ವಿಜಯಪುರ ನಗರದ ಭೂತನಾಳದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದಲ್ಲಿ ಆಹಾರ ದಾಸ್ತಾನು ಕೊರತೆಯಿಂದ ವಿದ್ಯಾರ್ಥಿಗಳು ಉಪವಾಸ ಕುಳಿತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಿಗ್ಗೆ ವಸತಿ ನಿಲಯದಲ್ಲಿ ಊಟದ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ವಸತಿ ನಿಲಯದ ಅವಸ್ಥೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯ ಬೇಜವಾಬ್ದಾರಿ ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರು ವಸತಿ ನಿಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
“ಸುಮಾರು ಐದು ತಿಂಗಳುಗಳಿಂದ ಆಹಾರ ಸರಬರಾಜು ಟೆಂಡರ್ದಾರರು ವಸತಿ ನಿಲಯಕ್ಕೆ ಸರಿಯಾಗಿ ಆಹಾರ ಸರಬರಾಜು ಮಾಡುತ್ತಿಲ್ಲ. ಇಷ್ಟಾದರೂ ಎಚ್ಚೆತ್ತುಕೊಳ್ಳದ ಇಲಾಖೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ವಿಫಲವಾಗಿರುವುದು ಖಂಡನೀಯ” ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಅಕ್ಷಯ ಕುಮಾರ ದೂರಿದರು.
“ಆಹಾರ ದಾಸ್ತಾನು ಟೆಂಡರ್ ಪಡೆದ ಟೆಂಡರ್ದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಟೆಂಡರ್ ರದ್ದುಗೊಳಿಸಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮಣಿಪಾಲ | ಅನಧಿಕೃತ ನಂಬರ್ ಪ್ಲೇಟ್, ಕಿಟಕಿ ಟಿಂಟ್ ಅಳವಡಿಕೆ; ಕಾರು ಚಾಲಕನ ವಿರುದ್ಧ ಎಫ್ಐಆರ್
ಪ್ರತಿಭಟನಾನಿರತ ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಹಾದೇವ ಚಲವಾದಿ, ವಿದ್ಯಾರ್ಥಿ ಪರಿಷತ್ ಮುಖಂಡರಾದ ದಾವೂದ್ ನಾಯ್ಕೋಡಿ, ಸಂದೇಶ್ ಕುಮಟ್ಗಗೀ, ಶಂಕರ ಬಸರಗಿ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.