ಬಿಹಾರಕ್ಕೆ ಭರಪೂರ ಮೋದಿ ಕೊಡುಗೆ: ಚುನಾವಣೆ ಸಂದರ್ಭದಲ್ಲಿ ಮಾತ್ರ ನೆನಪಾಗುವುದೇಕೆ?

Date:

Advertisements
ಬಿಹಾರ ಅಥವಾ ಇತರೆ ರಾಜ್ಯಗಳು ಕೇವಲ ಚುನಾವಣೆ ಸಮಯದಲ್ಲಿ ನೆನಪಾಗಬಾರದು. ಮತದಾರರು ಯಾವ ಮಾತುಗಳು ಎಷ್ಟು ಕಾರ್ಯರೂಪಕ್ಕೆ ಬರುತ್ತವೆ, ಯಾವ ಪ್ಯಾಕೇಜ್‌ಗಳು ಕೇವಲ ಮಾತುಗಳಿಗೆ ಸೀಮಿತವಾಗುತ್ತವೆ ಎಂಬುದನ್ನು ಗಮನಿಸುತ್ತಾರೆ...

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಚುನಾವಣೆಯ ಸಂದರ್ಭದಲ್ಲಿ ರಾಜ್ಯಗಳಿಗೆ ದೊಡ್ಡ ಪ್ರಮಾಣದ ಆರ್ಥಿಕ ಪ್ಯಾಕೇಜ್‌ಗಳು, ಅಭಿವೃದ್ಧಿ ಯೋಜನೆಗಳು ಮತ್ತು ನೆರವುಗಳನ್ನು ಘೋಷಿಸುತ್ತಿರುವುದು ಪ್ರತಿ ಚುನಾವಣೆಯಲ್ಲಿ ಸಾಬೀತಾಗುತ್ತಿದೆ. ಮುಂದಿನ ಅಕ್ಟೋಬರ್‌ನಲ್ಲಿ ಪ್ರಮುಖ ರಾಜ್ಯವಾದ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಗಣನೀಯ ಪ್ರಮಾಣದಲ್ಲಿ ಆರ್ಥಿಕ ನೆರವು ಹಾಗೂ ಯೋಜನೆಗಳನ್ನು ಘೋಷಿಸಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಕಳೆದ 11 ವರ್ಷದ ಹಿಂದೆ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿ ಮತ್ತು ಅದರ ಮೈತ್ರಿಕೂಟವಾದ ಎನ್‌ಡಿಎ ಆಡಳಿತದಲ್ಲಿರುವ ರಾಜ್ಯಗಳಿಗೆ ಹೆಚ್ಚು ಆರ್ಥಿಕ ನೆರವನ್ನು ನೀಡುತ್ತಾ ಬಂದಿದೆ.

ಬಿಹಾರವು ಭಾರತದ ರಾಜಕೀಯದಲ್ಲಿ ಒಂದು ನಿರ್ಣಾಯಕ ರಾಜ್ಯವಾಗಿದೆ. 13 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಈ ರಾಜ್ಯವು ಲೋಕಸಭೆಯಲ್ಲಿ 40 ಸ್ಥಾನಗಳನ್ನು ಹೊಂದಿದ್ದು, ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಹಾರದ ಸಿವಾನ್‌ ನಗರದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಘೋಷಣೆಯು ಬಿಹಾರದ ವಿಧಾನಸಭಾ ಚುನಾವಣೆಗೆ ಸಮೀಪವಾಗಿರುವುದರಿಂದ ರಾಜಕೀಯ ಲಾಭಕ್ಕಾಗಿ ಮಾಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಎನ್‌ಡಿಎ ಮೈತ್ರಿಕೂಟದ ಪ್ರಮುಖ ಭಾಗವಾದ ಜೆಡಿಯು ಜೊತೆಗಿನ ಸಂಬಂಧವನ್ನು ಬಲಪಡಿಸುವ ಉದ್ದೇಶವೂ ಇದರ ಹಿಂದಿರಬಹುದು ಎಂದು ಹೇಳಲಾದರೂ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಭದ್ರಪಡಿಸಿಕೊಳ್ಳುವುದು ಮತ್ತೊಂದು ಕಾರಣ ಎನ್ನಲಾಗುತ್ತಿದೆ.

ಕೇಂದ್ರ ಸರ್ಕಾರದ ಈ ಧೋರಣೆಯನ್ನು ಗಮನಿಸಿದಾಗ, ಚುನಾವಣೆಯ ಸಂದರ್ಭದಲ್ಲಿ ರಾಜ್ಯಗಳಿಗೆ ಆರ್ಥಿಕ ನೆರವು ಘೋಷಿಸುವುದು ಹೊಸದೇನಲ್ಲ. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಬಿಹಾರಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್‌ಗಳನ್ನು ಘೋಷಿಸಲಾಗಿತ್ತು. 2015ರ ಬಿಹಾರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ, ಪ್ರಧಾನಿಯವರು 1.25 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಪ್ಯಾಕೇಜ್‌ನ್ನು ಘೋಷಿಸಿದ್ದರು. ಇವೆಲ್ಲವನ್ನು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಲಾಗಿತ್ತು.

Advertisements

ಬಿಹಾರದ ಜೊತೆಗೆ, ಇತರೆ ಬಿಜೆಪಿ ಹಾಗೂ ಎನ್‌ಡಿಎ ಆಡಳಿತದ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್‌ನಂತಹ ರಾಜ್ಯಗಳಿಗೂ ಕೇಂದ್ರ ಸರ್ಕಾರವು ಗಣನೀಯ ಪ್ರಮಾಣದಲ್ಲಿ ನೆರವುಗಳನ್ನು ಒದಗಿಸಿದೆ. ಉತ್ತರ ಪ್ರದೇಶದಲ್ಲಿ 2017 ಮತ್ತು 2022ರ ವಿಧಾನಸಭಾ ಚುನಾವಣೆಗಳ ಮೊದಲು, ಕೇಂದ್ರ ಸರ್ಕಾರವು ಹಲವಾರು ಮೂಲಸೌಕರ್ಯ ಯೋಜನೆಗಳು, ರೈತರಿಗೆ ಸಾಲಮನ್ನಾ ಮತ್ತು ಆರ್ಥಿಕ ಪ್ಯಾಕೇಜ್‌ಗಳನ್ನು ಘೋಷಿಸಿತು. ಇದರಿಂದ ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಲು ಬಿಜೆಪಿಗೆ ಸಹಾಯವಾಯಿತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಇದೇ ರೀತಿಯಾಗಿ, ಮಧ್ಯಪ್ರದೇಶದ 2023ರ ವಿಧಾನಸಭಾ ಚುನಾವಣೆಯ ಮೊದಲು, ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ‘ಲಾಡ್ಲಿ ಬೆಹನಾ’ನಂತಹ ಯೋಜನೆಗಳನ್ನು ಜಾರಿಗೆ ತಂದು, ಮಹಿಳಾ ಮತದಾರರನ್ನು ಸೆಳೆಯಲು ಪ್ರಯತ್ನಿಸಲಾಯಿತು. ಈ ಯೋಜನೆಯ ಮೂಲಕ ಅರ್ಹ ಮಹಿಳೆಯರಿಗೆ ಮಾಸಿಕ 1250 ರೂಪಾಯಿಗಳ ಆರ್ಥಿಕ ನೆರವನ್ನು ಒದಗಿಸಲಾಯಿತು, ಇದು ಬಿಜೆಪಿಯ ಸ್ವಲ್ಪ ಮಟ್ಟಿನ ಲಾಭ ತಂದುಕೊಟ್ಟಿತು ಎಂದು ಹೇಳಲಾಗುತ್ತಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೌಢ್ಯ ಬಿತ್ತುವ ಕಾವೇರಿ ಆರತಿ ಯಾವ ಪುರುಷಾರ್ಥಕ್ಕೆ?

ಈ ರೀತಿಯ ಆರ್ಥಿಕ ನೆರವುಗಳು ಚುನಾವಣೆಯ ಸಂದರ್ಭದಲ್ಲಿ ಮಾತ್ರವೇ ರಾಜ್ಯಗಳಿಗೆ ನೆನಪಾಗುವಂತೆ ಘೋಷಣೆಯಾಗುತ್ತವೆ. ಅಲ್ಲದೆ ಎನ್‌ಡಿಎ ಆಡಳಿತದ ರಾಜ್ಯಗಳಿಗೆ ಸಂಬಂಧಿಸಿದಂತೆ ಹೆಚ್ಚು ಕೇಳಿಬರುತ್ತದೆ. ಕೇಂದ್ರ ಸರ್ಕಾರವು ಎನ್‌ಡಿಎ ಆಡಳಿತದ ರಾಜ್ಯಗಳಿಗೆ ಆದ್ಯತೆ ನೀಡುವ ಮೂಲಕ, ವಿರೋಧ ಪಕ್ಷಗಳ ಆಡಳಿತದ ರಾಜ್ಯಗಳು ಹಾಗೂ ದಕ್ಷಿಣದ ರಾಜ್ಯಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಾ ಬಂದಿದೆ. ಆಂಧ್ರಪ್ರದೇಶದಂತಹ ರಾಜ್ಯಗಳು, ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದರೂ, 2025ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರದಿಂದ ಗಮನಾರ್ಹ ನೆರವು ಅಥವಾ ಯೋಜನೆಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರದ ಇಂತಹ ಧೋರಣೆಗಳು ಒಕ್ಕೂಟ ವ್ಯವಸ್ಥೆಯ ಸಾಮಾಜಿಕ ನ್ಯಾಯ ತತ್ವಕ್ಕೆ ಧಕ್ಕೆ ಉಂಟುಮಾಡುತ್ತವೆ. ಎಲ್ಲ ರಾಜ್ಯಗಳಿಗೂ ಸಮಾನವಾಗಿ ಆದ್ಯತೆ ನೀಡಬೇಕೆಂಬ ಸಂವಿಧಾನದ ಆಶಯವನ್ನು ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಉಲ್ಲಂಘಿಸುತ್ತ ಬಂದಿದೆ.

ಕೇಂದ್ರ ಸರ್ಕಾರದ ಚುನಾವಣಾ ಘೋಷಣೆಗಳು ಕೇವಲ ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಮಾಡಲಾಗುವುದರಿಂದ, ಈ ಯೋಜನೆಗಳು ಜಾರಿಗೆ ಬಂದ ನಂತರವೂ ಅವುಗಳು ಜನರಿಗೆ ದೀರ್ಘಕಾಲೀನ ಪ್ರಯೋಜನವನ್ನು ಒದಗಿಸುವ ಸಾಧ್ಯತೆ ಕಡಿಮೆ. ಬಿಹಾರದಲ್ಲಿ ಘೋಷಿತವಾದ ಕೆಲವು ಯೋಜನೆಗಳಾದ ಸ್ಮಾರ್ಟ್ ಸಿಟಿ ಮತ್ತು ವಿಶೇಷ ಆರ್ಥಿಕ ಪ್ಯಾಕೇಜ್‌ಗಳು ಚುನಾವಣೆಯ ನಂತರ ಜಾರಿಗೆ ಬಂದಿಲ್ಲ ಎಂಬ ಆರೋಪವಿದೆ. ಅಲ್ಲದೆ ಇಂತಹ ಕಾರ್ಯತಂತ್ರಗಳು ರಾಜಕೀಯ ಭ್ರಷ್ಟಾಚಾರದ ಒಂದು ರೂಪವಾಗಿ ಕಾಣಿಸಿಕೊಳ್ಳುತ್ತವೆ. ಏಕೆಂದರೆ ಕೇಂದ್ರ ಸರ್ಕಾರದ ಸಂಪನ್ಮೂಲಗಳನ್ನು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತದೆ. ಸ್ವತಃ ಬಿಜೆಪಿ ರಾಜ್ಯಗಳಲ್ಲಿ ಘೋಷಿಸಲಾದ ಹಲವು ಯೋಜನೆಗಳು ಚುನಾವಣೆಯಲ್ಲಿ ಪಕ್ಷವು ವಿಜಯ ಸಾಧಿಸಿದ ನಂತರ ಕಾರ್ಯಗತಗೊಳ್ಳಲಿಲ್ಲ. ಆದ್ದರಿಂದ ಕೇಂದ್ರ ಸರ್ಕಾರದ ಈ ತಂತ್ರವು ಕೇವಲ ರಾಜಕೀಯ ಒಲೈಕೆಗಾಗಿ ಮಾಡಲಾದ ಒಂದು ತಂತ್ರವಾಗಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಚುನಾವಣೆ ಸಂದರ್ಭಗಳಲ್ಲಿ ಎನ್‌ಡಿಎ ಆಡಳಿತದ ರಾಜ್ಯಗಳಿಗೆ ದೊಡ್ಡ ಪ್ರಮಾಣದ ಆರ್ಥಿಕ ಪ್ಯಾಕೇಜ್‌ಗಳು ಮತ್ತು ಯೋಜನೆಗಳನ್ನು ಘೋಷಿಸುವ ಮೂಲಕ ರಾಜಕೀಯ ಲಾಭವನ್ನು ಗಳಿಸಲು ಯತ್ನಿಸುತ್ತದೆ. ಬಿಹಾರ, ಮಹಾರಾಷ್ಟ್ರ, ಹರಿಯಾಣ ಮತ್ತು ದೆಹಲಿಯಂತಹ ರಾಜ್ಯಗಳ ಉದಾಹರಣೆಗಳು ಈ ತಂತ್ರವನ್ನು ಸ್ಪಷ್ಟವಾಗಿ ತೋರಿಸುತ್ತವೆ. ಇಂತಹ ಯೋಜನೆಗಳ ಜಾರಿಯ ಕೊರತೆಯಿಂದ ಸಾರ್ವಜನಿಕರಲ್ಲಿ ಭ್ರಮನಿರಸವನ್ನು ಉಂಟುಮಾಡಿದೆ. ಬಿಜೆಪಿಯ ಅನೀತಿ ತಂತ್ರವು ಒಕ್ಕೂಟ ವ್ಯವಸ್ಥೆಯ ತತ್ವಕ್ಕೆ ಧಕ್ಕೆ ತರುವುದಲ್ಲದೆ, ದೀರ್ಘಕಾಲೀನ ಅಭಿವೃದ್ಧಿಗಿಂತ ರಾಜಕೀಯ ಲಾಭಕ್ಕೆ ಆದ್ಯತೆ ನೀಡುವುದನ್ನು ಎತ್ತಿ ತೋರಿಸುತ್ತದೆ.

ರಾಜಕೀಯ ಲಾಭಕ್ಕಾಗಿ ನಡೆಯುವ ಇಂತಹ ಕಾರ್ಯತಂತ್ರಗಳು ಪ್ರಜಾಪ್ರಭುತ್ವದ ಪಾವಿತ್ರ್ಯತೆಗೆ ಧಕ್ಕೆ ನೀಡುವ ಅಪಾಯವೂ ಉಂಟುಮಾಡುತ್ತದೆ. ಭಾರತದ ಸಂವಿಧಾನದ ಆಶಯವನ್ನು ಉಳಿಸಬೇಕಾದರೆ ಕೇಂದ್ರ ಸರ್ಕಾರವು ರಾಜ್ಯಗಳನ್ನು ತಾರತಮ್ಯದಿಂದ ನೋಡಬಾರದು. ಬದಲಿಗೆ ಎಲ್ಲ ರಾಜ್ಯಗಳ ಅಭಿವೃದ್ಧಿಯನ್ನು ಸಮಾನ ಪ್ರಾಮುಖ್ಯತೆಯೊಂದಿಗೆ ಕಾರ್ಯಗತಗೊಳಿಸಬೇಕು. ಬಿಹಾರ ಅಥವಾ ಇತರೆ ರಾಜ್ಯಗಳು ಕೇವಲ ಚುನಾವಣೆ ಸಮಯದಲ್ಲಿ ನೆನಪಾಗಬಾರದು. ಪ್ರಜಾಪ್ರಭುತ್ವದಲ್ಲಿ ಜನರು ಕಾಲಕಾಲಕ್ಕೆ ಎಲ್ಲವನ್ನೂ ಗಮನಿಸಿ ತೀರ್ಮಾನಿಸುತ್ತಾರೆ. ಮತದಾರರು ಯಾವ ಮಾತುಗಳು ಎಷ್ಟು ಕಾರ್ಯರೂಪಕ್ಕೆ ಬರುತ್ತವೆ, ಯಾವ ಪ್ಯಾಕೇಜ್‌ಗಳು ಕೇವಲ ಮಾತುಗಳಿಗೆ ಸೀಮಿತವಾಗುತ್ತವೆ ಎಂಬುದನ್ನು ಗಮನಿಸುತ್ತಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X