2024ರ ಏಪ್ರಿಲ್ ದಿಂದ 2025ರ ಮಾರ್ಚ್‌ವರೆಗೆ ಜಿಲ್ಲೆಯಲ್ಲಿ ಒಟ್ಟು 58 ಬಾಲ್ಯ ವಿವಾಹ ಪ್ರಕರಣಗಳಲ್ಲಿ 55 ಬಾಲ್ಯ ವಿವಾಹ ತಡೆಯಯಲಾಗಿದ್ದು, 3 ಬಾಲ್ಯ ವಿವಾಹ ಜರುಗಿವೆ. ಅವುಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 2025ರ ಏಪ್ರಿಲ್-ಮೇ ತಿಂಗಳಲ್ಲಿ ಒಟ್ಟು 31 ಬಾಲ್ಯ ವಿವಾಹವನ್ನು ತಡೆಯಲಾಗಿದ್ದು, ಯಾವುದೇ ಬಾಲ್ಯ ವಿವಾಹ ಜರುಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬಾಲ್ಯ ವಿವಾಹ ತಡೆಗಟ್ಟುವ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ʼಬೀದರ ಜಿಲ್ಲೆಯಲ್ಲಿ ಎಲ್ಲೇ ಬಾಲ್ಯ ವಿವಾಹ ಕಂಡು ಬಂದಲ್ಲಿ ಕೂಡಲೇ ಪ್ರಕರಣ ದಾಖಲಿಸಿʼ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ʼಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಿದ್ದು, ಅವುಗಳನ್ನು ತಡೆಯುವ ಕೆಲಸ ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು. ಬಾಲ್ಯ ವಿವಾಹ ಮಾಡುತ್ತಿರುವ ಪೋಷಕರು, ಪೂಜಾರಿಗಳು, ಕಲ್ಯಾಣ ಮಂಟಪ ಮಾಲಿಕರು ಮತ್ತು ಆಮಂತ್ರಣ ಪತ್ರಿಕೆ ಅಂಗಡಿಯ ಮಾಲಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕುʼ ಎಂದರು.
ʼಮದುವೆ ವಯಸ್ಸಿಗೆ ಸಂಬಂಧಿಸಿದ ಜನನ ಪ್ರಮಾಣ ಪತ್ರ, ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿ ಅಥವಾ ವೈದ್ಯಕೀಯ ವಯಸ್ಸು ಪರೀಕ್ಷೆ ಪ್ರಮಾಣ ಪತ್ರ ಮಾತ್ರ ಪರಿಗಣಿಸಬೇಕು. ಶಾಲೆ ಬಿಟ್ಟ ಬಾಲಕಿಯರ ವಿವರವನ್ನು ಶಾಲಾ ಶಿಕ್ಷಣ ಇಲಾಖೆ ನೀಡಬೇಕು. ಶಾಲೆ ಬಿಡಲು ಕಾರಣವೇನು ಎಂದು ತಿಳಿದುಕೊಳ್ಳಬೇಕು. ಗ್ರಾಮ ಪಂಚಾಯಿತಿಯ ಕಾವಲು ಸಮಿತಿಯು ಕೂಡ ಗ್ರಾಮಗಳಲ್ಲಿ ಬಾಲ್ಯ ವಿವಾಹ ಕಂಡು ಬಂದಲ್ಲಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕುʼ ಎಂದು ತಿಳಿಸಿದರು.

ʼಜಿಲ್ಲೆಯಲ್ಲಿ 2024-2025ನೇ ಸಾಲಿನಲ್ಲಿ ಆರ್‌ಸಿಎಚ್ ಪೋರ್ಟಲ್‌ನಲ್ಲಿ ನೋಂದಣಿಯಾದ ಬಾಲ ಗರ್ಭಿಣಿಯರ ಸಂಖ್ಯೆ 75 ಇದ್ದು, ಇದನ್ನು ನಾವು ಗಂಭೀರವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಆಗದಂತೆ ಎಚ್ಚರವಹಿಸಬೇಕುʼ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ʼಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 37 ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿವೆ, ಹಾಗಾಗಿ ಜನರಿಗೆ ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಪೋಕ್ಸೋ ಪ್ರಕರಣದ ಹೆಣ್ಣು ಮಕ್ಕಳನ್ನು ಸಖಿ ಒನ್ ಸೆಂಟರ್ ಮೂಲಕ ಕೌನ್ಸಿಲಿಂಗ್ ಮಾಡಿ ಒಂದೇ ಸೂರಿನಡಿ ಸಹಾಯ ಮಾಡಲಾಗುವುದುʼ ಎಂದರು.
ʼಜಿಲ್ಲೆಯಲ್ಲಿ ಚಿಂದೋಡಿ ಆಯುವ ಮತ್ತು ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಕಾಪಾಡಿ ಅವರಿಗೆ ಶಾಲೆಗೆ ದಾಖಲಿಸಬೇಕುʼ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ : ಬೀದರ್ | ಕಲಾ ಗ್ರಾಮ ನಿರ್ಮಾಣಕ್ಕೆ ಶೀಘ್ರವೇ ಸ್ಥಳ ಅಂತಿಮ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀಧರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗುರುರಾಜ, ಡಿವೈಎಸ್‌ಪಿ ಶಿವನಗೌಡ ಪಾಟೀಲ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.