ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕ ನಂದ ಕಿಶೋರ್ ವಿರುದ್ಧ 22 ಲಕ್ಷ ರೂ ವಂಚಿಸಿರುವ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ನಟ ಶಬರೀಶ್ ಎಂಬುವವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡುವುದಾಗಿ ಹೇಳಿದ್ದಾರೆ.
ನಿರ್ದೇಶಕ ನಂದ ಕಿಶೋರ್ ತಮ್ಮಿಂದ 22 ಲಕ್ಷ ರೂ ಹಣ ಪಡೆದುಕೊಂಡಿದ್ದರು. ಈಗ ಹಣ ಕೊಡದೆ ಸತಾಯಿಸುತ್ತಿದ್ದಾರೆ. ಹಣ ವಾಪಸ್ ಕೊಡುವಂತೆ ಕೇಳಿದರೆ ಸುದೀಪ್ ಅವರ ಹೆಸರು ಬಳಸಿ ನನಗೆ ಬೆದರಿಕೆ ಸಹ ಹಾಕಿದ್ದಾರೆ ಎಂದು ನಟ ಆರೋಪ ಮಾಡಿದ್ದಾರೆ.
ಈ ಸಂಬಂಧ ನಟ ಶಬರೀಶ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಈ ಬಗ್ಗೆ ದೂರು ನೀಡುವುದಾಗಿ ಹೇಳಿದ್ದು, ಕೂಡಲೇ ವಾಣಿಜ್ಯ ಮಂಡಳಿ ತನ್ನ ದೂರು ಸ್ವೀಕರಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಕಾಂತಾರ ಚಿತ್ರತಂಡಕ್ಕೆ ತಹಶೀಲ್ದಾರ್ ನೋಟಿಸ್; ಮೂರು ದಿನದಲ್ಲಿ ಉತ್ತರಿಸಲು ಸೂಚನೆ
ಕಿಚ್ಚ ಸುದೀಪ್ ಅವರ ಅಭಿಮಾನಿ ಆಗಿರುವ ಶಬರೀಶ್ ಶೆಟ್ಟಿ ಆರೋಪಿಸಿರುವಂತೆ, ನಿರ್ದೇಶಕ ನಂದ ಕಿಶೋರ್ ಸುಮಾರು ಒಂಬತ್ತು ವರ್ಷಗಳ ಹಿಂದೆ ಜಿಮ್ ಒಂದರಲ್ಲಿ ಪರಿಚಯವಾದರಂತೆ. ಪರಿಚಯ ಗೆಳೆತನವಾಗಿ, ನಂದ ಕಿಶೋರ್, ಶಬರೀಶ್ ಅವರನ್ನು ಸಿಸಿಎಲ್‌ನಲ್ಲಿ ಆಡಿಸುವುದಾಗಿ ಭರವಸೆ ನೀಡಿ, ಶಬರೀಶ್ ಅವರಿಂದ 22 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದರಂತೆ. ಇದಕ್ಕಾಗಿ ಶಬರೀಶ್ ತನ್ನ ಮನೆಯಲ್ಲಿದ್ದ ಚಿನ್ನ ಅಡವಿಟ್ಟು ಹಣ ಕೊಟ್ಟಿದ್ದೆ ಎಂದು ಹೇಳಿದ್ದಾರೆ.
“ಇಲ್ಲಿಯವರೆಗೂ ನಂದ ಕಿಶೋರ್ ಅವರು ತಮಗೆ ಹಣ ಮರಳಿಸಿಲ್ಲ ಎಂದು ಶಬರೀಶ್ ಆರೋಪಿಸಿದ್ದಾರೆ. ಹಣ ಮರಳಿಸುವಂತೆ ಕೇಳಿದರೆ ಬೆದರಿಕೆ ಹಾಕುತ್ತಾರೆ. ನಾನು ಹಣ ಕೇಳಿದಾಗೆಲ್ಲ ಸುದೀಪ್ ಸರ್ ಹೆಸರು ಹೇಳಿ ಯಾಮಾರಿಸಿದರು. ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ನನಗೆ ಮೋಸ ಮಾಡಿದ್ದಾರೆ. ನಾನು ಕೊಟ್ಟ ಹಣವೂ ವಾಪಸ್ ಕೊಟ್ಟಿಲ್ಲ. ಸಿನಿಮಾದಲ್ಲಿ ಅವಕಾಶವನ್ನು ಕೊಡಲಿಲ್ಲ, ನಾನು ಸಿಸಿಎಲ್‌ನಲ್ಲಿ ಆಡುವ ಕನಸು ಕಟ್ಟಿಕೊಂಡಿದ್ದೆ. ಕೆಸಿಸಿ ಟೂರ್ನಿಯಲ್ಲಿ ನಾನು ಎರಡು ಆವೃತ್ತಿ ಆಡಿದ್ದೇನೆ. ಹಣ ಕೇಳಿದರೆ ನಿನ್ನ ಕೆಸಿಸಿಯಿಂದ ಹೊರ ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ’ ಎಂದು ಶಬರೀಶ್ ಆರೋಪಿಸಿದ್ದಾರೆ.