ವಿಕೃತ ವ್ಯಕ್ತಿಯೊಬ್ಬ ತನಗಿಂತ ಹೆಚ್ಚು ವೇತನ ಪಡೆಯುತ್ತಿದ್ಧಾರೆ ಎಂಬ ಕಾರಣ ತನ್ನ ಸಹೋದ್ಯೋಗಿ ಜೊತೆ ಗಲಾಟೆ ಮಾಡಿದ್ದು, ಆತ ಗುದದ್ವರಕ್ಕೆ ಕಂಪ್ರೆಸ್ಸರ್ ಗಾಳಿ ಬಿಟ್ಟು ವಿಕೃತಿ ಮೆರೆದಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು ರಾಮನಗರ ನಿವಾಸಿ ಗೋವಿಂದೇಗೌಡ (28) ಎಂದು ಗುರುತಿಸಲಾಗಿದೆ. ಆತ ತನ್ನ ಸಹೋದ್ಯೋಗಿ, ಹಾಸನ ಜಿಲ್ಲೆಯ ಬೇಲೂರು ಬಳಿಯ ಎರೆಹಳ್ಳಿ ನಿವಾಸಿ ಪರಮೇಶ್ (35) ಅವರ ಮೇಲೆ ವಿಕೃತ ದಾಳಿ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಪರಮೇಶ್ ಮತ್ತು ಗೋವಿಂದೇಗೌಡ ಇಬ್ಬರೂ ರಾಮನಗರ ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಪರಮೇಶ್ ಅವರು 35,000 ವೇತನ ಪಡೆಯುತ್ತಿದ್ದರು. ಆರೋಪಿ ಗೋವಿಂದೇಗೌಡ 18,000 ಸಂಬಳ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಪರಮೇಶ್ ತನಗಿಂತ ಹೆಚ್ಚು ವೇತನ ಪಡೆಯುತ್ತಿದ್ಧಾನೆಂದು ಗೋವಿಂದೇಗೌಡ ಅಸಮಾಧಾನಗೊಂಡಿದ್ದ. ಇತ್ತೀಚೆಗೆ, ಈ ವೇತನ ವ್ಯತ್ಯಾಸದ ವಿಚಾರವಾಗಿ ಪರಮೇಶ್ ಜೊತೆ ಜಗಳ ಮಾಡಿದ್ದ. ಅದೇ ಸಮಯದಲ್ಲಿ, ‘ನಿನಗೇಕೆ ಇಷ್ಟೊಂದು ಸಂಬಳ’ ಎಂದು ಗಂಭೀರವಾಗಿ ಹಲ್ಲೆ ಮಾಡಿದ್ದಾನೆ. ಮಾತ್ರವಲ್ಲದೆ, ಪರಮೇಶ್ ಅವರ ಗುದದ್ವಾರಕ್ಕೆ ಏರ್‌ಗನ್ ಮೂಲಕ ಕಂಪ್ರೆಸರ್ ಗಾಳಿ ಬಿಟ್ಟಿದ್ದಾನೆ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಹಿಟ್ಲರ್ ನಡೆಸಿದ್ದ ನರಮೇಧದಿಂದ ತಪ್ಪಿಸಿಕೊಂಡು ಬದುಕಿದ್ದ ಬಾಲಕಿ ಇನ್ನಿಲ್ಲ
ಸಂತ್ರಸ್ತ ಪರಮೇಶ್ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕರುಳಿಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿರುವುದಾಗಿ ತಿಳಿದುಬಂದಿದೆ.
ಪರಮೇಶ್ ಅವರ ಪತ್ನಿ ಕೆ.ಬಿ ಸವಿತಾ ಅವರು ಗೋವಿಂದೇಗೌಡ ವಿರುದ್ಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಕೊಂಡಿರುವ ಪೊಲೀಸರು ಆರೋಪಿ ವಿರುದ್ಧ ಬಿಎನ್ಎಸ್ ಸೆಕ್ಷನ್ 289, ಬಿಎನ್ಎಸ್ 125 (ಎ), ಬಿಎನ್ಎಸ್ 352 ಅಡಿಯಲ್ಲಿ ಎಫ್‌ಐಆರ್ ದಾಖಲಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.