ಏತ ನೀರಾವರಿ ಯೋಜನೆಯ ಪಂಪ್ ಗೆ ಶಾಸಕ ಶ್ರೀನಿವಾಸ ಮಾನೆ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಬಾಳಂಬೀಡ ಗ್ರಾಮದ ಪಂಪಹೌಸ್‌ನಲ್ಲಿ ಚಾಲನೆ ನೀಡಿ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಲಾಯಿತು.
ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು ಹಾಗಾಗಿ ಪಂಪ್ ಚಾಲನೆಗೊಳಿಸಿ ತಾಲೂಕಿನ 77 ಗ್ರಾಮಗಳ 162 ಕೆರೆಗಳಿಗೆ ನೀರು ಹರಿಸಲಾರಂಭಿಸಲಾಯಿತು.
ಶಾಸಕ ಶ್ರೀನಿವಾಸ ಮಾನೆ ಮಾತನಾಡಿ “ಈ ಯೋಜನೆಯಿಂದ ಜನ, ಜಾನುವಾರು, ಕುಡಿಯುವ ನೀರು ಹಾಗೂ ಅಚ್ಚುಕಟ್ಟು ಪ್ರದೇಶದ ರೈತರ ಉಪಯೋಗಕ್ಕಾಗಿ ನೀರು ಪೂರೈಸುವ ಜೊತೆಗೆ ಅಂತರ್ಜಲ ಮಟ್ಟದ ಸುಧಾರಣೆಗೂ ಅನುಕೂಲವಾಗಲಿದೆ. ಕಳೆದ ವರ್ಷ ಯೋಜನೆ ವ್ಯಾಪ್ತಿಯ ಎಲ್ಲ ಕೆರೆಗಳನ್ನು ತುಂಬಿಸಿರುವ ಕಾರಣ ಅನುಕೂಲವಾಗಿತ್ತು. ಈ ಬಾರಿ ಅವಧಿಗೆ ಮೊದಲೇ ಪಂಪ್ ಆರಂಭಿಸಲಾಗಿದ್ದು, ಕರಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಹೇಳಿದರು.
“ನದಿ ನೀರು ಸದ್ಬಳಕೆ ಮಾಡಿಕೊಂಡು ಎಲ್ಲ ಕೆರೆಗಳನ್ನು ತುಂಬಿಸುವಂತೆ” ಇದೇ ಸಂದರ್ಭದಲ್ಲಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ನೀರಾವರಿ ನಿಗಮದ ಎಇಇ ಪ್ರಹ್ಲಾದ ಶೆಟ್ಟಿ ಮಾತನಾಡಿ, “3250 ಎಚ್.ಪಿ. ಸಾಮರ್ಥ್ಯದ ಒಟ್ಟು 6 ಪಂಪುಗಳನ್ನು ಅಳವಡಿಸಲಾಗಿದ್ದು, ಸದ್ಯ ದಿನದ 22 ಗಂಟೆಗಳ ಕಾಲ ಒಂದು ಪಂಪು ನೀರು ಹರಿಸಲಿದೆ. ನೀರಿನ ಹರಿವು ಆಧರಿಸಿ ಇನ್ನುಳಿದ ಪಂಪುಗಳನ್ನು ಆರಂಭಿಸಲಾಗುವುದು. ವರದಾ ನದಿಯಿಂದ ಒಟ್ಟು 0.445 ಟಿಎಂಸಿ ನೀರನ್ನು ಎತ್ತಿ ಕೆರೆಗಳನ್ನು ತುಂಬಿಸಲಾಗುವುದು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಜಿಪಂ ಮಾಜಿ ಸದಸ್ಯ ಮಿಯ್ಯಾಜಾನ್ ಕಂಬಳಿ, ತಾಪಂ ಮಾಜಿ ಅಧ್ಯಕ್ಷ ರಾಜೇಂದ್ರ ಬಾರ್ಕಿ, ಮುಖಂಡರಾದ ಫಕ್ಕೀರಪ್ಪ ಚಿಕ್ಕಜ್ಜನವರ, ಶಿವಣ್ಣ ಬಾರ್ಕಿ, ಮಂಜಣ್ಣ ತಡಸದ, ಬಸವರಾಜ ಚಲವಾದಿ, ದಿನೇಶ ಕಂಬಿ, ರುದ್ರಪ್ಪ ಹೇರೂರ, ದೇವೇಂದ್ರಪ್ಪ ಕತ್ತಿ, ಉಡುಚಪ್ಪ ಮಾಸಣಗಿ, ರಾಜೇಂದ್ರ ಜಿನ್ನಣ್ಣನವರ, ಗುಡ್ಡಣ್ಣ ಕೆಂಚಣ್ಣನವರ, ರಫೀಕ್ ಉಪ್ಪಣಸಿ ಜಗದೀಶ್ ಹರಿಜನ್ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಇದ್ದರು.
