ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಪೌಂಟಾ ಸಾಹಿಬ್ ಪ್ರದೇಶದ ಗ್ರಾಮಗಳಲ್ಲಿ ಕಳೆದ ವಾರ ಕೋಮು ಸಂಘರ್ಷ ನಡೆದಿದೆ. ಗಲಾಟೆಯಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ನಿಷೇಧಾಜ್ಞೆ ಹೇರಲಾಗಿದೆ. ಗ್ರಾಮಗಳಲ್ಲಿ ಪರಿಸ್ಥಿತಿ ಇನ್ನೂ ಶಾಂತವಾಗದ ಕಾರಣ, ನಿಷೇಧಾಜ್ಞೆಯನ್ನು ಇನ್ನೂ ಆರು ದಿನ (ಜೂನ್ 26ರವರೆಗೆ) ವಿಸ್ತರಿಸಿ ಅಲ್ಲಿನ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಜೂನ್ 13ರಂದು ಹಿಂದು-ಮುಸ್ಲಿಂ ಸಮುದಾಯ ಅಂತರ್ಧಮೀಯ ಪ್ರೇಮಿಗಳು ಊರು ತೊರೆದು ಹೋಗಿದ್ದಾರೆ. ಘಟನೆಯಿಂದಾಗಿ, ಅಂದು ಹಿಂದು-ಮುಸ್ಲಿಂ ಸಮುದಾಯಗಳ ನಡುವೆ ಘರ್ಷಣೆ ನಡೆದಿದೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈಗಲೂ, ಗಲಭೆ ನಡೆಯಬಹುದಾದ ವಾತವಾರಣವೇ ಇದೆ ಎಂದು ಹೇಳಲಾಗುತ್ತಿದೆ.
“ಗ್ರಾಮಗಳಲ್ಲಿ ಭುಗಿಲೆದ್ದಿರುವ ಕೋಮು ಉದ್ವಿಗ್ನತೆ ಮತ್ತು ಅಸ್ಥಿರ ಕಾನೂನು-ಸುವ್ಯವಸ್ಥೆಯ ಕಾರಣದಿಂದಾಗಿ, ಪೋಂಟಾ ಉಪವಿಭಾಗದ ಮಜ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಕಿರಾತ್‌ಪುರ, ಮಾಲಿಯನ್, ಫತೇಪುರ್, ಮಿಸ್ಸರ್‌ವಾಲಾ ಹಾಗೂ ಮಜ್ರಾ – ಐದು ಗ್ರಾಮಗಳಲ್ಲಿ ಜೂನ್ 13ರಿಂದ ನಿಷೇಧಾಜ್ಞೆ ಜಾರಿಯಲ್ಲಿದೆ. ಜೂನ್ 26 ರವರೆಗೆ ನಿಷೇಧಾಜ್ಞೆ ಮುಂದುವರೆಯಲಿದೆ” ಎಂದು ಸಿರ್ಮೌರ್ ಜಿಲ್ಲಾಧಿಕಾರಿ ಪ್ರಿಯಾಂಕಾ ವರ್ಮಾ ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಟಿವಿಯಲ್ಲಲ್ಲ, ಮನೆಯ ಹೊರಗೆ ಯುದ್ಧ ನಡೆಯುತ್ತಿದೆ: ಇರಾನ್-ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರು
ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS)-2023ರ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಲಾಗಿದೆ. ಕಾಯ್ದೆಯ ಅಡಿಯಲ್ಲಿ ನಿಷೇಧಾಜ್ಞೆ ಇರುವ ಗ್ರಾಮಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮಾರಕ ಆಯುಧಗಳನ್ನು ರವಾನಿಸುವುದು, ಸಾರ್ವಜನಿಕ ರ್‍ಯಾಲಿ, ಮೆರವಣಿಗೆ ಅಥವಾ ಉಪವಾಸ ಸತ್ಯಾಗ್ರಹ, ಬೆಂಕಿ ಹೊತ್ತಿಸುವುಂತಹ ವಸ್ತುಗಳನ್ನು ಸಾಗಿಸುವುದು, ಕಲ್ಲು ತೂರಾಟ ಅಥವಾ ಯಾವುದೇ ಆಕ್ಷೇಪಾರ್ಹ ವಸ್ತುಗಳನ್ನು ಸಾಗಿಸುವುದು ಹಾಗೂ ಪ್ರಚೋದನಕಾರಿ ಭಾಷಣಗಳು ಅಥವಾ ಕೋಮು ಅಥವಾ ರಾಜ್ಯ ವಿರೋಧಿ ಹೇಳಿಕೆ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕೋಮು ಸಂಘರ್ಷಕ್ಕೆ ಸಂಬಂಧಿಸಿದಂತೆ ಈವರೆಗೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಬಿಜೆಪಿ ರಾಜ್ಯ ಮುಖ್ಯಸ್ಥ ರಾಜೀವ್ ಬಿಂದಾಲ್ ಮತ್ತು ಪೋಂಟಾದ ಬಿಜೆಪಿ ಶಾಸಕ ಸುಖ್‌ರಾಮ್ ಚೌಧರಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಇಬ್ಬರಿಗೂ ಮಧ್ಯಂತರ ಜಾಮೀನು ತೊರೆತಿದ್ದು, ಬಂಧನದಿಂದ ಪಾರಾಗಿದ್ದಾರೆ.