ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ನೀಡುವ 2025ನೇ ಸಾಲಿನ ಬಾಲ ಪುರಸ್ಕಾರ ಪ್ರಶಸ್ತಿ ಬಳ್ಳಾರಿ ತಾಲೂಕಿನ ಹಂದಿಹಾಳ ಗ್ರಾಮದ ಶಿಕ್ಷಕ, ಮಕ್ಕಳ ಸಾಹಿತಿ ಡಾ. ಹಂದಿಹಾಳು ಶಿವಲಿಂಗಪ್ಪರಿಗೆ ಲಭಿಸಿದೆ.
ಹಂದಿಹಾಳು ಗ್ರಾಮದ ಶಿಕ್ಷಕ ಡಾ. ಶಿವಲಿಂಗಪ್ಪ ಅವರ ಮಕ್ಕಳ ಕಥಾ ಸಂಕಲನ “ನೋಟ್ ಬುಕ್” ಮಕ್ಕಳ ಸಾಹಿತ್ಯ ಕೃತಿಗೆ ಈ ಬಾಲ ಸಾಹಿತ್ಯ ಪುರಸ್ಕಾರ ದೊರೆತಿದೆ.
‘ನೋಟ್‌ಬುಕ್’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಪ್ರಶಸ್ತಿ, ವೀಚಿ ಪ್ರಶಸ್ತಿ ಲಭಿಸಿದೆ.
ಕೃತಿಗಳು: ನಾನು ಮತ್ತು ಕನ್ನಡಕ (ಕವನ ಸಂಕಲನ), ಎಳೆಬಿಸಿಲು (ಮಕ್ಕಳ ಸಾಹಿತ್ಯ ಸಂಪದ), ಶಾವೋಲಿನ್ (ಇಂಗ್ಲಿಷ್ ಮೂಲ ಮಕ್ಕಳ ಕತೆಗಳು), ಆನಂದಾವಲೋಕನ (ಭಾರತೀಯ ಮಕ್ಕಳ ಸಾಹಿತ್ಯ ಕುರಿತು), ಬಳ್ಳಾರಿಯ ಬೆಡಗು (ಪ್ರಾತಿನಿಧಿಕ ಕತಾ ಸಂಕಲನ), ದಿ ಯಂಗ್ ಸೈಂಟಿಸ್ಟ್, (ಮಕ್ಕಳ ಕಾದಂಬರಿ) ಕೃತಿಗಳನ್ನು ರಚಿಸಿದ್ದಾರೆ.
ಪ್ರಶಸ್ತಿ-ಪುರಸ್ಕಾರಗಳು: ಅವರ ಶಾವೋಲಿನ್ ಕೃತಿಗೆ ಜಿ.ಬಿ.ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ‘ನಾನು ಮತ್ತು ಕನ್ನಡಕ’ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯ (2010), ಕರವೇ ನಲ್ನುಡಿ ಕತಾ ಪ್ರಶಸ್ತಿ (2012), ಆಜೂರು ಪ್ರತಿಷ್ಠಾನ ಪ್ರಶಸ್ತಿ (2017), ಅಷ್ಠ ದಿಗ್ಗಜ ಪ್ರಶಸ್ತಿ (2017), ಹೈದರಾಬಾದಿನ ಗುತ್ತಿ ನಾರಾಯಣರೆಡ್ಡಿ ತೆಲುಗು ಪೀಠಂ ವತಿಯಿಂದ, ಮಕ್ಕಳ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ‘ರಾಜ್ಯ ಮಟ್ಟದ ಸಾಹಿತ್ಯ ಸಿರಿ ಪ್ರಶಸ್ತಿ’ 2020, ಶ್ರೀ ಕೃಷ್ಣ ದೇವರಾಯ ವಂಶಸ್ಥರಿಂದ ಕೊಡಲ್ಪಟ್ಟ ರಾಷ್ಟ್ರೀಯ ಪ್ರಶಸ್ತಿ ಲಭಿಸಿವೆ.
ಇದನ್ನೂ ಓದಿ: ಬಳ್ಳಾರಿ | ಜೂ.25ರೊಳಗೆ ತುಂಗಭದ್ರಾ ಜಲಾಶಯದ ಮೂರೂ ಕಾಲುವೆಗಳಿಗೆ ನೀರು ಬಿಡಿ: ಕರೂರ್ ಮಾಧವ ರೆಡ್ಡಿ
“ಶಿವಲಿಂಗಪ್ಪ ಹಳ್ಳಿಯಲ್ಲಿ ಬೆಳೆದವರು. ಅವರು ಬೋಧಿಸುವ ಶಾಲೆಯೂ ಹಳ್ಳಿಯದೇ ಆಗಿದೆ. ಹಳ್ಳಿಯ ಮಕ್ಕಳ ಕಷ್ಟ, ಸಂತಸ, ಕನಸುಗಳೊಂದಿಗೆ ಗ್ರಾಮೀಣ ಮಕ್ಕಳ ವಾಸ್ತವ ಚಿತ್ರಣವನ್ನು ಹಿತವಾದ ಕಲ್ಪನಾ ಲೋಕದೊಂದಿಗೆ ಕಥೆಗಳಲ್ಲಿ ವಿಸ್ತರಿಸಿದ್ದಾರೆ. ಮಕ್ಕಳನ್ನು ಹಾಗೂ ತನ್ನ ವೃತ್ತಿಯನ್ನು ಪ್ರೀತಿಸುವ ಶಿಕ್ಷಕ ಮಕ್ಕಳ ಒಳಿತಿಗಾಗಿ ಏನೇನೋ ಪ್ರಯತ್ನದಲ್ಲಿ ತೊಡಗುತ್ತಾರೆ. ಮಕ್ಕಳ ಸಾಹಿತ್ಯವನ್ನು ಸದಾ ತಮ್ಮ ತುಡಿತವಾಗಿಸಿಕೊಂಡವರು. ಬಹಳಷ್ಟು ಸಾರಿ ಅದರ ಕುರಿತಾಗಿಯೇ ಮಾತಿಗಿಳಿಯುತ್ತಾರೆ. ಅವರು ‘ಕನ್ನಡ ಮಕ್ಕಳ ಸಾಹಿತ್ಯ: ಫ್ಯಾಂಟಸಿಯ ಸ್ವರೂಪ’ ವಿಷಯದ ಕುರಿತಾಗಿ ಆಳವಾದ ಅಧ್ಯಯನದೊಂದಿಗೆ ಪಿಎಚ್‍ಡಿ ಪದವಿ ಪಡೆದಿದ್ದಾರೆ” ಎಂದು ಸಾಹಿತಿ ವಿರೇಂದ್ರ ರಾವಿಹಾಳ ಹೇಳಿದರು.