ಭಾರತವೂ ಸೇರಿದಂತೆ ಜಗತ್ತಿನ ನಾನಾ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಹೇರಿಕೆ ಸಮರ ಸಾಧಿಸಿದ್ದಾರೆ. ಭಾರತದ ಮೇಲೆ 26% ಸುಂಕ ವಿಧಿಸಲಾಗಿದ್ದು, ಭಾರತದಲ್ಲಿನ ಬಾಸ್ಮತಿ ಅಕ್ಕಿ ರಫ್ತು ಮಾರುಕಟ್ಟೆ ಸಂಕಷ್ಟ ಎದುರಿಸುತ್ತಿದೆ. ಇದೇ ಸಮಯದಲ್ಲಿ ಉಲ್ಬಣಗೊಂಡಿರುವ ಇಸ್ರೇಲ್-ಇರಾನ್ ಸಂಘರ್ಷವೂ ಬಾಸ್ಮತಿ ಮಾರುಕಟ್ಟೆ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ. ರೈತರು, ರಫ್ತುದಾರರು ವಿಳಂಬ ಪಾವತಿ, ಬೆಲೆ ಕುಸಿತ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ದಾಸ್ತಾನು ಹೆಚ್ಚಳದ ಆತಂಕಕ್ಕೆ ಸಿಲುಕಿದ್ದಾರೆ.
ಭಾರತದ ಬಾಸ್ಮತಿ ಅಕ್ಕಿಯ ಖರೀದಿಯಲ್ಲಿ ಸೌದಿ ಅರೇಬಿಯಾ ಮೊದಲ ಸ್ಥಾನದಲ್ಲಿದ್ದರೆ, ಇರಾನ್ 2ನೇ ಸ್ಥಾನದಲ್ಲಿದೆ. ಭಾರತದ ಬಾಸ್ಮತಿ ಅಕ್ಕಿ ಆಮದುದಾರರಲ್ಲಿ ಇರಾನ್ ಪ್ರಮುಖ ರಾಷ್ಟ್ರವಾಗಿದೆ. ಇರಾನ್ ಜನರು ಭಾರತದ ಸೇಲಾ (ಪಾರ್ಬಾಯಿಲ್ಡ್) ಬಾಸ್ಮತಿ ಅಕ್ಕಿಯನ್ನು ಹೆಚ್ಚಾಗಿ ಬಳಸುತ್ತಾರೆ.
2023-24ರ ಹಣಕಾಸು ವರ್ಷದಲ್ಲಿ, ಒಟ್ಟು 59.42 ಲಕ್ಷ ಮೆಟ್ರಿಕ್ ಟನ್ (LMT) ಬಾಸ್ಮತಿ ಅಕ್ಕಿಯನ್ನು ಭಾರತರಫ್ತು ಮಾಡಿತ್ತು. ಈ ಪೈಕಿ ಸುಮಾರು 50% ಅಕ್ಕಿಯನ್ನು ಐದು ರಾಷ್ಟ್ರಗಳು ಆಮದು ಮಾಡಿಕೊಂಡಿವೆ – ಇರಾನ್ 7 LMT, ಸೌದಿ ಅರೇಬಿಯಾ 11 LMT, ಇರಾಕ್ 8 LMT, ಯೆಮನ್ 3 LMT ಹಾಗೂ ಅಮೆರಿಕ 3 LMT. ಇತರ ರಾಷ್ಟ್ರಗಳು ಉಳಿದ ಅಕ್ಕಿಯನ್ನು ಖರೀದಿಸಿವೆ.
ಆದರೆ, ಈಗ ಇರಾನ್ ಆಮದು ಮಾಡಿಕೊಳ್ಳಬೇಕಿದ್ದ ಬಾಸ್ಮತಿ ಅಕ್ಕಿ ಇಸ್ರೇಲ್-ಇರಾನ್ ಯುದ್ಧದಿಂದಾಗಿ ಭಾರತದಲ್ಲೇ ಉಳಿಯಲಿದೆ. ಇದು, ದೇಶದಲ್ಲಿಯೇ ಅತಿ ಹೆಚ್ಚು ಬಾಸ್ಮತಿ ಉತ್ಪಾದನೆ ಮಾಡುವ ರಾಜ್ಯ ಪಂಜಾಬ್ ಮೇಲೆ ತೀವ್ರ ಪರಿಣಾಮ ಬೀರಲಿದೆ. ಭಾರತದಲ್ಲಿ ಬೆಳೆಯಾಗುವ ಬಾಸ್ಮತಿ ಅಕ್ಕಿಯಲ್ಲಿ 40%ಅನ್ನು ಪಂಜಾಬ್‌ನಲ್ಲಿಯೇ ಬೆಳೆಯಲಾಗುತ್ತದೆ.
ಅತಂತ್ರ ಪರಿಸ್ಥಿತಿಯಲ್ಲಿ ರಫ್ತುದಾರರು
“ಇಸ್ರೇಲ್-ಇರಾನ್ ಯುದ್ಧ ಆರಂಭವಾದಾಗಿನಿಂದ, ಇರಾನ್‌ಗೆ ಬಾಸ್ಮತಿ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇರಾನ್‌ನ ಅಬ್ಬಾಸ್ ಬಂದರು ಕಾರ್ಯಾಚರಣೆ ನಿಲ್ಲಿಸಿದ್ದು, ಭಾರತದಿಂದ ರಫ್ತಾದ ಬಹುಪಾಲು ಬಾಸ್ಮತಿ ಅಕ್ಕಿ ಅಲ್ಲಿಯೇ ಸಿಲುಕಿಕೊಂಡಿವೆ. ಎರಡು ಹಡಗುಗಳು ಬಂದರಿನಲ್ಲಿ ನಿಂತಿವೆ. ಆದರೆ, ಅಕ್ಕಿಯನ್ನು ಹಡಗಿನಿಂದ ಇಳಿಸಲಾಗಿಲ್ಲ” ಎಂದು ಬಾಸ್ಮತಿ ರೈಸ್ ಮಿಲ್ಲರ್ ಅಂಡ್ ಎಕ್ಸ್‌ಪೋರ್ಟರ್ ಅಸೋಸಿಯೇಷನ್‌ನ ಉಪಾಧ್ಯಕ್ಷ ರಂಜಿತ್ ಸಿಂಗ್ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
“ನಾವು ಇರಾನ್‌ಗೆ ಸುಮಾರು 10 ಲಕ್ಷ ಟನ್ ಬಾಸ್ಮತಿಯನ್ನು ರಫ್ತು ಮಾಡುತ್ತೇವೆ. ಇದು ಭಾರತದಿಂದ ಹೊರದೇಶಗಳಿಗೆ ರಫ್ತಾಗುವ ಒಟ್ಟು ಅಕ್ಕಿಯಲ್ಲಿ ಸುಮಾರು 15-16% ಆಗಿದೆ. ಈಗ ಇಸ್ರೇಲ್-ಇರಾನ್ ಸಂಘರ್ಷದಿಂದಾಗಿ ಸುಮಾರು 3,000 ಕೋಟಿ ರೂ. ಮೌಲ್ಯದ ಅಕ್ಕಿ ರಫ್ತಿನ ಸ್ಥಿತಿ ಅತಂತ್ರಗೊಂಡಿದೆ. ಇರಾನ್ ಪರಿಸ್ಥಿತಿ ಹೇಗಿದೆ ಎಂಬುದು ಗೊತ್ತಿಲ್ಲ. ಅಲ್ಲಿನ ಬ್ಯಾಂಕಿಂಗ್ ವ್ಯವಸ್ಥೆಯು ಕುಸಿದಿರಬಹುದು ಅಥವಾ ಸ್ಥಗಿತಗೊಂಡಿರಬಹುದು. ಆದ್ದರಿಂದ, ಯಾವುದೇ ವಹಿವಾಟು ನಡೆಯುತ್ತಿಲ್ಲ. ನಾವು ಆತಂಕದಿಂದ ಕಾಯುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
“ಸದ್ಯದ ಪರಿಸ್ಥಿತಿಯಲ್ಲಿ ನಮ್ಮೊಂದಿಗೆ ಇರಾನ್‌ನ ಆಮದುದಾರರೂ ಸಂಪರ್ಕದಲ್ಲಿಲ್ಲ. ಅವರು ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಸಿಲುಕಿದ್ದಾರೆ. ಹೀಗಾಗಿ, ರಫ್ತಾಗಿರುವ ಅಕ್ಕಿಗೆ ಪಾವತಿಗಳು ಯಾವಾಗ ಆಗುತ್ತವೆ ಎಂಬುದು ಸ್ಪಷ್ಟವಾಗಿ ಗೊತ್ತಿಲ್ಲ. ರಫ್ತುದಾರರೆಲ್ಲರೂ ಆತಂಕ ಮತ್ತು ಭಯದಲ್ಲಿದ್ದಾರೆ. ಇರಾನಿನ ಕರೆನ್ಸಿಯ ಮೌಲ್ಯ ಅಮೆರಿಕನ್ ಡಾಲರ್‌ಗೆ ಹೋಲಿಸಿದರೆ ಮತ್ತಷ್ಟು ಕುಸಿಯಬಹುದು. ಇದರಿಂದ ಭಾರತೀಯ ರಫ್ತುದಾರರಿಗೆ ಆರ್ಥಿಕ ನಷ್ಟವಾಗಬಹುದು” ಎಂದು ಜೋಸ್ಸನ್ ಹೇಳಿಕೊಂಡಿದ್ದಾರೆ
ಕರೆನ್ಸಿಯ ಮೌಲ್ಯ ಕುಸಿತದ ಆತಂಕ
“ಯುದ್ಧ ಆರಂಭವಾಗುವ ಮೊದಲು, ಮುಕ್ತ ಮಾರುಕಟ್ಟೆಯಲ್ಲಿ ಒಂದು ಅಮೆರಿಕನ್ ಡಾಲರ್‌ಗೆ 90,000 ತೊಮಾನ್ (ಇರಾನಿನ ಕರೆನ್ಸಿ) ಇತ್ತು. ಆದರೆ, ಇರಾನ್ ಸರ್ಕಾರವು ಭಾರತದಿಂದ ಬಾಸ್ಮತಿ ಆಮದಿಗೆ ತಮ್ಮ ಆಮದುದಾರರಿಗೆ ಸಬ್ಸಿಡಿ ಕರೆನ್ಸಿಯನ್ನು ನೀಡುತ್ತಿತ್ತು. ಆದ್ದರಿಂದ, 28,000 ತೊಮಾನ್‌ಗೆ ಒಂದು ಡಾಲರ್ ಸಮನಾಗಿತ್ತು. ಈಗ, ಯುದ್ಧ ಮುಗಿದ ನಂತರ, ರಫ್ತುದಾರರಿಗೆ ಪೂರ್ಣ ಪಾವತಿ ದೊರೆಯುತ್ತದಯೇ-ಇಲ್ಲವೇ ಎಂಬ ಆತಂಕವಿದೆ. ಕರೆನ್ಸಿಯ ಮೌಲ್ಯ ಎಷ್ಟು ಕುಸಿಯುತ್ತದೆ ಎಂಬುದು ತಿಳಿದಿಲ್ಲ. ಇರಾನ್ ಸರ್ಕಾರವು ಸಬ್ಸಿಡಿ ಕರೆನ್ಸಿಯನ್ನು ನೀಡಲು ಸಮರ್ಥವಾಗಿರುತ್ತದೆಯೇ ಎಂಬುದೂ ಅನಿಶ್ಚಿತೆಯಿಂದ ಕೂಡಿದೆ” ಎಂದು ಜೋಸ್ಸನ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಇರಾನ್-ಇಸ್ರೇಲ್ ಸಂಘರ್ಷದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಪಾತ್ರವೇನು?
“ಇಸ್ರೇಲ್-ಇರಾನ್ ಯುದ್ಧಕ್ಕೂ ಮುಂಚೆ, ಇರಾನ್ ಸರ್ಕಾರವು 2.50 ಲಕ್ಷ ಮೆಟ್ರಿಕ್ ಟನ್ ಬಾಸ್ಮತಿಯನ್ನು ಸಬ್ಸಿಡಿ ಕರೆನ್ಸಿಯಲ್ಲಿ ಆಮದಿ ಮಾಡಿಕೊಳ್ಳಲು ಅನುಮತಿ ನೀಡಿತ್ತು. 90 ದಿನಗಳೊಳಗೆ ಆಮದು ಮಾಡಿಕೊಳ್ಳಲು ಸಮಯಾವಕಾಶ ನೀಡಿತ್ತು. ಭಾರತೀಯ ರಫ್ತುದಾರರು ಈಗಾಗಲೇ ಪ್ಯಾಕೇಜಿಂಗ್ ಆರಂಭಿಸಿದ್ದರು. ಆದರೆ, ಈಗ ಸಂಘರ್ಷದಿಂದಾಗಿ, ರಫ್ತು ಸ್ಥಗಿತಗೊಂಡಿದೆ. ಎಲ್ಲ ಪ್ಯಾಕೇಜಿಂಗ್ ಕೆಲಸವೂ ನಿಂತಿದೆ. ನಾವು ನೋದುನೊಡುವ ನೀತಿಯನ್ನು ಅನುಸರಿಸುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (APEDA) ಪದಾಧಿಕಾರಿಗಳು ಇತ್ತೀಚಿನ ವರ್ಚುವಲ್ ಸಭೆ ನಡೆಸಿದ್ದಾರೆ. ಇರಾನ್‌ಗೆ ಬಾಸ್ಮತಿ ರಫ್ತನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕೆಂಬ ಚರ್ಚೆ ನಡೆದಿದೆ. ಆದರೆ, ಯಾವುದೇ ಅಂತಿಮ ನಿರ್ಣಯವಾಗಿಲ್ಲ. ಸೋಮವಾರ ಮತ್ತೊಂದು ಸಭೆ ನಡೆಯಲಿದೆ. ಕೆಲವು ದಿನ ಕಾಯೋಣ, ಪರಿಸ್ಥಿತಿ ಹೇಗೆ ಬೆಳೆಯುತ್ತದೆ ಎಂಬುದರ ಮೇಲೆ ನಿರ್ಧರಿಸೋಣ ಎಂಬ ನಿರ್ಣಯದಲ್ಲಿದ್ದೇವೆ ಎಂದು ರಫ್ತುದಾರರು ಹೇಳಿಕೊಂಡಿದ್ದಾರೆ.
ಬೆಲೆ ಕುಸಿತದ ಪರಿಣಾಮ
“ಇಸ್ರೇಲ್-ಇರಾನ್ ಸಂಘರ್ಷದಿಂದ ಗಂಭೀರ ಪರಿಣಾಮ ಎದುರಾಗಿದೆ. ಭಾರತದ ಮಾರುಕಟ್ಟೆಯಲ್ಲಿಯೇ ಬಾಸ್ಮತಿ ಬೆಲೆ ಕ್ವಿಂಟಾಲ್‌ಗೆ 7,100 ರೂಪಾಯಿಯಿಂದ 6,200 ರೂಪಾಯಿಗೆ ಕುಸಿದಿದೆ. ಸ್ಥಳೀಯ ಸಗಟು ಬೆಲೆಗಳು ಕೆ.ಜಿ.ಗೆ 71 ರೂಪಾಯಿಯಿಂದ 62 ರೂಪಾಯಿಗೆ (9 ರೂಪಾಯಿ) ಕುಸಿದಿದೆ. ಆದ್ದರಿಂದ, ಮುಂದಿನ ದಿನಗಳಲ್ಲಿ ಚಿಲ್ಲರೆ ಬೆಲೆಗಳೂ ಕಡಿಮೆಯಾಗಬಹುದು. ಇದರಿಂದ ಅಕ್ಕಿ ಗಿರಣಿಗಳಿಗೂ ಆರ್ಥಿಕ ನಷ್ಟವಾಗಬಹುದು. ಏಕೆಂದರೆ ಬಾಸ್ಮತಿ ದಾಸ್ತಾನು ಗಿರಣಿಗಳಲ್ಲಿಯೇ ಉಳಿದಿದೆ. ಇರಾನ್ ಪರಿಸ್ಥಿತಿ ಸುಧಾರಿಸದವರೆಗೆ ರಫ್ತುದಾರರು ಗಿರಣಿದಾರರಿಂದ ಅಕ್ಕಿಯನ್ನು ಖರೀದಿಸುವುದಿಲ್ಲ” ಎಂದು ಜೋಸ್ಸನ್ ಹೇಳಿದ್ದಾರೆ.
ಸಾಗಣೆ ಮತ್ತು ವಿಮೆಯ ಸಮಸ್ಯೆ
ಇರಾನ್‌ನ ತನ್ನ ಹೊರ್ಮುಜ್ ಜಲಸಂಧಿಯನ್ನು (ಒಂದು ಪ್ರಮುಖ ವಾಣಿಜ್ಯ ಮಾರ್ಗ) ಮುಚ್ಚುವ ಬೆದರಿಕೆ ಹಾಕಿದೆ. ಪರಿಣಾಮವಾಗಿ, ಸರಕು ಸಾಗಣೆಯು ತೊಂದರೆಗೆ ಸಿಲುಕಲಿಗೆ. ಜೊತೆಗೆ, ವಿಮಾ ಕಂಪನಿಗಳು ಯುದ್ಧ ವಲಯದ ಮೂಲಕ ಸರಕು ಸಾಗಣೆಗೆ ವಿಮೆ ನೀಡುವುದರಿಂದ ಹಿಂದೆ ಸರಿದಿವೆ. ಹೀಗಾಗಿ, ಪ್ರಮುಖ ಸರಕು ಸಾಗಣೆದಾರರು ಇರಾನಿನ ಬಂದರಿಗಳೊಂದಿಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ ಎಂದು ವರದಿಯಾಗಿದೆ.
ರಫ್ತು ಬೆಲೆಗಳು, ಒಂದು ಕಾಲದಲ್ಲಿ ಪ್ರತಿ ಟನ್ ಬಾಸ್ಮತಿಗೆ 850 ರಿಂದ 950 ಡಾಲರ್‌ಗಳನ್ನು ಗಳಿಸುತ್ತಿದ್ದವು. ಈಗ 10ರಿಂದ 15% ಕುಸಿತ ಕಂಡಿವೆ. ಸೆಪ್ಟೆಂಬರ್ ತಿಂಗಳಲ್ಲಿ ಹೊಸ ಬಾಸ್ಮತಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಆದ್ದರಿಂದ, ದಾಸ್ತಾನು ಹೆಚ್ಚಾದಷ್ಟು ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ರೈತರೂ ಇದರ ಆಘಾತಕಾರಿ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಏಕೆಂದರೆ, ಇರಾನ್‌ನಲ್ಲಿನ ಸಂಘರ್ಷ ಹೀಗೆಯೇ ಮುಂದುವರೆದರೆ, ಭಾರತೀಯ ಮಾರುಕಟ್ಟೆಯಲ್ಲಿ ಬಾಸ್ಮತಿ ಬೆಲೆ ತೀವ್ರವಾಗಿ ಕುಸಿಯುವ ಸಾಧ್ಯತೆಗಳಿವೆ.