"ಹಿಂದುಳಿದ ಯಾದಗಿರಿ ಜಿಲ್ಲೆಯಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದ್ದು, ಇದನ್ನು ಬೇರು ಸಹಿತ ಕಿತ್ತು ಹಾಕಬೇಕಾದರೆ ಎಲ್ಲರ ಸಹಕಾರ ಬೇಕು" ಎಂದಿದ್ದಾರೆ ಸಂತ್ರಸ್ತ ದುರ್ಗಪ್ಪ.
“ನಿನ್ ಜಾತಿ ಯಾವ್ದು..? ನಿನ್ನ ಜಾತಿ ಯಾವ್ದು ಹೇಳಲೇ? ನೀನು ಮಾದಾರನ್ (ಮಾದಿಗ) ಹೌದೋ, ಅಲ್ವೋ? ನಾವು ಕುರುಬರು” ಎಂದು ದಲಿತ ಯುವಕರಿಬ್ಬರ ಮೇಲೆ ದೌರ್ಜನ್ಯ ಎಸಗಿರುವ ಸಂಬಂಧ ಯಾದಗಿರಿ ಜಿಲ್ಲೆಯ ಸುರಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರಸ್ತೆಯಲ್ಲಿ ಅಡ್ಡಗಟ್ಟಿ ನಿಂತು, ಜಾತಿ ನಿಂದನೆ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ರಾಜ್ಯದಲ್ಲಿ ಹೆಚ್ಚಾಗುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ನಾಗರಿಕ ಸಮಾಜ ಆಕ್ರೋಶ ಹೊರಹಾಕಿದೆ. ಘಟನೆಯ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ.
ಏನಿದು ಘಟನೆ?
ವೃತ್ತಿಯಲ್ಲಿ ವಕೀಲರಾಗಿದ್ದು, ಮಾದಿಗ ಸಮುದಾಯಕ್ಕೆ ಸೇರಿದ ದುರ್ಗಪ್ಪ ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಸುರಪುರ ತಾಲ್ಲೂಕಿನ ನಾಗರಾಳ ಗ್ರಾಮದ ನಿವಾಸಿಯಾದ ದುರ್ಗಪ್ಪ ಅವರು 17ನೇ ತಾರೀಖಿನಂದು ತಮ್ಮ ಗ್ರಾಮಕ್ಕೆ ಬರುತ್ತಿದ್ದರು. ಸಮಯ ಸಂಜೆ 6.30 ಆಗಿತ್ತು. ದುರ್ಗಪ್ಪ ಅವರ ಮಾವನಾದ ವಿಜಯಕುಮಾರ್ ಅವರೂ ಜೊತೆಯಲ್ಲಿದ್ದರು. ಊರಿನ ಕ್ರಾಸ್ ಹತ್ತಿರದಲ್ಲಿನ ಬಲಭೀಮ ಎಂಬವರ ಅಂಗಡಿ ಬಳಿ ನಡೆದುಕೊಂಡು ಹೋಗುತ್ತಿದ್ದರು. ಕುರುಬ ಜಾತಿಗೆ ಸೇರಿದ ಮಲ್ಲಯ್ಯ ಮತ್ತು ಅರ್ಜುನ್ ಎಂಬವರು ಆ ಸಮಯದಲ್ಲಿ ಅಲ್ಲಿಯೇ ಮಾತನಾಡುತ್ತಾ ಕೂತಿದ್ದರು. ಇವರನ್ನು ಕಂಡ ಕೂಡಲೇ ದಾರಿಗೆ ಅಡ್ಡಗಟ್ಟಿ ನಿಂತರು.
ದುರ್ಗಪ್ಪ ಅವರ ಜಾತಿಯನ್ನು ಕೆಟ್ಟ ಪದಗಳಿಂದ ನಿಂದಿಸುತ್ತಾ, “ನಮ್ಮ ಎದುರಿಗೆ ಹೋಗುವುದಕ್ಕೆ ಎಷ್ಟು ಸೊಕ್ಕು? …. ಮಕ್ಕಳೇ ಇಲ್ಲಿ ತಿರುಗಾಡಿದರೆ ನಿಮ್ಮ ಕಾಲು ಕಡಿಯುತ್ತೇವೆ” ಎಂದು ಕೊಲೆ ಬೆದರಿಕೆ ಹಾಕಿದ್ದಾರೆ. ಮುಂದುವರಿದು ಆರೋಪಿ ಅರ್ಜುನನು ದುರ್ಗಪ್ಪ ಅವರ ಶರ್ಟ್ ಹಿಡಿದನು. ಆರೋಪಿ ಮಲ್ಲಯ್ಯನು ತನ್ನ ಎಡಗಾಲಿನ ಚಪ್ಪಲಿ ಬಿಚ್ಚಿ ತಲೆಗೆ ಹೊಡೆದಿದ್ದಾನೆ. ದುರ್ಗಪ್ಪ ಅವರ ಜೊತೆಯಲ್ಲಿದ್ದ ವಿಜಯಕುಮಾರ್ ಅವರು ಬಿಡಿಸಲು ಹೋಗಿದ್ದಾರೆ. ಆಗ ಮಲ್ಲಯ್ಯನು ವಿಜಯಕುಮಾರ್ ಅವರ ಶರ್ಟ್ ಹಿಡಿದು ಹರಿದು ಹಾಕಿದ್ದಾನೆ.
ಇದನ್ನೂ ಓದಿರಿ: ಕಾಲ್ತುಳಿತ ತಡೆಗೆ ಹೊಸ ಕಾನೂನು: ಆಯೋಜಕರಿಗೆ ಜೈಲು ಶಿಕ್ಷೆ, 5 ಲಕ್ಷ ರೂ. ದಂಡ
ನಂತರ ಇವರಿಬ್ಬರನ್ನೂ ನೆಲಕ್ಕೆ ಕೆಡವಿ ಕಾಲಿನಿಂದ ತುಳಿದಿದ್ದಾರೆ. ಆಗ ಸಂತ್ರಸ್ತರು ಚೀರಾಡಿದ್ದು, ಅಲ್ಲಿಯೇ ಇದ್ದ ಪ್ರಭು ಮತ್ತು ಶಿವರಾಜ್ ಎಂಬವರು ಬಂದು ಬಿಡಿಸಿದ್ದಾರೆ. ಹೊಡೆಯುವುದನ್ನು ನಿಲ್ಲಿಸಿದ ಆರೋಪಿಗಳು, “ಮಾದಿಗ …… ಮಕ್ಕಳೇ, ಇವತ್ತು ಉಳಿದುಕೊಂಡಿದ್ದೀರಿ. ಇನ್ನೊಂದು ಸಲ ಸಿಕ್ಕರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾರೆ.
ಬಳಿಕ ಸಂತ್ರಸ್ತರು ಸುರಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚೇತರಿಸಿಕೊಂಡ ನಂತರ ಸುರಪುರ ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದಾರೆ. ಇದರ ಅನ್ವಯ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2), 118(1), 126(2), 133, 352, 351(2), 3(5) ಮತ್ತು ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(1)(s), 3(2)(v-a) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿರಿ: ದಾವಣಗೆರೆ | ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ದುರುಪಯೋಗದ ವಿರುದ್ಧ ಕಾನೂನಾತ್ಮಕ ಕ್ರಮ; ಎಸ್ಪಿ ಉಮಾ ಪ್ರಶಾಂತ್
‘ಈ ದಿನ ಡಾಟ್ ಕಾಮ್’ ಜೊತೆ ಮಾತನಾಡಿದ ದುರ್ಗಪ್ಪ ಅವರು, “ಇನ್ನೂ ಜಾತಿ ವೈಷಮ್ಯಗಳು ಭಾರತದಲ್ಲಿ ಜೀವಂತವಾಗಿವೆ ಎಂಬುದನ್ನು ಇಂತಹ ಘಟನೆಗಳು ತೋರಿಸುತ್ತವೆ. ಸರ್ಕಾರ ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮತ್ತಷ್ಟು ಬಿಗಿಯಾದ ಕಾನೂನನ್ನು ತರಬೇಕು. ವಕೀಲನಾದ ನನಗೆಯೇ ಈ ರೀತಿ ಆಗುತ್ತಿದೆ ಅಂದರೆ, ಜನಸಾಮಾನ್ಯರ ಗತಿ ಏನಾಗಬಹುದು?” ಎಂದು ಪ್ರಶ್ನಿಸಿದರು.
“ಹಿಂದುಳಿದ ಯಾದಗಿರಿ ಜಿಲ್ಲೆಯಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಈ ಅಸ್ಪೃಶ್ಯತೆಯನ್ನು ಬೇರು ಸಹಿತ ಕಿತ್ತು ಹಾಕಬೇಕಾದರೆ ಎಲ್ಲರ ಸಹಕಾರ ಬೇಕು. ಆರೋಪಿಗಳನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆಂಬ ಮಾಹಿತಿಯೂ ಇದೆ” ಎಂದರು.