“ಶೇ.91-92ರಷ್ಟು ಸಮೀಕ್ಷೆ ಮುಗಿದಿದೆ ಎಂದು ನಾಗಮೋಹನ್ ದಾಸ್ ಆಯೋಗವು ಹೇಳುತ್ತಿದೆ. ಇದರ ಕುರಿತೂ ಆಯೋಗವು ಸಮುದಾಯಗಳ ಮುಖಂಡರನ್ನು ಸಮೀಕ್ಷೆಯಲ್ಲಿ ಸಹಕರಿಸುವಂತೆ ಕೋರಿತ್ತು. ಈಗ ಸಮೀಕ್ಷೆಯ ಕಾಲಾವಧಿಯು ಮುಗಿಯುತ್ತಿದ್ದು, ಅವಧಿಯನ್ನು ವಿಸ್ತರಿಸಬೇಕೆಂಬ ಕೂಗು ಕೇಳಿಬರುತ್ತಿದೆ. ಆದರೆ ಈಗಾಗಲೇ ಸರ್ವೋಚ್ಚ ನ್ಯಾಯಾಲಯವು ಆದೇಶ ನೀಡಿ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ವಿಳಂಬವನ್ನು ಮಾಡದೆ, ಒಳಮೀಸಲಾತಿ ಜಾರಿ ಮಾಡಲು ಸರ್ಕಾರ ಮುಂದಾಗಬೇಕಿದೆ” ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟವು ಸರ್ಕಾರವನ್ನು ಹಾಗು ಜಸ್ಟೀಸ್ ನಾಗಮೋಹನ್‌ದಾಸ್ ಆಯೋಗವನ್ನು ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಬಸವರಾಜ್ ಕೌತಾಳ್, “30 ವರ್ಷ ಒಳಮೀಸಲಾತಿಗಾಗಿ ನಡೆದ ಹೋರಾಟವನ್ನು ಪರಿಗಣಿಸಿ ಮಾನ್ಯ ಸರ್ವೋಚ್ಚ ನ್ಯಾಯಾಲಯ ಆಗಸ್ಟ್ 1, 2024 ರಂದು ಒಳಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿ ತೀರ್ಪು ನೀಡಿತ್ತು. ಅಲ್ಲದೇ ಸೂಕ್ತ ದತ್ತಾಂಶಗಳ ಸಹಾಯದಿಂದ ಒಳಮೀಸಲಾತಿಯನ್ನು ಜಾರಿ ಮಾಡುವಂತೆಯೂ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ಕರ್ನಾಟಕದಲ್ಲಿ ಈಗಾಗಲೇ ಪರಿಶಿಷ್ಟ ಜಾತಿಗಳ ಜನಸಂಖ್ಯೆಯನ್ನು ಅಧ್ಯಯನ ಮಾಡಲು ನೇಮಿಸಿದ್ದ ನ್ಯಾ. ಎ.ಜೆ ಸದಾಶಿವ ಆಯೋಗದ ವರದಿಯನ್ನು ಸರಿಯಾದ ವೈಜ್ಞಾನಿಕ ದತ್ತಾಂಶಗಳು ಇಲ್ಲದ ಕಾರಣ ಹಲವು ಪರಿಶಿಷ್ಟ ಜಾತಿಗಳು ವಿರೋಧಿಸಿದ್ದವು. ಒತ್ತಡಕ್ಕೆ ಮಣಿದ ಸರ್ಕಾರ ನಿವೃತ್ತ ನ್ಯಾಯಾಧೀಶರಾದ ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಆದೇಶಿಸಿತ್ತು. ಆಯೋಗಕ್ಕೆ ಸೂಕ್ತ ಕಾರ್ಯಸೂಚಿ ನೀಡಲು, ಕಚೇರಿಯನ್ನು ಒದಗಿಸಲೂ ಹೋರಾಟ ನಡೆಸಬೇಕಾಯಿತು. ನವೆಂಬರ್ 13ರಂದು ಸರ್ಕಾರದ ಕ್ಯಾಬಿನೆಟ್ ಸಭೆಯು ಜಸ್ಟೀಸ್ ನಾಗಮೋಹನ್ ದಾಸ್‌ರವರ ಏಕಸದಸ್ಯ ಆಯೋಗವನ್ನು ನೇಮಿಸಿ 2 ತಿಂಗಳ ಕಾಲಾವಕಾಶ ನೀಡಿತ್ತು. ಅಲ್ಲದೇ ವರದಿ ಬರುವವರೆಗೂ, ಒಳಮೀಸಲಾತಿ ಜಾರಿಯಾಗುವವರೆಗೂ ಯಾವುದೇ ಹೊಸ ನೇಮಕಾತಿಯನ್ನು ನಡೆಸದಂತೆ ತೀರ್ಮಾನಿಸಿತ್ತು. 3 ತಿಂಗಳ ಕಾಲಾವಧಿಯ ನಂತರದಲ್ಲಿ ಪರಿಶಿಷ್ಟ ಜಾತಿಗಳ ಒತ್ತಡ ಹೆಚ್ಚಾದ ಕಾರಣ ಜಸ್ಟೀಸ್ ನಾಗಮೋಹನ್ ದಾಸ್ ಏಕಸದಸ್ಯ ಆಯೋಗವು ಮಧ್ಯಂತರ ವರದಿಯನ್ನು 27 ಮಾರ್ಚ್ 2025ರಂದು ಸರ್ಕಾರಕ್ಕೆ ಸಲ್ಲಿಸಿತ್ತು.
ವರದಿಯ ಶಿಫಾರಸ್ಸುಗಳಲ್ಲಿ ಮುಖ್ಯವಾಗಿ ಈಗ ಲಭ್ಯವಿರುವ ಯಾವುದೇ ವರದಿ, ದತ್ತಾಂಶಗಳಲ್ಲಿ ವೈಜ್ಞಾನಿಕ ಜನಸಂಖ್ಯೆಯ ಮಾಹಿತಿ ಇಲ್ಲದ ಕಾರಣ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಬೇಕೆಂದು ತಿಳಿಸಿತ್ತು. ಇದಕ್ಕೆ ಶಾಶ್ವತ ಪರಿಹಾರವೆಂದೇ ಅರಿತಿದ್ದ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟವು ನಿರಂತರವಾಗಿ ವೈಜ್ಞಾನಿಕ ಸಮೀಕ್ಷೆ ನಡೆಸಿ 101 ಜಾತಿಗಳಿಗೂ ಜನಸಂಖ್ಯೆಯ ಆಧಾರದಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡುವಂತೆ ಒತ್ತಾಯಿಸಿತ್ತು. ಸರ್ಕಾರವು ಜಸ್ಟೀಸ್ ನಾಗಮೋಹನ್ ದಾಸ್ ನೇತೃತ್ವದಲ್ಲಿ 60 ದಿನಗಳ ಕಾಲಾವಕಾಶ ನೀಡಿ ಸಮೀಕ್ಷೆ ನಡೆಸಲು ಆದೇಶ ನೀಡಿತ್ತು.
ಮೇ 5, 2025ರಂದು ಹೊಸ ತಂತ್ರಜ್ಞಾನ ಸಹಾಯದಿಂದ ಜಿಪಿಎಸ್ ಬಳಸಿ ವೈಜ್ಞಾನಿಕವಾಗಿ ಸಮೀಕ್ಷೆ ಕೆಲಸ ಆರಂಭಿಸಿದ ಆಯೋಗವು ಎರಡು ಬಾರಿ ಅವದಿಯನ್ನು ವಿಸ್ತರಣೆ ಮಾಡಿತ್ತು. 2011ರ ಜನಗಣತಿಯ ಆಧಾರದಲ್ಲಿ ಆಯಾ ಜಿಲ್ಲೆಗಳ ಪರಿಶಿಷ್ಟರ ಜನಗಣತಿಯನ್ನು ನಡೆಸಿದೆ. ಸಮೀಕ್ಷೆಯಲ್ಲಿ ಕೆಲವು ಜಿಲ್ಲೆಗಳಲ್ಲಿ 100ರಷ್ಟು ಸಮೀಕ್ಷೆಯಲ್ಲಿ ಪಾಲ್ಗೊಂಡು ಮಾಹಿತಿಯನ್ನು ಒದಗಿಸಿದ್ದಾರೆ. ಕೆಲವು ಜಿಲ್ಲೆಗಳಲ್ಲಿ 100ರಷ್ಟು ಸಮೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ ಎಂದು ಆಯೋಗ ತಿಳಿಸಿದೆ” ಎಂದು ವಿವರಿಸಿದರು.
ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಸದಸ್ಯರಾದ ಶಿವಣ್ಣ ಕನಕಪುರ, ಚಂದ್ರು ತರಹುಣಿಸೆ, ವೇಣುಗೋಪಾಲ್ ಮೌರ್ಯ ಉಪಸ್ಥಿತರಿದ್ದರು.