ಶಿವಮೊಗ್ಗ ಜಿಲ್ಲೆಯಲ್ಲಿ ಕೋಮು ಸಂಘರ್ಷ ನಿಗ್ರಹಕ್ಕೆ ರಾಜ್ಯ ಸರ್ಕಾರ ಇತ್ತೀಚೆಗೆ ಅಸ್ತಿತ್ವಕ್ಕೆ ತಂದಿರುವ, ವಿಶೇಷ ಕಾರ್ಯಪಡೆ ಪೊಲೀಸರು ಜೂನ್ 19 ರ ಸಂಜೆ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದ್ದಾರೆ.ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ‘ಕಾನೂನು – ಸುವ್ಯವಸ್ಥೆ ಕಾಪಾಡಲು ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ, ವಿಶೇಷ ಪಥ ಸಂಚಲನ ನಡೆಸಲಾಗಿದೆ ಎಂದು ತಿಳಿಸಿದೆ.

ಎಎ ವೃತ್ತದಿಂದ ಆರಂಭವಾದ ಪಥ ಸಂಚಲನವು ಎಂಕೆಕೆ ರಸ್ತೆ, ಸಿದ್ದಯ್ಯ ವೃತ್ತ, ಬಿ ಬಿ ರಸ್ತೆ, ಸೀಗೆಹಟ್ಟಿ, ಬೈಪಾಸ್ ರಸ್ತೆ, ನ್ಯೂ ಮಂಡ್ಲಿ, ಇಮಾಮ್ ಬಾಡ, ಇಲಿಯಾಸ್ ನಗರ,ಆರ್.ಎಂ.ಎಲ್ ನಗರ, ಟೆಂಪೋ ಸ್ಟ್ಯಾಂಡ್, ಓ ಟಿ ರಸ್ತೆ ಮುಖಾಂತರ ಮತ್ತೆ ಎ ಎ ವೃತ್ತದಲ್ಲಿಯೇ ಅಂತ್ಯಗೊಂಡಿದೆ.ಸದರಿ ಪಥ ಸಂಚಲನದಲ್ಲಿ ವಿಶೇಷ ಕಾರ್ಯಪಡೆಯ ಅಧಿಕಾರಿ – ಸಿಬ್ಬಂದಿಗಳು ಹಾಗೂ ಶಿವಮೊಗ್ಗ ನಗರದ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳು ಭಾಗಿಯಾಗಿದ್ದರು ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಏನಿದು ಪಡೆ? : ದೇಶದಲ್ಲಿಯೇ ಮೊದಲ ಬಾರಿಗೆ ಕೋಮು ಸಂಘರ್ಷ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕೋಮು ಸಂಘರ್ಷ ನಿಗ್ರಹ ಪಡೆ ರಚಿಸಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ನೂತನ ಪಡೆಯ ಕಚೇರಿ ಉದ್ಘಾಟನೆ ಮಾಡಲಾಗಿತ್ತು.ಮಂಗಳೂರು, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮು ಸಂಘರ್ಷ ಮಟ್ಟ ಹಾಕುವ ಉದ್ದೇಶದಿಂದ ಸದರಿ ಪಡೆಯನ್ನು ರಾಜ್ಯ ಸರ್ಕಾರ ರಚನೆ ಮಾಡಿದೆ. ಸದರಿ ಪಡೆಯಲ್ಲಿ 248 ಸಿಬ್ಬಂದಿಗಳಿದ್ದು, ಮೂರು ತುಕಡಿಗಳಲ್ಲಿ ಕಾರ್ಯ ನಿರ್ವಹಿಸಲಿದೆ.ಸದರಿ ಪಡೆ ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿ ಗಮನ ಸೆಳೆದಿದೆ.
