ಅಲ್ಪಸಂಖ್ಯಾತರಿಗೆ ಶೇ.15 ಮೀಸಲಾತಿ | ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ತೀರ್ಮಾನ: ಸಿದ್ದರಾಮಯ್ಯ

Date:

Advertisements
  • ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಆಧಾರದ ಮೇಲೆ ತೆಗೆದುಕೊಂಡ ತೀರ್ಮಾನ
  • ಬಿಜೆಪಿಯವರ ಟೀಕೆಗಳು ಕೇವಲ ದುರುದ್ದೇಶದ ಹಾಗೂ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ

ರಾಜ್ಯ ಸರ್ಕಾರದ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಕ್ರಿಶ್ಚಿಯನ್‌, ಮುಸ್ಲಿಂ, ಜೈನರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಫಲಾನುಭವಿಗಳ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸಚಿವ ಸಂಪುಟವು ಒಂದು ನಿರ್ಣಯವನ್ನು ಕೈಗೊಂಡಿದೆ. ಇದು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿರುವ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ (2019)ರ ಆಧಾರದ ಮೇಲೆ ತೆಗೆದುಕೊಂಡ ತೀರ್ಮಾನವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಸತಿ ಯೋಜನೆಗಳಿಗೆ ಶೇ.10 ರಿಂದ ಶೇ.15ಕ್ಕೆ ಅಲ್ಪಸಂಖ್ಯಾತರ ಮೀಸಲಾತಿ ಪ್ರಮಾಣ ಹೆಚ್ಚಳ ಕುರಿತ ಪ್ರತಿಪಕ್ಷಗಳ ಟೀಕೆಗೆ ಉತ್ತರಿಸಿರುವ ಸಿಎಂ, “ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಸ್ಥೆಗಳಲ್ಲಿ ಸಾಧ್ಯವಿರುವ ಎಲ್ಲ ಅವಕಾಶಗಳನ್ನು ಬಳಕೆ ಮಾಡಿಕೊಂಡು ಅಲ್ಪಸಂಖ್ಯಾತ ಸಮುದಾಯಗಳಿಗೆ ಶೇ.15 ಭೌತಿಕ ಹಾಗೂ ಆರ್ಥಿಕ ಗುರಿಯನ್ನು ಸಾಧಿಸಬೇಕೆಂದು ಈ ಕಾರ್ಯಕ್ರಮ ಸ್ಪಷ್ಟವಾಗಿ ನಿರ್ದೇಶಿಸುತ್ತದೆ” ಎಂದಿದ್ದಾರೆ.

“ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದಲೇ ನೀಡಲಾದ ಮಾರ್ಗಸೂಚಿಗಳಾಗಿದ್ದು, ಹಲವು ವರ್ಷಗಳಿಂದ ಜಾರಿಯಲ್ಲಿದೆ. ಇದೊಂದು ಅಸಂವಿಧಾನಿಕ ಅಥವಾ ತುಷ್ಟೀಕರಣ ನೀತಿಯಾಗಿದ್ದರೆ, ಈ ನಿಯಮವನ್ನು ಪಾಲನೆ ಮಾಡುವಂತೆ ಕೇಂದ್ರ ಸರ್ಕಾರ ಯಾಕೆ ಎಲ್ಲ ರಾಜ್ಯಗಳಿಗೆ ತಿಳಿಸಿದೆ? ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಂತಹ ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಯಾಕೆ ಇದನ್ನು ಅನುಷ್ಠಾನ ಮಾಡಲಾಗುತ್ತಿದೆ” ಎಂದು ಪ್ರಶ್ನಿಸಿದ್ದಾರೆ.

Advertisements

“ನಮ್ಮ ನಿರ್ಣಯವು ವಸತಿ ಹಂಚಿಕೆಯಲ್ಲಿ ಹೆಚ್ಚುವರಿ ಮೀಸಲಾತಿಯನ್ನು ಇಡೀ ರಾಜ್ಯಕ್ಕೆ ಅನ್ವಯಿಸುವಂತದ್ದಲ್ಲ, ಕೇವಲ ನಿರ್ದಿಷ್ಟ ಸವಾಲುಗಳಿಗೆ ಮಾತ್ರ ಸೀಮಿತವಾಗಿದೆ. ಅಲ್ಪಸಂಖ್ಯಾತ ಜನಸಂಖ್ಯೆಯು ಶೇ.10 ಗಿಂತ ಕಡಿಮೆಯಿರುವ ಹಲವು ಪಂಚಾಯತಿಗಳಲ್ಲಿ ನಿಗದಿಪಡಿಸಲಾದ ಶೇ.10 ಮೀಸಲಾತಿಯ ಅವಕಾಶವು ಸದ್ಬಳಕೆಯಾಗುತ್ತಿರಲಿಲ್ಲ, ಹೀಗಾಗಿ ನಿಗದಿಪಡಿಸಲಾದ ಗುರಿಯನ್ನು ತಲುಪಲು ಮತ್ತು ಲೋಪದೋಷಗಳನ್ನು ತಡೆಯಲು ಇಂತಹ ಪಂಚಾಯತಿಗಳಿಂದ ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಿರುವ ಕಡೆಗೆ ಗರಿಷ್ಠ ಶೇ.15 ಮಿತಿಗೆ ಒಳಪಟ್ಟು ಮರುಹಂಚಿಕೆ ಮಾಡಲಾಗಿದೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಗರೇ ಹೇಳಿ- ಅಘೋಷಿತ ತುರ್ತುಪರಿಸ್ಥಿತಿ ಮುಗಿಯುವುದು ಯಾವಾಗ?

“ಇದು ಕೇವಲ ಆಡಳಿತಾತ್ಮಕ ದೃಷ್ಟಿಯಿಂದ ಸಾಮಾನ್ಯ ವರ್ಗದಲ್ಲಿ ಮಾಡಿಕೊಂಡ ಹೊಂದಾಣಿಕೆಯಾಗಿದ್ದು, ಇದರಿಂದ ಎಸ್.ಸಿ, ಎಸ್‌,ಟಿ ಅಥವಾ ಒಬಿಸಿ ವರ್ಗಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಇದು ಕಾನೂನು ಇಲಾಖೆಯ ವಿಸ್ತೃತ ಪರಾಮರ್ಷೆಯ ನಂತರ ಕೈಗೊಂಡ ತೀರ್ಮಾನವಾಗಿದ್ದು, ಇದು ಕಾನೂನಾತ್ಮಕವಾಗಿಯೂ ಸಮರ್ಪಕವಾಗಿದೆ” ಎಂದು ತಿಳಿಸಿದ್ದಾರೆ.

ಬಿಜೆಪಿಯವರ ಟೀಕೆ ರಾಜಕೀಯ ಪ್ರೇರಿತ

“ಬಿಜೆಪಿಯವರ ಟೀಕೆಗಳು ಕೇವಲ ದುರುದ್ದೇಶದ ಹಾಗೂ ರಾಜಕೀಯ ಪ್ರೇರಿತವಾಗಿದೆ. ರಾಷ್ಟ್ರ ಮಟ್ಟದಲ್ಲಿ ಶೇ.15 ಮೀಸಲಾತಿಯನ್ನು ಜಾರಿಗೊಳಿಸಿರುವ ಅದೇ ಪಕ್ಷವು ಇಂದು ಕರ್ನಾಟಕದಲ್ಲಿ ತೆಗೆದುಕೊಂಡಿರುವ ಅದೇ ಕೇಂದ್ರದ ನೀತಿಯ ಮೂಲ ತತ್ವಗಳನ್ನೊಳಗೊಂಡ ನಿರ್ಣಯವನ್ನು ಟೀಕಿಸುತ್ತಿದೆ. ರಾಜ್ಯದ ಬಿಜೆಪಿ ನಾಯಕರಿಗೆ ವಿರೋಧವಿದ್ದರೆ ಅವರದೇ ಕೇಂದ್ರ ಸರ್ಕಾರವು ಈ ಮಾರ್ಗಸೂಚಿಗಳನ್ನು ಯಾಕೆ ಮುಂದುವರೆಸಿಕೊಂಡು ಹೋಗುತ್ತಿದೆ ಎಂಬುದನ್ನು ಮೊದಲು ವಿವರಿಸಲಿ. ಬೇರೆ ರಾಜ್ಯಗಳೂ ಅದನ್ನೇ ಪಾಲಿಸಬೇಕು ಎಂದೇಕೆ ಕೇಂದ್ರವು ಬಯಸುತ್ತಿದೆ ಎಂಬುದನ್ನು ವಿವರಿಸಲಿ” ಎಂದು ಆಗ್ರಹಿಸಿದ್ದಾರೆ.

“ಈ ರೀತಿಯ ವ್ಯವಸ್ಥಿತ ಅಪಪ್ರಚಾರದ ಹಿಂದೆ ಕೋಮು ವಿವಾದವನ್ನು ಸೃಷ್ಟಿಸುವ ಹುನ್ನಾರವಲ್ಲದೆ ಬೇರೇನು ಇಲ್ಲ. ಇದು ರಾಜ್ಯದ ಬಡವರು ಮತ್ತು ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲೆತ್ತುವ ಪ್ರಯತ್ನದ ದಿಕ್ಕು ತಪ್ಪಿಸುವ ಕುತಂತ್ರವಾಗಿದೆ. ನಮ್ಮ ಈ ನಿರ್ಧಾರದಿಂದ ಪ್ರಸಕ್ತ ವರ್ಷ ಒಂದರಲ್ಲೇ ಸುಮಾರು 34,000 ಅಲ್ಪಸಂಖ್ಯಾತ ಕುಟುಂಬಗಳಿಗೆ ಲಾಭವಾಗಲಿದೆ. ಆ ಪೈಕಿ ಹೆಚ್ಚಿನವರು ಭೂರಹಿತರು ಮತ್ತು ಮನೆಗಳ ತುರ್ತು ಅಗತ್ಯತೆ ಇರುವವರಾಗಿದ್ದಾರೆ. ಅಲ್ಪಸಂಖ್ಯಾತ ಅರ್ಜಿದಾರರು ಇಲ್ಲದ ಪಂಚಾಯತಿಗಳಲ್ಲಿನ ಉಪಯೋಗವಾಗದೆ ಉಳಿದ ವಸತಿ ಹಂಚಿಕೆಗಳನ್ನು ಅತಿ ಅಗತ್ಯವಿರುವೆಡೆಗೆ ಮರುಹಂಚಿಕೆ ಮಾಡುವ ಕ್ರಮವಾಗಿದೆ” ಎಂದು ವಿವರಿಸಿದ್ದಾರೆ.

“ಯಾವುದೇ ತಾಂತ್ರಿಕ ಕಾರಣಗಳಿಂದ ಯಾವೊಂದು ಮನೆಯು ನಿರ್ಮಾಣಗೊಳ್ಳದೆ ಬಾಕಿ ಉಳಿಯಬಾರದು ಎಂಬುದನ್ನು ಇದು ಖಚಿತಪಡಿಸುತ್ತದೆ. ಸಾಂವಿಧಾನಿಕ ಅವಕಾಶಗಳ ಮಿತಿಗೆ ಒಳಪಟ್ಟ ಈ ಪ್ರಯತ್ನವು ಸಮಾನತೆ, ದಕ್ಷತೆ ಮತ್ತು ಸಂಪನ್ಮೂಲದ ಸದ್ಭಳಕೆಯ ಉಪಯುಕ್ತ ಮಾದರಿಯಾಗಿದೆ. ಕರ್ನಾಟಕದಲ್ಲಿ ಸರ್ವರನ್ನು ಒಳಗೊಂಡ ಅಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರ ಒತ್ತುಕೊಡುತ್ತಿದೆ. ಬಿಜೆಪಿಯು ಹರಡುತ್ತಿರುವ ದ್ವೇಷಪೂರಿತ ಮತ್ತು ವಿಭಜನಕಾರಿ ರಾಜಕಾರಣವನ್ನು ನಾವು ತಿರಸ್ಕರಿಸುತ್ತೇವೆ. ನಮ್ಮ ಆಡಳಿತ ಮಾದರಿಯು ನ್ಯಾಯ, ಸಮಾನತೆ ಮತ್ತು ಸಹಾನುಭೂತಿಯ ಆಶಯಗಳನ್ನು ಹೊಂದಿದೆ. ಜಾತಿ ಅಥವಾ ಧರ್ಮದ ಭೇದವಿಲ್ಲದೆ ಪ್ರತಿಯೊಂದು ಬಡ ಕುಟುಂಬಕ್ಕೆ ತಲುಪುವಂತಹ ಯೋಜನೆಗಳನ್ನು ಜಾರಿ ಮಾಡುವುದನ್ನು ನಾವು ಮುಂದುವರಿಸುತ್ತೇವೆ” ಎಂದು ತಿಳಿಸಿದ್ದಾರೆ.

“ಬಿಜೆಪಿ ನಾಯಕರು ತಿರುಚಿದ ಮಾಹಿತಿ ಹರಡಿ ಕೋಮು ಬಣ್ಣ ಬಳಿಯುವ ಮೂಲಕ ಬಡವರ ಉದ್ಧಾರದ ಕಾರ್ಯಗಳಿಗೆ ಅಡ್ಡಿಯಾಗದೆ, ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಮೇಲೆತ್ತುವ ನಿಟ್ಟಿನಲ್ಲಿ ತಮ್ಮ ಸಂಕುಚಿತ ರಾಜಕೀಯವನ್ನು ಬದಿಗೊತ್ತಿ ನಮ್ಮ ಬೆಂಬಲಕ್ಕೆ ನಿಲ್ಲಲಿ ಎಂದು ನಾವು ಒತ್ತಾಯಿಸುತ್ತಿದ್ದೇವೆ” ಎಂದು ಸಿಎಂ ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X