷೆ ನಡೆಸಿ, ಆ ಸಂಸ್ಥೆಯನ್ನು ಹಾಡಿ ಹೊಗಳಿದ್ದಾರೆ ಗೃಹ ಸಚಿವ ಅಮಿತ್ ಶಾ. 2025ರ ಜೂನ್ 15ರಂದು, ಉತ್ತರ ಪ್ರದೇಶದ ಲಕ್ನೋದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದರು. ಉತ್ತರ ಪ್ರದೇಶದಲ್ಲಿ ಹೊಸದಾಗಿ ಆಯ್ಕೆಯಾದ 60,244 ಕಾನ್‌ಸ್ಟೇಬಲ್‌ಗಳಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದರು. “ಈ ನೇಮಕಾತಿಯು ಸಂಪೂರ್ಣವಾಗಿ ಪಾರದರ್ಶಕವಾಗಿದೆ. ಯಾವುದೇ ಶಿಫಾರಸು, ಲಂಚ ಅಥವಾ ಜಾತಿ-ಸಮುದಾಯವನ್ನು ಪರಿಗಣಿಸಲಾಗಿಲ್ಲ. ಆಯ್ಕೆಯನ್ನು ಅರ್ಹತೆಯ ಆಧಾರದ ಮೇಲೆ ಮಾತ್ರ ಮಾಡಲಾಗಿದೆ” ಎಂದು ಹೇಳಿಕೊಂಡರು.
ಗೃಹ ಸಚಿವರ ಈ ಹೇಳಿಕೆ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಮುಖ್ಯವಾಗಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಈ ಹೇಳಿಕೆ ನೀಡುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಿತ್ತು. ಕಳೆದ ವರ್ಷ, ಇದೇ ಕಾನ್ಸ್‌ಟೇಬಲ್ ಹುದ್ದೆಗಳಿಗಾಗಿ ‘ರಿಸರ್‌ವಿಸ್ಟ್ ಸಿವಿಲ್ ಪೊಲೀಸ್ ನೇರ ನೇಮಕಾತಿ-2023’ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಆರೋಪಗಳ ಕಾರಣ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಪರೀಕ್ಷಾ ಅಕ್ರಮದ ಬಗ್ಗೆ ಉತ್ತರ ಪ್ರದೇಶದ ಎಸ್‌ಟಿಐಫ್ ತನಿಖೆ ನಡೆಸುತ್ತಿದೆ. ಆ ಬಳಿಕ, ಅಕ್ರಮ ನಡೆದಿದೆ ಎನ್ನಲಾದ ಕೆಲವು ನಗರ ಪ್ರದೇಶಗಳಲ್ಲಿ ಮರು ಪರೀಕ್ಷೆ ನಡೆಸಲಾಗಿತ್ತು. ಆ ಮರುಪರೀಕ್ಷೆಯ ಫಲಿತಾಂಶವನ್ನೂ ಒಳಗೊಂಡು ಈಗ ಕಾನ್‌ಸ್ಟೇಬಲ್‌ಗಳನ್ನು ನೇಮಕ ಮಾಡಲಾಗಿದೆ. – ಈ ಎಲ್ಲ ಅಂಶಗಳನ್ನು ಅಮಿತ್ ಶಾ ಮರೆತು ಅಬ್ಬರದ ಭಾಷಣ ಮಾಡಿದ್ದಾರೆ.
ಅಮಿತ್ ಶಾ ಅವರು 2ನೇ ಪರೀಕ್ಷೆಯು ಪಾರದರ್ಶಕತೆಯಿಂದ ಕೂಡಿತ್ತು ಎಂದು ಹೇಳಿಕೊಳ್ಳುವ ಮೊದಲು, ಕಳೆದ ವರ್ಷ ರದ್ದಾದ ಪರೀಕ್ಷೆಯ ಬಗ್ಗೆಯೂ ಉಲ್ಲೇಖಿಸಬೇಕಿತ್ತು. ಆ ಪರೀಕ್ಷೆಯು ಹಲವಾರು ಅಭ್ಯರ್ಥಿಗಳ ಜೀವನವನ್ನು ಪಣಕ್ಕಿಟ್ಟಿತ್ತು ಎಂಬುದರ ಬಗ್ಗೆಯೂ ಮಾತನಾಡಬೇಕಿತ್ತು ಎಂದು ಹಲವರು ಹೇಳುತ್ತಿದ್ದಾರೆ.
ಇನ್ನೊಂದು ಪ್ರಮುಖ ವಿಚಾರವೆಂದರೆ, ಮೊದಲ ಪರೀಕ್ಷೆಯನ್ನು ನಡೆಸಿದ ಕಂಪನಿ ‘ಎಜುಟೆಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ಅನ್ನು ಈ ಹಿಂದೆಯೇ ಬಿಹಾರ ಸರ್ಕಾರವು ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಮೇಲೆ ನಿಷೇಧಿಸಿದೆ. ನೆರೆಯ ರಾಜ್ಯದಲ್ಲಿ ನಿಷೇಧಗೊಂಡಿರುವ ಸಂಸ್ಥೆಯ ಮೂಲಕವೇ ಉತ್ತರ ಪ್ರದೇಶದಲ್ಲಿ ತಮ್ಮದೇ ಬಿಜೆಪಿ ಸರ್ಕಾರವು ಪರೀಕ್ಷೆ ನಡೆಸಿತ್ತು. ಅಕ್ರಮದ ಆರೋಪ ಕೇಳಿಬಂದಿದ್ದ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಮರು ಪರೀಕ್ಷೆಯನ್ನೂ ಆ ಸಂಸ್ಥೆಯ ಮೂಲಕವೇ ನಡೆಸಿತು. ಮಾತ್ರವಲ್ಲ, ಆ ನಂತರ ಕಪ್ಪುಪಟ್ಟಿಗೂ ಸೇರಿಸಿದೆ ಎಂಬುದನ್ನು ಅಮಿತ್ ಶಾ ಮರೆತಿದ್ದರು.
ಮೂರನೆಯದಾಗಿ, ಬಿಹಾರದಲ್ಲಿ ನಿಷೇಧಗೊಂಡಿರುವ, ಉತ್ತರ ಪ್ರದೇಶದಲ್ಲಿ ಕಪ್ಪುಪಟ್ಟಿಗೆ ಸೇರಿರುವ ಈ ಕಂಪನಿಯು ವಾಸ್ತವವಾಗಿ ಗುಜರಾತ್ ಮೂಲದ್ದು. ಈ ಕಂಪನಿಯ ಮುಖ್ಯಸ್ಥರು ಬಿಜೆಪಿ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಮಾತುಗಳಿವೆ. ಇದನ್ನೂ ಅಮಿತ್ ಶಾ ಮರೆದಿದ್ದಾರೆ.
ನಾಲ್ಕನೆಯದಾಗಿ, ಬಿಹಾರ ಸರ್ಕಾರ ಕಪ್ಪುಪಟ್ಟಿಗೆ ಸೇರಿಸಿರುವ ಇದೇ ಕಂಪನಿಯ ಮೂಲಕವೇ ಕೇಂದ್ರ ಸರ್ಕಾರದ ಅಡಿಯಲ್ಲಿರುವ ಸಿಎಸ್‌ಐಆರ್ (ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್), ಸೆಕ್ಷನ್ ಆಫೀಸರ್ (ಎಸ್ಒ) ಹಾಗೂ ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ (ಎಎಸ್ಒ) ಹುದ್ದೆಗಳ ನೇಮಕಾತಿಗೆ ಪರೀಕ್ಷೆಗಳನ್ನು ನಡೆಸಿದೆ. ಈ ಪರೀಕ್ಷೆಗಳಲ್ಲಿಯೂ ಅಕ್ರಮ ನಡೆದಿರುವ ಗಂಭೀರ ಅಕ್ರಮಗಳು ನಡೆದಿರುವ ಆರೋಪಗಳಿವೆ.
ಅಂದರೆ, ದೇಶದ ಗೃಹ ಸಚಿವರು ಪಾರದರ್ಶಕ ಎಂದು ಬಣ್ಣಿಸಿದ ಪರೀಕ್ಷೆ ನಡೆಸಿದ ಸಂಸ್ಥೆಯೇ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರದ ಇತಿಹಾಸವನ್ನು ಹೊಂದಿದೆ. ಆ ಕಂಪನಿಯನ್ನು ನಿಷೇಧಿಸಲಾಗಿದೆ. ಈ ನಿಷೇಧಗಳ ಹೊರತಾಗಿಯೂ, ಕಂಪನಿಯು ಇನ್ನೂ ಹಲವು ರಾಜ್ಯಗಳಲ್ಲಿ ಎಲ್ಲ ಪರೀಕ್ಷೆಗಳನ್ನು ನಡೆಸುತ್ತಿದೆ.
ಈ ಲೇಖನ ಓದಿದ್ದೀರಾ?: ಟಿವಿಯಲ್ಲಲ್ಲ, ಮನೆಯ ಹೊರಗೆ ಯುದ್ಧ ನಡೆಯುತ್ತಿದೆ: ಇರಾನ್-ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರು
ವಾಸ್ತವವಾಗಿ, ಎಜುಟೆಸ್ಟ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಸುರೇಶ್ ಚಂದ್ರ ಆರ್ಯ ಅವರು ‘ಸರ್ವದೇಶಿಕ ಆರ್ಯ ಪ್ರತಿನಿಧಿ ಸಭಾ’ ಎಂಬ ಪ್ರಮುಖ ಹಿಂದು ಸಂಘಟನೆಯ ಅಧ್ಯಕ್ಷರಾಗಿದ್ದಾರೆ. 2018ರಲ್ಲಿ ಸುರೇಶ್ ಚಂದ್ರ ನೇತೃತ್ವದಲ್ಲಿಯೇ ಈ ಸಂಘಟನೆಯು ನಾಲ್ಕು ದಿನಗಳ ಅಂತರರಾಷ್ಟ್ರೀಯ ಆರ್ಯ ಮಹಾ ಸಮ್ಮೇಳನವನ್ನು ಆಯೋಜಿಸಿತ್ತು. ಇದರಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಅನೇಕ ಹಿರಿಯ ನಾಯಕರು ಭಾಗವಹಿಸಿದ್ದರು. ಆಗಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಕೂಡ ಮಹಾ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು.
2023ರ ಫೆಬ್ರವರಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ನಡೆದ ದಯಾನಂದ ಸರಸ್ವತಿಯವರ 200ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆ ಕಾರ್ಯಕ್ರಮದಲ್ಲಿ ಇದೇ ಎಜುಟೆಸ್ಟ್‌ನ ಸುರೇಶ್ ಚಂದ್ರ ಅವರು ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.
ಸುರೇಶ್ ಚಂದ್ರ ಅವರ ಮಗ, ಎಜುಟೆಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ವಿನೀತ್ ಆರ್ಯ ಅವರನ್ನು 2017ರಲ್ಲಿ ಪರೀಕ್ಷಾ ಅಕ್ರಮ ಪ್ರಕರಣವೊಂದರಲ್ಲಿ ಬಂಧಿಸಲಾಗಿತ್ತು. ಆದರೂ, ಕೇಂದ್ರ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳು ಪರೀಕ್ಷೆಗಳನ್ನು ನಡೆಸಲು ಇದೇ ಸಂಸ್ಥೆ ಜೊತೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿವೆ.
ನಿಜವಾಗಿಯೂ, ಅಮಿತ್ ಶಾ ಅವರು ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಪರೀಕ್ಷೆಯ ಇತಿಹಾಸ ಮತ್ತು ಪರೀಕ್ಷೆಯನ್ನು ನಡೆಸಿದ ಕಂಪನಿಯ ಬಗ್ಗೆ ಪರಿಶೀಲಿಸಿದ್ದರೆ, ಅವರು ‘ಭ್ರಷ್ಟಾಚಾರ ಮುಕ್ತ ಪ್ರಕ್ರಿಯೆ’ ಎಂದು ಹೇಳಿಕೊಳ್ಳುವ ಬದಲು ತಮ್ಮದೇ ಸರ್ಕಾರಗಳು ಮಾಡಿದ ಲೋಪಗಳನ್ನು ತೋರಿಸುತ್ತಿದ್ದರೇನೋ. ಕನಿಷ್ಠ, ಕಳಂಕ ಹೊತ್ತಿರುವ ಎಜುಟೆಸ್ಟ್ ಸಂಸ್ಥೆಯನ್ನು ಪಾರದರ್ಶಕ ಎಂದು ಬಣ್ಣಿಸುತ್ತಿರಲಿಲ್ಲ.