ಇತ್ತೀಚೆಗೆ ಗುಜರಾತ್ ವಿಮಾನ ದುರಂತದ ವಿಚಾರದಲ್ಲಿ ಸುದ್ದಿಯಾಗಿದ್ದ ಏರ್ ಇಂಡಿಯಾದ ಸಹಯೋಗಿ ಸಂಸ್ಥೆ ಟಾಟಾ ಇದೀಗ 800 ಕೋಟಿ ರೂಪಾಯಿ ಹಗರಣ ಸಂಬಂಧಿಸಿದಂತೆ ಮತ್ತೆ ಸುದ್ದಿಯಾಗುತ್ತಿದೆ. ಮುಂಬೈನ ಜವಾಹರಲಾಲ್ ನೆಹರು ಬಂದರಿಗೆ ಸಂಬಂಧಿಸಿದಂತೆ ಸುಮಾರು 800 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಮತ್ತು ವಂಚನೆ ಆರೋಪದ (ಮುಂಬೈ ಬಂದರು ಹಗರಣ) ಮೇಲೆ ಟಾಟಾ ಗ್ರೂಪ್ ಕಂಪನಿಯ ‘ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್’ ಮತ್ತು ಇತರರ ವಿರುದ್ಧ ಕೇಂದ್ರ ತನಿಖಾ ದಳ(ಸಿಬಿಐ) ಪ್ರಕರಣ ದಾಖಲಿಸಿದೆ.
ಈಗಾಗಲೇ ಏರ್ ಇಂಡಿಯಾ ವಿಚಾರದಲ್ಲಿ ಟಾಟಾ ಸಂಸ್ಥೆಯು ನಿರಂತರ ವಿವಾದದಲ್ಲಿ ಸಿಲುಕುತ್ತಿದೆ. ಈ ನಡುವೆಯೇ ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್ ಮೇಲೆ ಭ್ರಷ್ಟಾಚಾರ, ಹಗರಣದ ಆರೋಪಗಳು ಕೇಳಿಬಂದಿರುವುದು ಸಂಸ್ಥೆಯ ತಲೆನೋವನ್ನು ಕೊಂಚ ಹೆಚ್ಚಿಸಿರುವಂತಿದೆ. ಇವೆಲ್ಲವೂ ನೇರವಾಗಿ ಸೋಮವಾರ ಷೇರುಪೇಟೆಯ ಮೇಲೆ ಪ್ರಭಾವ ಬೀರುವುದು ಖಚಿತ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಏರ್ ಇಂಡಿಯಾ ವಿಮಾನದ ಗ್ರಾಹಕರಿಗೆ ನೀಡಿದ ಊಟದಲ್ಲಿ ಬ್ಲೇಡ್ ಪತ್ತೆ
ಮುಂಬೈ ಬಂದರಿನ ಅಧಿಕಾರಿಗಳೊಂದಿಗೆ ‘ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್’ ಕ್ರಿಮಿನಲ್ ಪಿತೂರಿಯಲ್ಲಿ ತೊಡಗಿದ್ದು, ಬಂದರಿನಲ್ಲಿ ಹೂಳೆತ್ತುವ ಕೆಲಸಕ್ಕೆ ಬಂದಾಗ ಖಾಸಗಿ ಕಂಪನಿಗಳಿಗೆ ಅನಗತ್ಯ ಅನುಕೂಲ ಮಾಡಿಕೊಟ್ಟಿದೆ ಎಂಬುದು ಸಿಬಿಐ ಆರೋಪ. ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್ ಹೂಳೆತ್ತುವ ಯೋಜನೆಯ ನಿರ್ವಹಣಾ ಸಲಹೆಗಾರರಾಗಿದ್ದರು.
ಏನಿದು ಜವಾಹರಲಾಲ್ ನೆಹರು ಬಂದರು ಯೋಜನೆ?
ಜವಾಹರಲಾಲ್ ನೆಹರು ಬಂದರು ಅನ್ನು ಜೆಎನ್‌ಪಿಟಿ ಮತ್ತು ನವ ಶೇವಾ ಬಂದರು ಎಂದೂ ಕರೆಯಲಾಗುತ್ತದೆ. ಇದು ಭಾರತದ ಎರಡನೇ ಅತಿದೊಡ್ಡ ಕಂಟೇನರ್ ಬಂದರು. ಈ ಬಂದರನ್ನು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ನವಿ ಮುಂಬೈನ ಅರಬಿ ಸಮುದ್ರದ ಪೂರ್ವ ತೀರದಲ್ಲಿರುವ ಈ ಬಂದರನ್ನು ಜವಾಹರಲಾಲ್ ನೆಹರು ಬಂದರು ಟ್ರಸ್ಟ್ ಪ್ರಾಧಿಕಾರ (ಜೆಎನ್‌ಪಿಟಿಎ) ನಿರ್ವಹಿಸುತ್ತಿದೆ. ಈ ಬಂದರನ್ನು ನವಿ ಮುಂಬೈನ ನೋಡಲ್ ನಗರವಾದ ಥಾಣೆ ಕ್ರೀಕ್ ಮೂಲಕ ಪ್ರವೇಶಿಸಬಹುದು.
ಮುಂಬೈ ಬಂದರಿನ ಬಳಿಕ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಪ್ರಮುಖ ಬಂದರು ಇದಾಗಿದೆ. 2023ರ ಜನವರಿಯಲ್ಲಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಮತ್ತು ನವಾ ಶೇವಾ ಫ್ರೀಪೋರ್ಟ್ ಟರ್ಮಿನಲ್ ಪ್ರೈವೇಟ್ ಲಿಮಿಟೆಡ್ (ಎನ್‌ಎಸ್‌ಎಫ್‌ಟಿಪಿಎಲ್) ನಡುವೆ ಸಾಲ ಒಪ್ಪಂದ ನಡೆದಿದ್ದು ಬಂದರು ನವೀಕರಣ ನಡೆಸಲಾಗುತ್ತಿದೆ.
ಏನಿದು ಹಗರಣ, ಆರೋಪವೇನು?
ಹೂಳೆತ್ತುವ ಕೆಲಸವನ್ನು ಎರಡು ಹಂತಗಳಲ್ಲಿ ಮಾಡಲಾಗಿತ್ತು. ಅಂದರೆ ಕ್ಯಾಪಿಟಲ್ ಡ್ರೆಡ್ಜಿಂಗ್ ಪ್ರಾಜೆಕ್ಟ್ ಹಂತ I ಮತ್ತು ಕ್ಯಾಪಿಟಲ್ ಡ್ರೆಡ್ಜಿಂಗ್ ಪ್ರಾಜೆಕ್ಟ್ ಹಂತ II. ಮೊದಲ ಹಂತವನ್ನು 2010ರಿಂದ 2014ರವರೆಗೆ ನಡೆಸಲಾಗಿದ್ದರೆ, ಎರಡನೇ ಹಂತವನ್ನು 2012ರಿಂದ 2019ರವರೆಗೆ ನಡೆಸಲಾಗಿದೆ. ಈ ಹಂತಗಳಲ್ಲಿ ಜೆಎನ್‌ಪಿಎ ಅಧಿಕಾರಿಗಳ ಸ್ಥಾನವನ್ನು ದುರುಪಯೋಗ ಮಾಡಿ ಖಾಸಗಿ ಕಂಪನಿಗಳು ಆರ್ಥಿಕ ಲಾಭವನ್ನು ಪಡೆದಿದೆ ಎಂಬ ಆರೋಪವಿದೆ.
ಯೋಜನೆಯ ಮೊದಲ ಹಂತದ ವೇಳೆ ಜೆಎನ್‌ಪಿಎ ಗುತ್ತಿಗೆದಾರರಿಗೆ 365.90 ಕೋಟಿ ರೂ. ಹೆಚ್ಚುವರಿ ಪಾವತಿಗಳನ್ನು ಮಾಡಲಾಗಿದೆ. ಹೂಳೆತ್ತುವ ಕೆಲಸವು ದೃಢೀಕರಿಸದಿದ್ದರೂ ಮತ್ತೆ 438 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. ಈ ರೀತಿ ಅಕ್ರಮ ನಡೆಸಿ ಸರ್ಕಾರದ ಬೊಕ್ಕಸಕ್ಕೆ 800 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಉಂಟು ಮಾಡಲಾಗಿದೆ ಎಂದು ದೂರಲಾಗಿದೆ.
ಸದ್ಯ ಈ ಸಂಬಂಧ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿದೆ. ಜೆಎನ್‌ಪಿಟಿಯ ಮಾಜಿ ಮುಖ್ಯ ವ್ಯವಸ್ಥಾಪಕ(ಪಿಪಿ&ಡಿ) ಸುನೀಲ್ ಕುಮಾರ್ ಮದಭಾವಿ, ಮುಂಬೈನಲ್ಲಿರುವ ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್‌ನ ಪ್ರಧಾನ ಕಚೇರಿಯ ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್ ಲಿಮಿಟೆಡ್‌ನ ಹಿರಿಯ ಜನರಲ್ ಮ್ಯಾನೇಜರ್ ದೇವದತ್ ಬೋಸ್, ಬೋಸ್ಕಲಿಸ್ಮಿಟ್ ಇಂಡಿಯಾ ಎಲ್‌ಎಲ್‌ಪಿ, ಜಾನ್ ಡೆ ನಲ್ ಡ್ರೆಡ್ಜಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಅಪರಿಚಿತ ಸಾರ್ವಜನಿಕ ಸೇವಕರು ಮತ್ತು ಖಾಸಗಿ ವ್ಯಕ್ತಿಗಳ ಹೆಸರನ್ನು ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ.
ಟಾಟಾ ಸಂಸ್ಥೆಯ ಮುಂದಿರುವ ಸವಾಲುಗಳು
ಗುಜರಾತ್‌ನ ಅಹಮದಾಬಾದ್‌ನಲ್ಲಿ ಟಾಟಾ ಒಡೆತನದ ಏರ್ ಇಂಡಿಯಾ ಸಂಸ್ಥೆಯ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಅಪಘಾತ ಸಂಭವಿಸಿ 260ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ವಿಮಾನ ದುರಂತದ ಬೆನ್ನಲ್ಲೇ ಟಾಟಾ ಸಂಸ್ಥೆಯು ಏರ್ ಇಂಡಿಯಾದ ಎಲ್ಲಾ ವಿಮಾನಗಳ ತಪಾಸಣೆ ನಡೆಸಿದೆ. ಹಲವು ತಾಂತ್ರಿಕ ಸಮಸ್ಯೆಗಳ ಕಾರಣ ನಿರಂತರವಾಗಿ ವಿಮಾನ ರದ್ದುಪಡಿಸಲಾಗುತ್ತಿದೆ. ಇವೆಲ್ಲವೂ ಟಾಟಾ ಏರ್‌ಲೈನ್ಸ್ ಷೇರಿನ ಮೇಲೆ ಕೊಂಚ ಪ್ರಭಾವ ಬೀರಿತ್ತು. ಇವೆಲ್ಲವುದರಿಂದ ಟಾಟಾ ಸಂಸ್ಥೆ ಸುಧಾರಿಸಿಕೊಳ್ಳುವ ಮುನ್ನವೇ ಟಾಟಾ ಕನ್ಸಲ್ಟಿಂಗ್ ಸಂಸ್ಥೆಯು ಹಗರಣದ ಸುಳಿಯಲ್ಲಿ ಸಿಲುಕಿದೆ. ಮುಂದಿನ ಷೇರುಪೇಟೆ ವಹಿವಾಟಿನಲ್ಲಿ ಈ ಹಗರಣದ ಪ್ರಭಾವ ಸ್ಪಷ್ಟವಾಗಿ ಗೋಚರಿಸುವ ನಿರೀಕ್ಷೆಯಿದೆ. ಇವೆಲ್ಲವೂ ಟಾಟಾ ಸಂಸ್ಥೆಗೆ ಸವಾಲಾಗಿಯೇ ಪರಿಣಮಿಸಿದೆ.
