ಈ ದಿನ ಸಂಪಾದಕೀಯ | ಬಿಜೆಪಿಗರೇ ಹೇಳಿ- ಅಘೋಷಿತ ತುರ್ತುಪರಿಸ್ಥಿತಿ ಮುಗಿಯುವುದು ಯಾವಾಗ?

Date:

Advertisements

ಇಂದಿರಾ ಗಾಂಧಿಯವರು ಐವತ್ತು ವರ್ಷಗಳ ಹಿಂದೆ ಹೇರಿದ್ದ ತುರ್ತುಪರಿಸ್ಥಿತಿಯ ಬಗ್ಗೆ ಈಗ ಮಾತನಾಡುವ ಬಿಜೆಪಿಯವರಿಗೆ, “ಘೋಷಿತ ತುರ್ತುಪರಿಸ್ಥಿತಿ ಮುಗಿದು ಐವತ್ತು ವರ್ಷ ಕಳೆದಿದೆ. ಹನ್ನೊಂದು ವರ್ಷಗಳಿಂದ ಜಾರಿಯಲ್ಲಿರುವ ಅಘೋಷಿತ ತುರ್ತುಪರಿಸ್ಥಿತಿ ಮುಗಿಯುವುದು ಯಾವಾಗ?” ಎಂದು ಕೇಳಬೇಕಿದೆ.

ಜೂನ್‌ 25ಕ್ಕೆ ಇಂದಿರಾಗಾಂಧಿ ಅವರು ಹೇರಿದ್ದ ತುರ್ತುಪರಿಸ್ಥಿತಿಗೆ ಐವತ್ತು ವರ್ಷ ತುಂಬುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಜೂ.22ರಿಂದ 30ರವರೆಗೆ ವಿವಿಧ ಜಿಲ್ಲೆಗಳಲ್ಲಿ ಜನಜಾಗೃತಿ ಅಭಿಯಾನ ನಡೆಸಲಿದೆಯಂತೆ. ತುರ್ತುಪರಿಸ್ಥಿತಿಯನ್ನು ಭವಿಷ್ಯದಲ್ಲಿ ಹೇರಬಾರದು. ಕಾಂಗ್ರೆಸ್‌ ಹೇಗೆ ಸರ್ವಾಧಿಕಾರಿ-ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂಬುದನ್ನು ತಿಳಿಸಿ ಜನಜಾಗೃತಿ ಮೂಡಿಸಲಾಗುತ್ತದೆ. ಸಂವಿಧಾನಿಕ ಮೌಲ್ಯಗಳ ಜಾಗೃತಿ ಮೂಡಿಸಲಾಗುತ್ತದೆ ಎಂದು ಬಿಜೆಪಿ ಮುಖಂಡ ಸಿ ಟಿ ರವಿ ಹೇಳಿದ್ದಾರೆ.

ಥೇಟ್‌ ‘ಭೂತದ ಬಾಯಲ್ಲಿ ಭಗವದ್ಗೀತೆ’ ಕೇಳಿದಂತಿದೆ ಬಿಜೆಪಿಯವರ ಹೇಳಿಕೆಗಳು. ತಾವು ಪ್ರತಿಹಂತದಲ್ಲೂ ಸಂವಿಧಾನಕ್ಕೆ ಅಪಚಾರ ಮಾಡುತ್ತಾ, ದ್ವೇಷ ರಾಜಕಾರಣ, ಕೋಮುದ್ವೇಷ, ಪ್ರಚೋದನಾ ಭಾಷಣ ಮಾಡುತ್ತ ಅದೇ ಸಂದರ್ಭದಲ್ಲಿ ಸಂವಿಧಾನ ಮೌಲ್ಯವನ್ನು ಎತ್ತಿ ಹಿಡಿಯುವ ಮಾತಾಡುವುದು ಅಪ್ಪಟ ತಮಾಷೆಯಾಗಿದೆ. ಇದೇ ಬಿಜೆಪಿಯ ನಾಯಕರು ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡುತ್ತಾರೆ. “ಸಂವಿಧಾನ ಬದಲಾಯಿಸಲೆಂದೇ ನಾವು ಬಂದಿರುವುದು” ಎಂದು ಮಾಜಿ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಸಾರ್ವಜನಿಕವಾಗಿ ಹೇಳಿಕೆ ಕೊಟ್ಟು ನಂತರ ಲೋಕಸಭೆಯಲ್ಲಿ ಕ್ಷಮೆ ಕೇಳಬೇಕಾಯ್ತು. ಬಿಜೆಪಿ ಬೆಂಬಲಿತ ಉಡುಪಿಯ ಪೇಜಾವರ ಸ್ವಾಮಿ “ನಮಗೆ ಪ್ರತ್ಯೇಕ ಸಂವಿಧಾನ ಬೇಕು” ಎಂದು ಹೇಳುತ್ತಾರೆ. ರಾಜ್ಯದಲ್ಲಿ ನಾಲ್ಕು ವರ್ಷ ಬಿಜೆಪಿ ಸರ್ಕಾರ ಇದ್ದಾಗ ಮುಸ್ಲಿಂ ಹೆಣ್ಣುಮಕ್ಕಳು ಶಾಲೆಗೆ ಹಿಜಾಬ್‌ ಧರಿಸಿ ಬರಬಾರದು ಎಂದು ನಿಷೇಧ ಹೇರಿದಾಗ, ಈ ದೇಶದ ಸಂವಿಧಾನ ಪ್ರತಿಯೊಬ್ಬನಿಗೆ ತನ್ನಿಷ್ಟದ ದೇವರನ್ನು ಪೂಜಿಸುವ, ಇಷ್ಟದ ಆಹಾರ ಸೇವಿಸುವ, ಇಷ್ಟದ ಉಡುಗೆ ತೊಡುವ ಸ್ವಾತಂತ್ರ್ಯ ನೀಡಿದೆ ಎಂಬ ಪ್ರಜ್ಞೆ ಇರಲಿಲ್ಲವೇ? ದನದ ಮಾಂಸ ಸೇವಿಸುತ್ತಾರೆ ಎಂದು ಮುಸ್ಲಿಮರನ್ನು ಹೊಡೆದು ಕೊಲ್ಲುವಾಗ ಬಿಜೆಪಿಯವರಿಗೆ ಸಂವಿಧಾನ ನೆನಪಿಗೆ ಬರಲಿಲ್ಲವೇ?

Advertisements

ಇಂದಿರಾಗಾಂದಿಯವರು ಹೇರಿದ್ದ ಘೋಷಿತ ತುರ್ತುಪರಿಸ್ಥಿತಿಯ ಕಾಲದಲ್ಲಿ ಮಾಧ್ಯಮಗಳ ಕೈ ಕಟ್ಟಿ ಹಾಕಲಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗಿತ್ತು. ಇದನ್ನು ಕಾಂಗ್ರೆಸ್‌ ನಾಯಕರೂ ಒಪ್ಪುತ್ತಾರೆ. ಅದೊಂದು ಕೆಟ್ಟ ನಿರ್ಧಾರ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೂ ಹೇಳಿದ್ದಾರೆ. ಕೆಲ ವರ್ಷಗಳಿಂದ ಬಿಜೆಪಿ ಜೂನ್‌ 25ರಂದು ಸಂವಿಧಾನ ಹತ್ಯಾದಿನ ಆಚರಿಸುತ್ತಿದೆ. ಇದೇ ಸಮಯದಲ್ಲಿ ದೇಶದಲ್ಲಿ ಮೋದಿ ಅವರ ಹನ್ನೊಂದು ವರ್ಷಗಳ ಅವಧಿಯಲ್ಲಿ ಸಂವಿಧಾನದ ಮೇಲೆ ನಡೆದಿರುವ  ಹಲ್ಲೆಗಳನ್ನೂ ನೆನಪಿಸುವ ಅಗತ್ಯವಿದೆ. ಸಿಎಎ, ಎನ್‌ಆರ್‌ಸಿ ಹೋರಾಟಗಾರರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ನಾಲ್ಕು ವರ್ಷವಾದರೂ ವಿಚಾರಣೆಯನ್ನೂ ನಡೆಸದೆ ಜೈಲಿನಲ್ಲಿಡಲಾಗಿದೆ. ಹಲವು ಜೆ ಎನ್‌ಯು ವಿದ್ಯಾರ್ಥಿ ನಾಯಕರನ್ನು ಕರಾಳ ಯುಎಪಿಎ ಪ್ರಕರಣದಡಿ ಜೈಲಿನಲ್ಲಿಟ್ಟು ವಿಚಾರಣೆಯನ್ನೂ ನಡೆಸದೆ, ಜಾಮೀನೂ ನೀಡದೆ ಅವರ ಬದುಕುಗಳನ್ನು ನಾಶಪಡಿಸಲಾಗಿದೆ. ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವರದಿಗೆ ಹೋಗಿದ್ದ ಕೇರಳದ ಪತ್ರಕರ್ತ ಸಿದ್ದಿಕಿ ಕಪ್ಪನ್‌ ಅವರನ್ನು ಯುಎಪಿಎ ಪ್ರಕರಣ ದಾಖಲಿಸಿ ಎರಡು ವರ್ಷ ಜೈಲಿನಲ್ಲಿಡಲಾಗಿತ್ತು. ಇಂತಹ ಹಲವು ಪ್ರಕರಣಗಳು ಸಂವಿಧಾನ ವಿರೋಧಿಯಾಗಿವೆ. ಹೀಗಿದ್ದೂ ತಾವು ಸಂವಿಧಾನ ರಕ್ಷಕರು, ಮುಂದೆ ತುರ್ತುಪರಿಸ್ಥಿತಿ ಹೇರಬಾರದು ಎಂದು ಬಿಜೆಪಿ ಜಾಗೃತಿ ಅಭಿಯಾನ ನಡೆಸುತ್ತಿದೆಯಂತೆ! ಇದಲ್ಲವೇ ಆಷಾಢಭೂತಿತನ.

2018ರಲ್ಲಿ ಮಹಾರಾಷ್ಟ್ರದ ಭೀಮಾ ಕೋರೆಗಾವ್ ಘಟನೆಯ ಇನ್ನೂರನೇ ವರ್ಷಾಚರಣೆಯಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪ ಹೊರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾನವಹಕ್ಕು ಹೋರಾಟಗಾರರಾಗಿದ್ದ ವರವರ ರಾವ್, ಅರುಣ್ ಪೆರೇರಾ, ಸುಧಾ ಭಾರದ್ವಾಜ್, ಗೌತಮ್ ನವ್ಲಾಖಾ ಮತ್ತಿತರರನ್ನು ಬಂಧಿಸಲಾಯಿತು. ಸುರೇಂದ್ರ ಗಾಡ್ಲಿಂಗ್, ಸುಧೀರ್ ಧವಳೆ, ರೋನಾ ವಿಲ್ಸನ್, ಶೋಮಾ ಸೇನ್ ಮತ್ತು ಮಹೇಶ್ ರಾವುತ್  ಅವರಿಗೆ ಮಾವೊವಾದಿ ನಂಟಿದೆ ಎಂಬ ಆರೋಪ ಹೊರಿಸಲಾಯಿತು.

2020 ಏಪ್ರಿಲ್‌ 14ರಂದು ಅಂಬೇಡ್ಕರ್‌ ಜನ್ಮದಿನದಂದೇ ಅವರ ಮೊಮ್ಮಗಳ ಬಾಳ ಸಂಗಾತಿ ಪ್ರೊ ಆನಂದ್‌ ತೇಲ್‌ತುಂಬ್ಡೆ ಅವರನ್ನು ಎನ್‌ಐಎ ಬಂಧಿಸಿತ್ತು. ಆನಂದ್ ತೇಲ್ತುಂಬ್ಡೆ ತನ್ನ ಸಹಚರರೊಂದಿಗೆ ಆರ್‌ಡಿಎಫ್ (ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ) ಮತ್ತು ಸಿಪಿಐ (ಮಾವೋವಾದಿ) ನೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಕೊರ್ಚಿ ಅರಣ್ಯ ಪ್ರದೇಶದಲ್ಲಿ ಉಗ್ರರಿಗೆ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ತರಬೇತಿಯನ್ನು ಆಯೋಜಿಸಿದ್ದರು ಎಂದು ಎನ್‌ಐಎ ಆರೋಪಿಸಿತ್ತು. ಅದೇ ವರ್ಷ ಅಕ್ಟೋಬರ್‌ನಲ್ಲಿ, ಬುಡಕಟ್ಟು ಹಕ್ಕುಗಳ ಹೋರಾಟಗಾರ 83 ವರ್ಷದ ಫಾದರ್ ಸ್ಟ್ಯಾನ್ ಸ್ವಾಮಿಯನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿತು. ಫಾದರ್ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೂ ಜಾಮೀನು ನೀಡಲಿಲ್ಲ. ಅಷ್ಟೇ ಅಲ್ಲ ಕನಿಷ್ಠ ವೈದ್ಯಕೀಯ ಸೌಲಭ್ಯವನ್ನೂ ನಿರಾಕರಿಸಿ ಅವರು ಜೈಲಿನಲ್ಲಿಯೇ ಸಾಯುವಂತಾಯ್ತು. ಹೀಗೆ ಬಲಪಂಥೀಯ ವಿಚಾರಧಾರೆಯ ವಿರುದ್ಧವಿದ್ದ ಮಾನವಹಕ್ಕುಗಳ ಹೋರಾಟಗಾರರನ್ನೆಲ್ಲ ಕಂಬಿ ಹಿಂದೆ ಕಳೆಯುವಂತೆ ಮಾಡಿದ್ದು ಅಘೋಷಿತ ತುರ್ತುಪರಿಸ್ಥಿತಿ ಅಲ್ಲವೇ? ಇವರೆಲ್ಲರೂ ಈ ದೇಶದ ನೊಂದವರು, ತುಳಿತಕ್ಕೊಳಗಾದವರ ಪರ ನಿಂತಿದ್ದು ದೇಶದ್ರೋಹದ ಕೆಲಸವೇ?

ಮೋದಿಯವರ ಎರಡನೇ ಅವಧಿಯ ಆರಂಭದಲ್ಲಿ ಜಾರಿಗೆ ತಂದ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ನಡೆದ ದೆಹಲಿ ಪ್ರತಿಭಟನೆಗೆ ಹೋಗದಂತೆ ರಸ್ತೆಯನ್ನೇ ಅಗೆದು ಕಂದಕ ನಿರ್ಮಾಣ ಮಾಡಿದ್ದು, ರಸ್ತೆಗೆ ಮೊಳೆ ಹೊಡೆದಿದ್ದು, ಕಬ್ಬಿಣದ ತಂತಿ ಬೇಲಿ ನಿರ್ಮಾಣ ಮಾಡಿದ್ದು ಸಂವಿಧಾನ ಕೊಡ ಮಾಡಿದ ಹಕ್ಕುಗಳಿಗಾಗಿ ಹೋರಾಡುವ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದು, ರೈತರ ಮೇಲೆ ಕ್ರೂರವಾಗಿ ಲಾಠಿ ಪ್ರಹಾರ ಮಾಡಿದ್ದು, ಅವರನ್ನು ದೇಶದ್ರೋಹಿಗಳೆಂದು ಬಿಂಬಿಸಿದ್ದು, ತುರ್ತುಪರಿಸ್ಥಿತಿಗಿಂತ ಹೇಗೆ ಭಿನ್ನ? ಪ್ರತಿಭಟಿಸುವ ಹಕ್ಕನ್ನು ಸಂವಿಧಾನವೇ ನೀಡಿರುವಾಗ ಅದು ಅಪರಾಧ ಹೇಗಾಗುತ್ತದೆ. ರೈತರು ಕರಾಳ ಕಾಯ್ದೆಗಳ ವಿರುದ್ಧ ಸಂಘಟಿತ ಹೋರಾಟ ನಡೆಸುತ್ತಿದ್ದರೆ ಅವರು ಖಲಿಸ್ತಾನಿ ಬೆಂಬಲಿಗರು, ನಕಲಿ ರೈತರು, ಬಾಹ್ಯಶಕ್ತಿಗಳ ಬೆಂಬಲದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಬಿಜೆಪಿಯ ನಾಯಕರು, ಸ್ವತಃ ಮೋದಿಯ ಸಂಪುಟದ ಮಂತ್ರಿಗಳೇ ಅವಮಾನಿಸಿದ್ದರು. ಒಂದೂವರೆ ವರ್ಷ ಕಾಲ ನಡೆದ ಪ್ರತಿಭಟನೆಗೆ ಕಡೆಗೂ ಮೋದಿ ಮಣಿಯಲೇಬೇಕಾಯ್ತು. ಕಾಯ್ದೆ ವಾಪಸ್‌ ಪಡೆದು ಅದು ಕರಾಳ ಕಾಯ್ದೆ ಎಂದು ಒಪ್ಪಿಕೊಳ್ಳಬೇಕಾಯ್ತು.

ಸಿ ಎ ಎ ಮತ್ತು ಎನ್‌ಆರ್‌ ಸಿ ವಿರುದ್ಧ ದೇಶದಾದ್ಯಂತ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹಲವು ಹೋರಾಟಗಾರರನ್ನು ದೇಶದ್ರೋಹದ ಪ್ರಕರಣದಲ್ಲಿ ಬಂಧಿಸಿ ಜಾಮೀನು ಕೂಡ ಕೊಡದಂತೆ ಮಾಡಿರುವುದು ಸಂವಿಧಾನ ನೀಡಿರುವ ಹಕ್ಕಿನ ಉಲ್ಲಂಘನೆ ಅಲ್ಲವೇ? ಮುಸ್ಲಿಮರ ವಿರುದ್ಧ ಸಂಘಟಿತ ದಾಳಿ, ಅವರ ಬದುಕುವ ಹಕ್ಕು-ಸ್ವಾತಂತ್ರ್ಯದ ಮೇಲೆ ಬಲಪಂಥೀಯರು ದಾಳಿ ನಡೆಸುತ್ತಲೇ ಇದ್ದಾರೆ. ಮುಸ್ಲಿಮರ ನರಮೇಧಕ್ಕೆ ಹಿಂದೂ ಧಾರ್ಮಿಕ ಮುಖಂಡರಾದಿಯಾಗಿ ಎಲ್ಲರೂ ಕರೆಕೊಡುತ್ತಿದ್ದಾರೆ. ಇದು ಯಾವ ಪರಿಸ್ಥಿತಿ ಎಂದು ಅವಲೋಕಿಸಲು ಬಿಜೆಪಿಯ ಅಭಿಯಾನ ಪ್ರೇರಣೆ ನೀಡಲಿ. 

ಇಂದಿರಾ ಗಾಂಧಿಯವರ ಕಾಲಘಟ್ಟದಲ್ಲಿ ಸರ್ವಾಧಿಕಾರ ಇತ್ತು ಎಂದು ಹೇಳುವ ಬಿಜೆಪಿಯವರಿಗೆ, ತಮ್ಮ ಸರ್ವೋಚ್ಛ ನಾಯಕ ಪ್ರಧಾನಿ ಮೋದಿಯವರು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದು, ವಿಪಕ್ಷಗಳನ್ನು ಗೌರವಿಸದಿರುವುದು, ವಿಪಕ್ಷಗಳ ನಾಯಕರನ್ನು ಮಾತ್ರವಲ್ಲ ವಿವಿಧ ಇಲಾಖೆಗಳ ನಿರ್ಧಾರವನ್ನೂ ತಾವೊಬ್ಬರೇ ತೆಗೆದುಕೊಳ್ಳುವುದು ಸರ್ವಾಧಿಕಾರದ ಲಕ್ಷಣವೇ ಆಗಿದೆ ಎಂದು ಹೇಳಬೇಕಿದೆ. ರೈಲು ನಿಲ್ದಾಣ, ವಿಮಾನ ನಿಲ್ದಾಣ, ಹೆದ್ದಾರಿ ಎಲ್ಲವನ್ನೂ ಮೋದಿ ಸಾಹೇಬರೇ ಉದ್ಘಾಟಿಸುತ್ತಾ, ತಾವೊಬ್ಬರೇ ಫೋಟೋದಲ್ಲಿ ಕಾಣಿಸಿಕೊಳ್ಳುವಂತೆ ಅಪ್ಪಟ ಆತ್ಮರತಿಯ ಪ್ರದರ್ಶನಪ್ರಿಯರಾಗಿದ್ದಾರೆ. ಹಲವು ಗುಣಲಕ್ಷಣಗಳಲ್ಲಿ ಸರ್ವಾಧಿಕಾರಿ ಹಿಟ್ಲರ್‌ನಂತೆಯೇ ನಡೆದುಕೊಂಡಿದ್ದಾರೆ.

ರಾತ್ರೋರಾತ್ರಿ ನೋಟ್ ಬ್ಯಾನ್ ಕರೆ ಕೊಡುತ್ತಾರೆ. ಇಡೀ ದೇಶವೇ ಲಾಕ್ ಡೌನ್ ಆಗಲಿದೆ ಎಂದು ಘೋಷಿಸುತ್ತಾರೆ. ಇಂತಹ ಮಹತ್ವದ ತೀರ್ಮಾನಗಳು ಸ್ವತಃ ಅವರ ಸಂಪುಟದ ಸಭೆ ಕರೆದೂ ತೀರ್ಮಾನಿಸಲ್ಲ. ವಿಶೇಷ ಅಧಿವೇಶನ, ಸರ್ವಪಕ್ಷ ಸಭೆ ನಡೆದರೂ ಅವರು ಹಾಜರಾಗಲ್ಲ. ಯಾವ ಸಂದರ್ಭದಲ್ಲೂ ಒಂದೇ ಒಂದು ಪ್ರೆಸ್‌ಮೀಟ್‌ ಮಾಡಲ್ಲ. ಇವೆಲ್ಲ ಓರ್ವ ಸರ್ವಾಧಿಕಾರಿಯ ಲಕ್ಷಣ ಎಂಬುದನ್ನು ಬಿಜೆಪಿಯವರಿಗೆ ಜನ ಅರ್ಥ ಮಾಡಿಸಬೇಕಿದೆ.

ಇದನ್ನೂ ಓದಿ ಬೆನಝೀರ್‌ ಭುಟ್ಟೋ’ ಮುಸ್ಲಿಂ ರಾಷ್ಟ್ರವೊಂದರ ಮೊದಲ ಮಹಿಳಾ ಪ್ರಧಾನಿಯಾದ ಗಟ್ಟಿಗಿತ್ತಿ

ಐವತ್ತು ವರ್ಷಗಳ ಹಿಂದೆ ಹೀಗೆ ಆಗಿತ್ತು ಎಂದು ಪ್ರತಿವರ್ಷವೂ ಕರಾಳ ದಿನ ಎಂದು ಆಚರಿಸಿದಾಕ್ಷಣ ಕಳೆದ ಹನ್ನೆರಡು ವರ್ಷಗಳಿಂದ ನಡೆಸಿರುವ ಸರ್ವಾಧಿಕಾರ, ದಬ್ಬಾಳಿಕೆ, ಹಬ್ಬಿಸಿರುವ ಕೋಮುವಾದಿ ವಿಷ, ಹುಸಿ ದೇಶಭಕ್ತಿಯ ಮುಸುಕಿನ ಹಿಂದೆ ಮರೆ ಮಾಡಲಾಗಿರುವ ನಿರುದ್ಯೋಗ, ಕೃಷಿ ಬಿಕ್ಕಟ್ಟು, ಜನಸಾಮಾನ್ಯರ ದೈನಂದಿನ ಬವಣೆಗಳು ಮಾಯವಾಗಿ ಹೋಗುವುದಿಲ್ಲ. ಹತ್ತಿಕ್ಕಿದ್ದು, ತುಳಿದಿಟ್ಟದ್ದು ಅಷ್ಟೇ ಬಲವಾಗಿ ಸ್ಫೋಟಿಸುತ್ತದೆ ಎಂಬುದನ್ನು ಅರಿತು ನಿವಾರಣೋಪಾಯಗಳನ್ನು ಜಾರಿಗೆ ತರುವುದು ಒಳ್ಳೆಯದು. ಇದುವೇ ನಿಜವಾದ ಜನಜಾಗೃತಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X