ಅಖಿಲ ಭಾರತ ವಕೀಲರ ಒಕ್ಕೂಟ(AILU) ರಾಜ್ಯ ಸಮಿತಿ ಹಾಗೂ ಜಿಲ್ಲಾಸಮಿತಿಯ ಜಂಟಿ ನಿಯೋಗವು ಶುಕ್ರವಾರ ವಿಧಾನ ಸೌಧದಲ್ಲಿ ಕಾನೂನು ಸಚಿವರಾದ ಹೆಚ್.ಕೆ. ಪಾಟೀಲರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿತು.
ಪೊಲೀಸರ ಏಕಪಕ್ಷೀಯ ವರ್ತನೆಗಳಿಂದ ರಕ್ಷಣೆ ಮತ್ತು ವಕೀಲರ ಸಂರಕ್ಷಣೆ ಕಾಯ್ದೆ 2024ಕ್ಕೆ ಸೂಕ್ತ ತಿದ್ದುಪಡಿಯಾಗಬೇಕು, ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ಮಾರ್ಗಸೂಚಿ ಪಾಲಿಸಬೇಕು, ಕಿರಿಯ ವಕೀಲರಿಗೆ 2ವರ್ಷಗಳ ಕಾಲ ಮಾಸಿಕ 10,000 ಸಹಾಯಧನ ನೀಡಬೇಕು, ಎಲ್ಲ ತಾಲ್ಲೂಕು ವಕೀಲರ ಸಂಘಗಳಿಗೆ ವರ್ಷಕ್ಕೆ ಐದು ಲಕ್ಷ ಅನುದಾನ ಮತ್ತು ಜಿಲ್ಲಾ ಸಂಘಗಳಿಗೆ ಹತ್ತು ಲಕ್ಷ ಅನುದಾನ ನೀಡಬೇಕು, ವಕೀಲರಿಗೆ ಕಡ್ಡಾಯವಾಗಿ ವೈದ್ಯಕೀಯ ಮತ್ತು ಜೀವ ವಿಮಾ ಸೌಲಭ್ಯವನ್ನು ಒದಗಿಸಬೇಕು, ಪ್ರತಿ ಜಿಲ್ಲೆಗೊಂದರಂತೆ ಕಾನೂನು ಕಾಲೇಜು ಸ್ಥಾಪಿಸಬೇಕು, ಹೆಚ್ಚುವರಿ ನ್ಯಾಯಾಲಯ ಸ್ಥಾಪಿಸಬೇಕು, ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರ ಅಕಾಡೆಮಿ ಸ್ಥಾಪಿಸಬೇಕು, ಅವೈಜ್ಞಾನಿಕ ಬಾರ್ ಪರೀಕ್ಷೆ ರದ್ದುಪಡಿಸಬೇಕು ಮುಂತಾದ 13 ಬೇಡಿಕೆಗಳ ಕುರಿತು ಚರ್ಚಿಸಲಾಯಿತು.
ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ರಾಜ್ಯಾಧ್ಯಕ್ಷರಾದ ಹರೀಂದ್ರ, ರಾಜ್ಯ ಕಾರ್ಯದರ್ಶಿ ಶ್ರೀನಿವಾಸಕುಮಾರ, ಖಜಂಚಿ ರಾಮಚಂದ್ರರೆಡ್ಡಿ, ಬೆಂಗಳೂರು ಜಿಲ್ಲಾಧ್ಯಕ್ಷರಾದ ಕೆ.ಆರ್.ವೆಂಕಟೇಶ್ ಗೌಡ, ಜಿಲ್ಲಾ ಪದಾಧಿಕಾರಿಗಳಾದ ಆನಂದ್, ಶರಣಬಸವ ಮರದ್, ಹುಳ್ಳಿ ಉಮೇಶ್, ಭೀಮನಗೌಡ, ಹೊಸಕೋಟೆಯ ರಮೇಶ್ ರವಿಕುಮಾರ್, ಹನುಮಂತರಾವ್, ಜಿಲ್ಲಾ ಸಮಿತಿ ಸದಸ್ಯರಾದ ಮೈಲೇಶ್, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ತದನಂತರ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ರಾಜ್ಯಾಧ್ಯಕ್ಷರಾದ ಹರೀಂದ್ರ, ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಗೌಡ, ರಾಜ್ಯ ಕಾರ್ಯದರ್ಶಿ ಶ್ರೀನಿವಾಸಕುಮಾರ, ಜಿಲ್ಲಾ ಕಾರ್ಯದರ್ಶಿ ಶಿವಾರೆಡ್ಡಿಯವರು ಮಾತನಾಡಿದರು. ಈ ಸಂದರ್ಭದಲ್ಲಿ ರಾಮಚಂದ್ರರೆಡ್ಡಿ, ಹುಳ್ಳಿ ಉಮೇಶ್, ಆನಂದ್, ಮೈಲೇಶ್ ಮುಂತಾದವರು ಉಪಸ್ಥಿತರಿದ್ದರು.