ಎಸ್. ಮಂಜುನಾಥರ ‘ಹೆಬ್ಬಿರುಳಿನ ನಿಬ್ಬೆರಗು’ ಕೃತಿ ಕುರಿತು ಪ್ರೊ. ಎಸ್.ಜಿ ಸಿದ್ದರಾಮಯ್ಯರ ಬರೆಹ

Date:

Advertisements
ಕಾವ್ಯವೆನ್ನುವುದು ಬದುಕಧೇನಿಸುವ ಪ್ರಕ್ರಿಯೆ. ಹೀಗಾಗಿಯೇ ಇಲ್ಲಿ ಲೋಕಾಂತವೂ ಏಕಾಂತದ ಮೂಸೆಯಲ್ಲಿ ಕುದಿಗೊಂಡು ಪಾಕವಾಗಿದೆ, ಏಕಾಂತವೂ ಲೋಕಾಂತದ ವಿಸ್ತರಣೆಯಲ್ಲಿ ಚಿಂತನೆಗೆ ಒಡ್ಡಿಕೊಂಡು ಮುದವಾಗಿದೆ.

ಕಾವ್ಯವೆಂದರೇನು? ಎಂಬ ಪ್ರಶ್ನೆಗೆ ಸಾವಿರದ ಒಂದು ಬಗೆಯ ಉತ್ತರಗಳು ಸಿಗಬಹುದು. ಆದರೂ ಅವೆಲ್ಲವೂ ಆತ್ಯಂತಿಕ ಉತ್ತರಗಳಲ್ಲ ಅಥವಾ ಪೂರ್ಣ ಉತ್ತರಗಳಲ್ಲ. ಪೂರ್ಣತ್ವದ ಕಡೆಗೆ ನಡೆದ ಹೆಜ್ಜೆ ಪಯಣದ ಗೆಜ್ಜೆ ಮಾತುಗಳು.

ನಿರುಪಮೆಯೊಳು ಉಪಮೆ ಕದ್ದುಬಂದು
ನಿರೂಪದೊಳು ಅದು ಹೇಗೋ
ಸ್ವರೂಪವೊಂದು ಮೂಡಿಬಂದು
ಭ್ರಾಂತಿ ವಿಭ್ರಾಂತಿ ಸಂಕ್ರಾಂತಿ ನವರಾತ್ರಿ
ರಾತ್ರಿ ಹಗಲುಗಳೊಂದುಗೂಡಿ
ರಾಗಿ ತೆನೆಯೊಳು ಹೂಬಿಟ್ಟಂತೆ
ಬೆವರ ಬಿಂದು

ಸಾವಿರದೊಂದು ಉತ್ತರಮುಖಿಗಳ ಸಾಲಿನಲ್ಲಿ ಹೀಗೊಂದು ವಿಸ್ತರಣೆಯ ಸೊಲ್ಲು; ಈ ಸೊಲ್ಲು ಕೂಡ ಲಕ್ಷ್ಯ ಲಕ್ಷಣದ ಉತ್ತರಗಾಮಿ ಸ್ವರೂಪಿ. ಈ ಲಕ್ಷ್ಯ ಲಕ್ಷಣ ಮುಖಿಯೂ ಅನ್ಯಕ್ಕೆ ತೋರುಬೆರಳಾಗುವುದಕ್ಕಿಂತ ತನ್ನ ಕಡೆಗೇ ತನ್ನ ರಚನೆಯ ಕಡೆಗೇ ದೀಪ ಸ್ವರೂಪಿಯಾದುದು. ಮಹಾಯಾನ ಮಂಜುನಾಥರ ಈ ಸಂಕಲನವನ್ನು ಓದಿ ಮತ್ತೆ ಓದಿ ಮುಗಿಸಿದ ಮರುನಿಮಿಷದಲ್ಲಿ ಓದಿನ ಅನುಭವ ಹಂಚಿಕೊಳ್ಳಲು ದನಿ ಎತ್ತಿದಾಗ ಆ ದನಿಗೆ ಸಿಕ್ಕ ಪ್ರವೇಶಿಕೆಯ ಸ್ವರೂಪದ ಮಾತುಗಳಿವು.

Advertisements

ಕಾವ್ಯವನ್ನು ಕುರಿತು ಮಾತನಾಡುವಾಗ ನಾನು ಮತ್ತೆ ಮತ್ತೆ ಎರಡು ಬಗೆಯ ಕಾವ್ಯಾನುಭವದ ಬಗ್ಗೆ ಉಲ್ಲೇಖಿಸಿ ಮಾತನಾಡುತ್ತೇನೆ. ಒಂದು ಪದಾರ್ಥಕಾವ್ಯ ಮತ್ತೊಂದು ಪದಕಾವ್ಯ. ಪ್ರತಿಯೊಂದು ಪದಕ್ಕೂ ಅರ್ಥವಿರುವಂತೆ ಪ್ರತಿಯೊಂದು ರಚನೆಯಲ್ಲೂ ಅರ್ಥವನ್ನು ಬೆದಕುತ್ತಾ ಆ ಅರ್ಥಮಿತಿಯಲ್ಲಿ ಪರ್ಯವಸಾನವಾಗುವುದು ಪದಾರ್ಥಕಾವ್ಯ. ಆದರೆ ನಿಜವಾದ ಕಾವ್ಯ ಅರ್ಥಗತಿಯ ನಿಲುಗಡೆಯಲ್ಲಿ ಬಂಧಿತವಾಗಿ ಉಸಿರು ಕಳೆದುಕೊಂಡದ್ದಲ್ಲ. ಅರ್ಥದ ಹಂಗು ಕಳಚಿಕೊಂಡು ಅನುಭವದ ಅನುಭೂತಿಯಲ್ಲಿ ನದಿಯಾಗಿ ಹರಿದು ಸಾಗರದಲ್ಲಿ ಬೆರೆಯುವುದು; ಇದನ್ನೇ ಪಂಪ ‘ಅರ್ಣವೊಂಬೋಲತಿ ಗಂಭೀರಂ’ ಎಂದ. ಅರ್ಣವ ಅಂದರೆ ಸಾಗರ; ಸಾಗರದಂತೆ ಗಂಭೀರ ಅಂದರೆ ಇಡೀ ಹೋಲಿಕೆ ವಾಚ್ಯಾರ್ಥದಲ್ಲಿ ಹುಸಿಯಾಗಿ ವ್ಯಂಗ್ಯದಲ್ಲಿ ಉತ್ತರೋತ್ತರದ ಎತ್ತರದಲ್ಲಿ ಪರಿಭಾವನೆಯ ಧ್ಯಾನಕ್ಕೆ ದೂಡುತ್ತದೆ. ಅಲ್ಲಿ ಮಾತೆಂಬುದು ಜ್ಯೋತಿರ್ಲಿಂಗವಾಗಿ ಜಡವೆಂಬುದು ಬರಿ ಸುಳ್ಳು ಕಾವ್ಯವು ಶಿವಮುಖದ ಕಣ್ಣು ಎಂಬ ಅನುಭವ ಅನುಭಾವಿತವಾಗುತ್ತದೆ. ಗಂಭೀರತೆ ಹೊರಗಣ್ಣಿಗೆ ಮೌನ ಮುಖಿಯಾಗಿ ಕಾಣುತ್ತದೆ, ಒಳಗಣ್ಣಿನ ಪರಿಭಾವನೆಯಲ್ಲಿ ಪ್ರಕ್ಷುಬ್ಧಗಳ ಅಲ್ಲೋಲ ಕಲ್ಲೋಲಗಳು ಬಡಬಾಗ್ನಿಯಗುಪ್ತಗಾಮಿಗಳು ಮರದೊಳಗಣ ಮಂದಾಗ್ನಿಯಂತೆ ಗೋಚರಿಸುತ್ತವೆ. ಕಾಣುವುದೇ ಒಂದಾಗಿ ಗೋಚರಿಸುವುದೇ ಮತ್ತೊಂದಾಗಿ ಗಂಭೀರತೆಯ ಅರ್ಥವೆಂಬುದು ಪದಾರ್ಥ ಪದಸ್ವರೂಪಗಳ ವಕ್ರೀಭವನದಲ್ಲಿ ವಿಶೇಷವೆನ್ನಿಸುತ್ತವೆ. ಇದು ಪದಕಾವ್ಯದ ಪರಿ.

ಕವುಚಿಟ್ಟ ಕೋಳಿಗಳ ಕೂಗಿಗೆ ಪಂಜರ ಬೆಚ್ಚಿದ್ದು
ನೋವುಗಳ ನೇಯ್ದ ಲಾಳಿಗಳು ತೊಳಲಾಡಿದ್ದು
ಗೆಬರಲು ಬಂದ ರಣಹದ್ದುಗಳನ್ನೇ
ಬೇಟೆಯಾಡಿದ ಗುಬ್ಬಚ್ಚಿಗಳು ಆಗಸಕೆ ರೆಕ್ಕೆಬಡಿದದ್ದು
ಎಲ್ಲೆಲ್ಲೂ ಸದ್ದು ಸದ್ದು; ಅದೆಂತಹ ಮಹಾ ಘನಸದ್ದೆಂದರೆ
ಹಸಿ ಮಡಿಕೆಯ ಮಣ್ಣು ಚಿಗುರುವ ಸದ್ದು!
ಎದುರಿದ್ದ ದಾರಿ ಹಿಂದುಮುಂದಾಯಿತು
ಕಣ್ಣೆವೆಗೆ ತಾಗಿದ ಗುರಿ ಮುಗ್ಗರಿಸಿ ಬಿದ್ದಿತು
ನೋಟ ನೆಟ್ಟಷ್ಟೂ ಬಟಾಬಯಲು ಮರು ಹುಟ್ಟುಹಾಕಿತು
ಕುಲ ಹೊಲ ಸಕಲ ಕೆಟ್ಟಷ್ಟೂ ಹೊಸ ಸೃಷ್ಟಿಯಾಯಿತು
ಹೀಗಾಯಿತು ಹಾಗಾಯಿತು ಲಾಗಾಯತ್ತಿನಿಂದಲೂ
ಕನಸುಗಳು ಎತ್ತರಕ್ಕೆ ಜಿಗಿದು ಧುತ್ತರಕ್ಕೆ ಇಳಿದು
ಇಲ್ಲದಂತೆಯೇ ಇದ್ದು ಇರುವಂತೆಯೇ ಇಲ್ಲವಾಯಿತು!

ಮಹಾಯಾನ ಮಂಜುನಾಥರ ಕವನದ ಈ ಸಾಲುಗಳು ಪದಕಾವ್ಯಕ್ಕೊಂದು ಚಿಕ್ಕ ಉದಾಹರಣೆ. ‘ಮೈಗನಸು’ ಎಂಬ ಕವನದೊಳಗಿನ ಈ ಸಾಲುಗಳು ಕವಿತೆಯ ಬಂಧದಲ್ಲಿ ಅನುಭವದ ಬೆಳವಣಿಗೆಯ ಭಾಗಗಳಾಗಿ ಒಡಮೂಡಿದವು. ಬಿಡಿಯಾಗಿ ಎತ್ತಿಟ್ಟು ಪರಿಭಾವಿಸಿದಾಗಲೂ ಸ್ವಯಂಪೂರ್ಣತೆಯ ಅನುಭವವನ್ನು ವ್ಯಂಜಿಸುವ ಸಾಲುಗಳು. ಪದಕಾವ್ಯದ ಗುಣವೇ ಅಂಥದ್ದು. ಹಿಡಿದರೆ ಹಿಡಿಕೆಯೊಳಗಿನ ಕಾಳು, ಬಿಟ್ಟರೆ ಭೂಮಿಯೊಳಗಿನ ಬಿತ್ತ; ನೆಲದೆದೆಯ ತೇವದಲ್ಲಿ ಹದಬೆದೆಯ ಮುದದಲ್ಲಿ ಅಂಕುರಿಸಿ ಋತುಗಾನವಾಗುವ ಬದುಕಿನ ಸಿರಿ. ಇದನ್ನು ಅರ್ಥದ ಚೌಕಟ್ಟಿಗೆ ಬಂಧಿಸಹೋದರೆ ಆ ಕ್ಷಣದ ಅನ್ನದಗುಳಂತೆ ನಮ್ಮ ಹಸಿವಿಗೆ ಒದಗಿದ ಗ್ರಾಸವಾಗಬಹುದು. ಆದರೆ ಅರ್ಥದ ಹಂಗು ಹರಿದು ರೂಪಕಧ್ಯಾನದ ಓದಿನಲ್ಲಿ ಅನುಭಾವಿತವಾದಾಗ ಅದು ಅರಿವು, ಅನಿರ್ವಚನೀಯವಾದ ಅರಿವು. ಆ ಗುಣ ಈ ಕವಿತೆಗಿದೆ.

ಇದನ್ನು ಓದಿದ್ದೀರಾ?: ವಿಕಾಸ್ ಮೌರ್ಯರ ‘ಕುದಿವ ಕಣ್ಣೀರು’ ಕೃತಿ ಕುರಿತು ಭಾರತಿದೇವಿ ಬರೆಹ

ಇವರಿಗೆ ಕಾವ್ಯವೆನ್ನುವುದು ಬದುಕಧೇನಿಸುವ ಪ್ರಕ್ರಿಯೆ. ಹೀಗಾಗಿಯೇ ಇಲ್ಲಿ ಲೋಕಾಂತವೂ ಏಕಾಂತದ ಮೂಸೆಯಲ್ಲಿ ಕುದಿಗೊಂಡು ಪಾಕವಾಗಿದೆ, ಏಕಾಂತವೂ ಲೋಕಾಂತದ ವಿಸ್ತರಣೆಯಲ್ಲಿ ಚಿಂತನೆಗೆ ಒಡ್ಡಿಕೊಂಡು ಮುದವಾಗಿದೆ. ಪರಿಣಾಮದಲ್ಲಿ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವ ಪದಪಾಡಿನ ರಚನೆಗಳು ಇವಾಗಿವೆ.

ಬಿಡಿಸಿದರು ಬೇರುಗಳ ಬೇರೆಯಾಗಿ
ಮುಡಿಸಿದರು ಸಿಬಿರುಗಳ ಪಾದಪೂಜೆಗಾಗಿ
ಕಟ್ಟಿಗೆಗಳ ಒಟ್ಟು ಮಾಡಿದರೆ ಇಕ್ಕಟ್ಟುಗಳು ಬಿಗಿಯಾದವು
ಸುಳಿಮರದ ಕೊರಳು ಕಡಿದರೆ ಉರುಳುಗಳು ಉಕ್ಕಿದವು
ನೆಲಸೀಳುಗಳಲ್ಲಿ ರಕ್ತ ಒಸರಿದ ಗರಿಪಾದಗಳು
ಮೂಡಿಸಿದ ಚಿತ್ತಾರಗಳಲ್ಲಿ ನಿಗಿನಿಗಿ ಬೆಳಕು ಬೆಳೆದಾವು

ಯಾವ ವ್ಯಕ್ತಿ ಆತ್ಮನಿರೀಕ್ಷೆಗೆ ತನ್ನನ್ನು ಒಳಗು ಮಾಡಿಕೊಳ್ಳುವುದಿಲ್ಲವೋ ಅವನು ಏನು ಬರೆದರೂ ಅದು ಏನನ್ನೋ ಕಳೆದುಕೊಂಡ ಪೇಲವತೆಯಲ್ಲಿ ಬಳಲುತ್ತದೆ. ಆ ಏನನ್ನೋ ಎನ್ನುವುದು ಎಲ್ಲೋ ಹೊರಗಿನಿಂದ ಆವಾಹಿತವಾಗುವುದಲ್ಲ ತನ್ನೊಳಗಿನಿಂದ ಆವಿರ್ಭವಿಸುವುದು. ಆವಾಹಿತವಾದದ್ದು ವಿಸರ್ಜನೆಗೆ ಒಳಗಾಗಲೇಬೇಕಾಗುತ್ತದೆ. ಆದರೆ ಆವಿರ್ಭವಿಸಿದ್ದು ಆಗುತ್ತಲೇ ಸಾಗುವ ಜೀವವಿಕಾಸದ ನಿಸರ್ಗ ಗುಣ. ಕಾವ್ಯಕ್ಕಿರುವುದು ಇಂಥ ಜೀವವಿಕಾಸ ಧರ್ಮ. ಕಾಲದ ಹಂಗಿನಲ್ಲಿ ಅದು ಆವಿರ್ಭವಿಸಿದರೂ (ಹುಟ್ಟಿದರೂ) ಹಂಗುಹರಿದ ಪ್ರಜ್ಞೆಯಲ್ಲಿ ಪಲ್ಲವಿಸುತ್ತಾ ಫಲಧಾರಿಯಾಗುತ್ತದೆ. ಕಳೆದುಕೊಳ್ಳುವ ಪಡೆದುಕೊಳ್ಳುವ ಸಾತತ್ಯದಲ್ಲಿ ಸಮಕಾಲೀನಗೊಳ್ಳುತ್ತದೆ. ಆದ್ದರಿಂದಲೇ ಕಾವ್ಯದ ಭಾಷೆ ರೂಪಕದ ಭಾಷೆ ಪ್ರತಿಮೆ ಸಂಕೇತಗಳ ಸಂಧ್ಯಾಜ್ಞಾನದ ಒಳಭಾಷೆ. ಹೊರ ಹರಿವಿಗಿಂತ ಒಳ ಹರಿವಿನ ಭಾಷೆ.

ಮಾತು ಮುಂದಾಗದಂತೆ
ಮೌನ ಹಿಂದಾಗದಂತೆ
ತುದಿ ಮೊದಲುಗಳ
ಕಳಕೊಂಡಂತೆ
ಅದೆಂಥದ್ದೋ ಹೆಣಿಗೆಗಳು
ಕರುಳುಗಳೊಳಗೇ ಹೊಯ್ದಾಟ
ಹಚ್ಚನೆ ಹಸುರಿನ
ಬಣ್ಣ ಮೆಲ್ಲಗೆ ಕೆಂಪಗಾಗುತ್ತಾ
ಇಬ್ಬನಿಯ ಹನಿ ಜಾರಿದ
ಶಬುದಕೇ ಬೆಚ್ಚುವಂತಾಗಿದೆ
ಕಣ್ಣೊಳಗೇ ಇಂಗುತಿಹ ತನಿ
ಬೆಚ್ಚನೆಯ ರಕ್ತವನ್ನೂ
ತಣ್ಣಗೆ ಹೆಪ್ಪುಗಟ್ಟಿಸುತ್ತಿದೆ
ಬಿರಿಯಲು ಮೊಗ್ಗುಗಳು ಹಂಬಲಿಸಿವೆ
ಚಿಗುರುವ ಬೇರುಗಳು ಬಿಕ್ಕಳಿಸಿವೆ

ಮನುಜಮತ ವಿಶ್ವಪಥವೆಂದರು ಕುವೆಂಪು. ಆದರೆ ಆ ವಿಶ್ವಪಥ ಬದುಕಿನ ವಾಸ್ತವವಾಗದೆ ಮನುಜನ ಸೊಕ್ಕಿನ ಉರವಣಿಗೆಯ ಕಟುಸತ್ಯವಾಗಿರುವಾಗ ಈ ಎರಡೂ ವೈರುಧ್ಯಗಳ ಮುಖಾಮುಖಿಯಲ್ಲಿ ಬದುಕಿನ ಬೆಳಗನ್ನು ಕಾಣುವ ನಿರೀಕ್ಷಿಸುವ ಕಣ್ಣು ಕವಿಯದು. ಕಾವ್ಯದ ಒಳಹರಿವು ಈ ಬಗೆಯ ಚಿಂತನಮುಖಿ ಗುಣದಲ್ಲಿ ಸಾತತ್ಯವಾಗಿರುವುದು. ಮೇಲಿನ ಸಾಲುಗಳು ಕವಿಭಾಷೆಯ ಲಕ್ಷ್ಯಕ್ಕೆ ಉದಾಹರಣೆಯಾಗುತ್ತಲೇ ಕವಿ ಚಿಂತನೆಯ ಬೆಳಗಿಗೆ ಲಕ್ಷಣವಾಗಿರುವುದು ವಿಶೇಷ. ವಿರೋಧಕ್ಕೆ ಹುಟ್ಟಿಕೊಂಡ ಮಾತೇ ಗುಣವಿಶೇಷತೆಗೆ ಬಳಕೆಯಾಗುವುದೆಂದರೆ ಹೀಗೇ ಅಲ್ಲವೇ? ಇದು ಬದುಕಿನ ಕಟುವ್ಯಂಗ್ಯ ಕೂಡ!

ಇತ್ತೀಚಿನ ಹಲವು ಜನರ ಕಾವ್ಯರಚನೆಗಳೆನ್ನಿಸಿಕೊಂಡವುಗಳನ್ನು ಓದಿದಾಗ ವಾಚಾಳಿತನದ ಗದ್ಯದ ಮೆರವಣಿಗೆಯಲ್ಲಿ ವಿಜೃಂಭಿಸಿರುವ ಪದ್ಯಗಳಾಗಿ ಕೇಳಿಸುತ್ತವೆ; ಆತ್ಮವಿಮರ್ಶೆಯೆಂಬುದು ಹತ್ತಿರಕ್ಕೂ ಸುಳಿಯದ ಆತ್ಮರತಿಭಾವದ ಲೋಲುಪ ರಚನೆಗಳವು. ಪಿಸುದನಿಗಿಂತ ಘೋಷಣಾ ಮೊಳಗುಗಳು. ಇಂಥ ಹಿಂಡಿನ ನಡುವೆ ಓದುಗನ ಒಳಗನ್ನು ತಟ್ಟಿ ಪಿಸುದನಿಗೆ ಕಿವಿದೆರೆಯುವಂತೆ ಪ್ರೇರೇಪಿಸುವ ಕವಿತೆಗಳು ಮಹಾಯಾನಮಂಜುವಿನ ಕವಿತೆಗಳು. ಪ್ರಸ್ತುತದ ಸಾಮಾಜಿಕ ಸಾಂಸ್ಕೃತಿಕ ರಾಜಕೀಯ ವಿದ್ಯಮಾನದಲ್ಲಿ ಬೇಯುತ್ತಿರುವ ಭಾರತದ ಒಳಸಂಕಟಗಳು ವ್ಯಕ್ತಿಗತ ನೆಲೆಯ ಅನುಭವಗಳು ಗೆರೆಕೊರೆದು ವಿಭಜಿಸಲಾರದ ಒಳಧಾರೆಗಳಾಗಿ ಹರಿವುಗೊಂಡಿವೆ. ಕನ್ನಡದ ಮನಸ್ಸು ತನ್ನ ತಾಯಿಬೇರಿನ ಕಣ್ಣಿನಲ್ಲಿ ಬನಿಹೀರಿ ಬೆಳೆಸಿದ ಫಲರೂಪದ ಕವಿತೆಗಳಿವು; ಇವು ಏಕರೂಪೀ ಫಲಗಳಲ್ಲ, ಇಲ್ಲಿ ಕೀಡೆಗೆ ಬಲಿಯಾದ ಕುರುಟು ಕಾಯಿಗಳಿವೆ, ಹೂವಿನಲ್ಲೇ ಬಾಡಿದರೂ ತೊಟ್ಟುಕಳಚದ ಮುರುಟುಗಳಿವೆ ಅಷ್ಟೇ ಸಮೃದ್ಧಭಾವದ ಸಪೂರ ಫಲಗಳೂ ಇವೆ. ಓದುಗನ ಕಣ್ಣಿಗೆ ದಕ್ಕಿದಷ್ಟು ದಕ್ಕಿನ ಫಲ

ನಿಜವ ಕಂಡಾಗ ಬೆರಗುಗೊಂಡೆ
ಸುಳ್ಳು ಕಂಡಾಗಲೂ ಬೆರಗುಗೊಂಡೆ
ನಿಜದ ನಡಿಗೆಯೊಳು ಸುಳ್ಳಿನ ಪಾದವೊಂದು
ಅವಿತು ಕುಳಿತಿದ್ದ ಕಂಡು
ನನ್ನ ನಾನೇ ಎದುರುಗೊಂಡೆ
ಹೂವು ಮತ್ತೆ ಮರವಾಗುವಾ ವೇಳೆಯಲಿ
ಹರಿವ ನೀರು ಹೆಪ್ಪುಗಟ್ಟುದ ಕಂಡು ಬೆಚ್ಚಿದೆ.

ನಮ್ಮ ನಡುವಿನ ಹಲವು ಹಳವಂಡಗಳ ಅಳಲನ್ನು ಸ್ವಕೀಯ ಪ್ರಜ್ಞೆಗೆ ಹರಿಯಬಿಟ್ಟುಕೊಂಡಾಗ ನೆಮ್ಮದಿಯೆಂಬುದು ಮೃಗಜಲವಾಗುತ್ತದೆ. ಮೃಗಜಲದ ಬೆನ್ನುಹತ್ತಿದ ಪ್ರಜ್ಞೆಗೆ ನಿಸರ್ಗಾನುಭೂತಿ ನಿಜವನುಣಿಸುವ ತವರಾಗುತ್ತದೆ. ಪದಕಾವ್ಯದ ಬೆರಗಿಗೆ ಬೆನ್ನುಹತ್ತಿ ನಡೆದಿರುವ ಮಹಾಯಾನಿಗೆ ಮೌನದೊಳಗಿನ ಮಾತು ಕೂಡ ಧ್ಯಾನಗುಡಿಯ ದೀಪವಾಗಲಿ. ಆ ದೀಪ ತನ್ನ ಸುತ್ತಲಿನ ಸಾವಿರದ ಕಣ್ಣುಗಳಿಗೆ ತಮ್ಮನ್ನು ತಾವು ಕಾಣುವ ಕನ್ನಡಿಯಾಗಲಿ, ಹೆಬ್ಬಿರುಳಿನ ನಿಬ್ಬೆರಗಾಗಲಿ. ಶರಣು.

-ಪ್ರೊ. ಎಸ್.ಜಿ.ಸಿದ್ಧರಾಮಯ್ಯ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

Download Eedina App Android / iOS

X