ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಮಧ್ಯಸ್ಥಿಕೆ ವಹಿಸಿದ್ದೇನೆ. ಜೊತೆಗೆ, ಜಗತ್ತಿನಾದ್ಯಂತ ವಿವಿಧ ಸಂಘರ್ಷಗಳಲ್ಲಿ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದ್ದೇನೆ. ಆದರೂ, ನನ್ನ ಪ್ರಯತ್ನಗಳಿಗಾಗಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಷಾದ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಘೋಷಣೆಯಲ್ಲಿ ಟ್ರಂಪ್ ನಿರ್ಣಾಯಕ ಪಾತ್ರ ವಹಿಸಿದ್ದಕ್ಕಾಗಿ, ಅವರ ರಾಜತಾಂತ್ರಿಕ ಹಸ್ತಕ್ಷೇಪ ಮತ್ತು ಉತ್ತಮ ನಾಯಕತ್ವವನ್ನು ಉಲ್ಲೇಖಿಸಿ ಟ್ರಂಪ್‌ಗೆ 2026ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಶಿಫಾರಸು ಮಾಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ವರದಿಯಾದ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಟ್ರಂಪ್, “ನಾನು ಏನೇ ಮಾಡಿದರೂ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ” ಎಂದು ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ಥಾನ ನಡುವಿನ ಕದನ ವಿರಾಮ ಘೋಷಣೆಯಲ್ಲಿ ತಾವು ಮಧ್ಯಸ್ಥಿಕೆ ವಹಿಸಿದ್ದಾಗ ಪುನರುಚ್ಛರಿಸಿದ್ದಾರೆ.
“ಕಾಂಗೋ ಮತ್ತು ರುವಾಂಡಾ ನಡುವೆಯೂ ಅತ್ಯುತ್ತಮ ಒಪ್ಪಂದವನ್ನು ಮಾಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆ ಎರಡೂ ರಾಷ್ಟ್ರಗಳ ಪ್ರತಿನಿಧಿಗಳು ಒಪ್ಪಂದದ ದಾಖಲೆಗಳಿಗೆ ಸಹಿ ಹಾಕಲು ವಾಷಿಂಗ್ಟ್‌ನ್‌ಗೆ (ಅಮೆರಿಕ) ಬರುತ್ತಾರೆ. ಇದು ಆಫ್ರಿಕಾಗೆ ಶ್ರೇಷ್ಠ ದಿನ, ಸ್ಪಷ್ಟವಾಗಿ ಹೇಳಬೇಕೆಂದರೆ, ಇಡೀ ಜಗತ್ತಿಗೆ ಶ್ರೇಷ್ಠ ದಿನ” ಎಂದು ಟ್ರಂಪ್ ಬಣ್ಣಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಅಮೆರಿಕದ ಟ್ರಂಪ್ ಎಂಬ ಹುಚ್ಚನೂ, ಇರಾನಿನ ಇಸ್ಲಾಮಿಕ್ ಖಮೇನಿಯೂ: ಏನಾಗಲಿದೆ ಮಧ್ಯ ಪ್ರಾಚ್ಯ?
ಆದಾಗ್ಯೂ, ನಾನು ಎಷ್ಟೇ ಸಂಘರ್ಷಗಳನ್ನು ತಡೆಯಲು ಪ್ರಯತ್ನಗಳನ್ನು ಮಾಡಿದರೂ, ನನ್ನ ಪ್ರಯತ್ನಕ್ಕೆ ಉದಾತ್ತ ಬಹುಮಾನ ದೊರೆಯುವುದಿಲ್ಲ. ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದಕ್ಕಾಗಿ, ಸೆರ್ಬಿಯಾ ಮತ್ತು ಕೊಸೊವೊ ನಡುವಿನ ಯುದ್ಧವನ್ನು ನಿಲ್ಲಿಸಿದ್ದಕ್ಕಾಗಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಡುವುದಿಲ್ಲ” ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
“ಈಜಿಪ್ಟ್ ಮತ್ತು ಇಥಿಯೋಪಿಯಾ ನಡುವಿನ ಶಾಂತಿ ಕಾಪಾಡಿದ್ದಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿ ದೊರೆಯುವುದಿಲ್ಲ. ಮಧ್ಯಪ್ರಾಚ್ಯದಲ್ಲಿ ಅಬ್ರಹಾಂ ಒಪ್ಪಂದಗಳನ್ನು ಮಾಡಿದ್ದಕ್ಕಾಗಿ ತನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ” ಎಂದು ಟ್ರಂಪ್ ಬೇಸರ ವ್ಯಕ್ತಪಡಿಸಿದ್ದಾರೆ.