ಪ್ರಸ್ತುತ ನಮ್ಮ ಸುತ್ತ-ಮುತ್ತ ಜಡ್ಡುಗಟ್ಟಿದ ಮನಸ್ಥಿತಿ ಇದ್ದು, ಈ ಕಟು ವಾಸ್ತವವನ್ನು ತಿಳಿಸುವ ಕೆಲಸವನ್ನು ʼಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಸಣ್ಣ ಕತೆಗಳ ಕಥಾ ಸಂಕಲನ ಮಾಡಿದೆ ಎಂದು ಸಾಹಿತಿ ಭಾರತೀದೇವಿ ಹೇಳಿದರು.
ದಾವಣಗೆರೆ ನಗರದ ಆರ್ ಎಲ್ ಕಾನೂನು ಕಾಲೇಜಿನಲ್ಲಿ ಮೇ ಸಾಹಿತ್ಯ ಸಂಘಟನೆ ಹಾಗೂ ಲಡಾಯಿ ಪ್ರಕಾಶನ ಗದಗ ಸಂಘಟನೆಗಳ ಸಂಯುಕ್ತಾಶ್ರಯ ಮತ್ತು ಈ ದಿನ.ಕಾಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರೀನಿವಾಸ ಬಿ ಅವರ ಸಣ್ಣ ಕಥೆಗಳ ಸಂಕಲನ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
“ಹಸಿವಿನ ಸಾವು ಹಾಗೂ ಅನಾರೋಗ್ಯದ ಸಾವು ಕೇವಲ ಸಾವಲ್ಲ. ಅವು ವ್ಯವಸ್ಥಿತ ಕೊಲೆ ಎನ್ನುವ ಕಥಾ ಸಾರಂಶಗಳನ್ನು ಈ ಕತೆ ಹೊಂದಿದೆ. ಅಭಿವೃದ್ಧಿಯ ಹೆಸರಿನಲ್ಲಿ ಏನೆಲ್ಲ ಅವಾಂತರಗಳು ನಡೆಯುತ್ತಿವೆ ಎನ್ನುವುದನ್ನು ಗಣಿಗಾರಿಕೆಯ ಕರಾಳತೆಗೆ ಒಳಗಾದ ಸಂಡೂರಿನ ಮುಸ್ಸಂಜೆಯ ಚಿತ್ರ ಕತೆ ಹೊಂದಿದೆ” ಎಂದರು.
“ವ್ಯಕ್ತಿಯೊಬ್ಬ ಮನೆಯಲ್ಲಿದ್ದ ಅಕ್ಕಿ, ಕಾಳು, ಬೇಳೆ ಮಾರಾಟ ಮಾಡಿ ನ್ಯಾಯಾಲಯಕ್ಕೆ ಬಂದು ಕಟಕಟೆಯಲ್ಲಿ ನಿಂತು ನ್ಯಾಯ ಕೇಳುವಾಗ ಹಸಿವಿನ ಅನುಭವ ಹೇಳಲು ಸಾಧ್ಯವಿಲ್ಲ ಎನ್ನುತ್ತಾನೆ. ಈ ಕಥೆಯಲ್ಲಿ ನ್ಯಾಯಾಂಗ ಕೂಡ ಸರಿಯಾದ ದಾರಿಯಲ್ಲಿ ಇಲ್ಲ ಎನ್ನುವ ಸತ್ಯವನ್ನು ಹೇಳುವ ಪ್ರಯತ್ನ ಮಾಡಲಾಗಿದೆ” ಎಂದು ಹೇಳಿದರು.
“ನ್ಯಾಯಾಂಗ ಕೂಡ ಚೆನ್ನಾಗಿ ಕೆಲಸ ಮಾಡಬೇಕಾದರೆ ನಮ್ಮ ಸುತ್ತ ಪ್ರಜ್ಞಾವಂತ ಸಮಾಜ ಕೂಡ ಇರಬೇಕಾಗುತ್ತದೆ. ಇಂಥಹ ಅನೇಕ ವೈರುಧ್ಯಮಯ ಮನಮಿಡಿಯುವ ಚಿತ್ರಣಗಳನ್ನು ಕತೆಗಾರ ಹಿಡಿದಿಟ್ಟಿದ್ದಾರೆ. ಇತ್ತೀಚೆಗೆ ಈ ರೀತಿಯ ಸಾಮಾಜಿಕ ಪ್ರಜ್ಞೆಯುಳ್ಳ ಕತೆಗಾರರು ಬರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ. ಒಳ್ಳೆಯ ಸಂವೇದನೆ ಮತ್ತು ಚಿಂತನೆಗೆ ಹಚ್ಚುವ ಕತೆಗಳನ್ನು ಜಿ. ಶ್ರೀನಿವಾಸ್ ಬರೆದಿದ್ದಾರೆ” ಎಂದು ಬಣ್ಣಿಸಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಭಾರೀ ಮಳೆ; ತೆಪ್ಪದಲ್ಲಿ ಆಸ್ಪತ್ರೆಗೆ ರೋಗಿಗಳ ರವಾನೆ
ಬೆಂಗಳೂರಿನ ಕೆ ಪಿ ಸುರೇಶ್ ಮಾತನಾಡಿ, “ಲೇಖಕ ಶ್ರೀನಿವಾಸ್ ಸಂವೇದನೆ ಉಳ್ಳವರು, ಅವರ ಸುತ್ತ ಮುತ್ತಲಿನ ಸಮಾಜದ ಆಗು ಹೋಗುಗಳಿಗೆ ಅವರು ಕಣ್ಣೀರಾಗಿ ಬರೆಯುತ್ತಾರೆ, ಆದ್ದರಿಂದಲೇ ಇಂತಹ ಕಥಾಸಂಕಲನ ಬಿಡುಗಡೆ ಆಗಿದೆ. ಅವರ ಹತ್ತಿರ ಇನ್ನೂ ಹತ್ತಾರು ಕೃತಿಗಳಿಗಾಗುವಷ್ಷು ಕಥೆಯ ಸರಕಿದೆ, ಇನ್ನಷ್ಟು ಕೃತಿಗಳನ್ನು ರಚಿಸಿ ಹೊರ ಜಗತ್ತಿಗೆ ತಲ್ಲಣಗಳನ್ನು ಪರಿಚಯಿಸುವ ಕೆಲಸ ಮಾಡಲಿ” ಎಂದು ಹಾರೈಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕುಮಾರ್, ಕೆ ಪಿ ಸುರೇಶ್, ಎಂ ಜಿ ಈಶ್ವರಪ್ಪ, ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ ತಾಳ್ಯ, ಸನಾವುಲ್ಲಾ ನವಿಲೇಹಾಳ್, ಅನೀಸ್ ಪಾಶ ಇದ್ದರು.