ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಪತ್ರಕರ್ತ ಹಂಝ ಮಲಾರ್ ಸಂಪಾದಿಸಿದ ‘ಮರೆಯಲಾಗದ ಬ್ಯಾರಿ ಮಹನೀಯರು’ ಕೃತಿಯ ಎರಡನೇ ಭಾಗ ಮತ್ತು ಮರುಮುದ್ರಣಗೊಂಡ ಮೊದಲ ಭಾಗದ ಬಿಡುಗಡೆ ಕಾರ್ಯಕ್ರಮವು ಮಂಗಳೂರು ನಗರದ ಸಹೋದಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಿದ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಮಾತನಾಡಿ, “ಮುಂದಿನ ಪೀಳಿಗೆಗೆ ಬ್ಯಾರಿ ಸಮುದಾಯವನ್ನು ಪರಿಚಯಿಸುವ ಕಾರ್ಯ ಮತ್ತಷ್ಟು ಆಗಬೇಕಾಗಿದೆ. ಹಾಗಾಗಿ ಗತಿಸಿದವರ ಬಗ್ಗೆ ಮಾತ್ರವಲ್ಲ, ಜೀವಂತ ಇರುವ ಸಾಧಕರ ಕುರಿತ ಪುಸ್ತಕವೂ ಪ್ರಕಟಗೊಳ್ಳಬೇಕು. ಶಾಸಕರ ನಿಧಿಯಲ್ಲಿ 2 ಲಕ್ಷ ರೂ. ಮೊತ್ತದ ಪುಸ್ತಕಗಳನ್ನು ಖರೀದಿಸಲು ಅವಕಾಶವಿದೆ. ನನ್ನ ನಿಧಿಯಿಂದ 1 ಲಕ್ಷ ರೂ. ಮೊತ್ತದಲ್ಲಿ ಮರೆಯಲಾಗದ ಬ್ಯಾರಿ ಮಹನೀಯರು ಕೃತಿಯ ಪ್ರತಿಗಳನ್ನು ಖರೀದಿಸಿ ವಿತರಿಸಲಾಗುವುದು” ಎಂದು ಹೇಳಿದರು.
ಬ್ಯಾರಿ ಸಮುದಾಯದ ಬಹುದಿನಗಳ ಬೇಡಿಕೆಯಾದ ಬ್ಯಾರಿ ಭವನದ ಯೋಜನೆ ಸಿದ್ಧವಾಗಿದೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕ್ರತಿ ಸಚಿವರೊಂದಿಗೆ ಚರ್ಚಿಸಿ ಮುಂದಿನ ತಿಂಗಳು ಶಿಲಾನ್ಯಾಸ ಮಾಡಲಾಗುವುದು. ಬ್ಯಾರಿ ಭವನದ ಅಂದಾಜು ಯೋಜನಾ ವೆಚ್ಚ 3 ಕೋ. ರೂ.ನಿಂದ 9 ಕೋ.ರೂ.ಗೆ ಹೆಚ್ಚಿದೆ. ಅನುದಾನದ ಬಗ್ಗೆ ಲೆಕ್ಕಿಸದೆ ಸಮುದಾಯಕ್ಕೆ ಮಾದರಿ ಭವನ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದರು.
ಆಶಯ ಭಾಷಣ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, “ಇತಿಹಾಸ ಮತ್ತು ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ವರ್ತಮಾನದ ಮಾರ್ಗದರ್ಶನವಾಗಿಸಿಕೊಳ್ಳಬೇಕೇ ಹೊರತು ಇತಿಹಾಸ ಭಾರ ಆಗಬಾರದು. ಭಾರವಾದರೆ ವರ್ತಮಾನ ಕಣ್ಣು ಮುಚ್ಚುವ ಪರಿಸ್ಥಿತಿ ನಿರ್ಮಾಣ ಆಗಬಹುದು. ಭಾರತದಲ್ಲಿ ಹಿಂದುತ್ವ, ಜಾಗತೀಕರಣ ಮುಂತಾದವುಗಳ ಪ್ರಭಾವದಿಂದ ಇತಿಹಾಸವನ್ನು ತಿರುಚುವ ಪ್ರಯತ್ನ ನಡೆದಿವೆ. ವಿವಿಧ ಕಾರಣಗಳಿಂದ ಪೂರ್ವದ ಕಡೆಗೆ ವಿಸ್ತರಿಸುತ್ತ ಸಾಗಿದ ಇಸ್ಲಾಮ್ ಮತ್ತು ಅರೆಬಿಕ್ ಸಂಸ್ಕೃತಿ ಸೌಹಾರ್ದದಿಂದ ಬೆರೆತು ಸ್ಥಳೀಯವಾಗಿದೆ. ಅಂಥ ಇಸ್ಲಾಮನ್ನು ಬಲಪಂಥೀಯರು ಮತ್ತು ಮತೀಯವಾದಿಗಳು ಈಗಲೂ ಕಾಸ್ಮೊ ಪೊಲಿಸ್ ಸಂಸ್ಕೃತಿಗೆ ಸೀಮಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಅಭಿಪ್ರಾಯಿಸಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಭಾಗವಹಿಸಿದ ಬ್ಯಾರಿ ಇನ್ಫೋ ಡಾಟ್ ಕಾಂ ಮುಖ್ಯಸ್ಥ ಬಿ.ಎ. ಮುಹಮ್ಮದಲಿ ಕಮ್ಮರಡಿ ಮಾತನಾಡಿದರು. ಕೃತಿಗಳ ಸಂಪಾದಕ ಹಂಝ ಮಲಾರ್ ಕೃತಿ ಪರಿಚಯ ಮಾಡಿದರು.
ವೇದಿಕೆಯಲ್ಲಿ ರಿಜಿಸ್ಟ್ರಾರ್ ರಾಜೇಶ್ ಜಿ., ತುಳು ಅಕಾಡಮಿಯ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಉಪಸ್ಥಿತರಿದ್ದರು. ಅಕಾಡಮಿಯ ಸದಸ್ಯರಾದ ಬಿ.ಎಸ್.ಮುಹಮ್ಮದ್ ಚಿಕ್ಕಮಗಳೂರು, ಸಾರಾ ಅಲಿ ಪರ್ಲಡ್ಕ, ಹಮೀದ್ ಹಸನ್ ಮಾಡೂರು, ಅಬೂಬಕರ್ ಅನಿಲಕಟ್ಟೆ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನು ಓದಿದ್ದೀರಾ? ಕುಂದಾಪುರ | ಪತ್ನಿಯ ರೀಲ್ಸ್ ನೋಡುವ ಹವ್ಯಾಸಕ್ಕೆ ಕೋಪಗೊಂಡ ಪತಿ: ಹಲ್ಲೆಗೈದು ಕೊಲೆ!
ಅಕಾಡಮಿಯ ಮಾಜಿ ಸದಸ್ಯ ಹುಸೈನ್ ಕಾಟಿಪಳ್ಳ ಧ್ಯೇಯಗೀತೆ ಹಾಡಿದರು. ಅಕಾಡಮಿಯ ಸದಸ್ಯರಾದ ಶಮೀರಾ ಜಹಾನ್ ಸ್ವಾಗತಿಸಿದರು. ಶರೀಫ್ ಭಾರತ್ ಬಾಳಿಲ ಕಾರ್ಯಕ್ರಮ ನಿರೂಪಿಸಿದರು. ತಾಜುದ್ದೀನ್ ಅಮ್ಮುಂಜೆ ವಂದಿಸಿದರು.
