ದಿನನಿತ್ಯ ಯೋಗ ಪದ್ಧತಿಯನ್ನು ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ಹೇಳಿದರು.
ಶನಿವಾರ ಬೀದರ ವಿಶ್ವವಿದ್ಯಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼಪ್ರಾಚೀನ ಕಾಲದಿಂದಲೂ ಯೋಗ ಪರಂಪರೆಯನ್ನು ಪಾಲಿಸಿಕೊಂಡು ಬಂದಿರುವ ಪೂರ್ವಜರು ಸದೃಢ ಶರೀರ ಹಾಗೂ ಸ್ವಸ್ಥ ಆರೋಗ್ಯವನ್ನು ಕಾಪಾಡಿಕೊಂಡು ಬಂದಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ಉತ್ತಮ ಆರೋಗ್ಯದಿಂದ ಮಾತ್ರ ಆರೋಗ್ಯಕರ ಸಮಾಜ ನಿರ್ಮಿಸಲು ಸಾಧ್ಯ. ಪ್ರಾಚೀನ ಕಾಲದಿಂದ ಭಾರತದಲ್ಲಿ ಪ್ರಚಲಿತವಿದ್ದ ಈ ಯೋಗ ಪರಂಪರೆಗೆ ಸುದೀರ್ಘವಾದ ಇತಿಹಾಸವಿದೆʼ ಎಂದರು.
ʼಯೋಗದಿಂದ ರೋಗ ದೂರವಾಗುತ್ತದೆ ಮತ್ತು ಯೋಗದಲ್ಲಿ ಎಲ್ಲವೂ ಇದೆ. ಶಾರೀರಿಕ, ಮಾನಸಿಕ, ಆಧ್ಯಾತ್ಮಿಕದ ಸಮನ್ವಯವಿದೆ. ಪ್ರಾಚೀನ ಕಾಲದ ಋಷಿಮುನಿಗಳು, ಸಾಧುಸಂತರು, ಯೋಗಿವರ್ಯರು ಈ ಪರಂಪರೆಗೆ ನಾಂದಿಹಾಡಿದರು. ಇಂದು ಭಾರತದ ಯೋಗ ಪರಂಪರೆ ಜಗತ್ತಿನಾದ್ಯಂತ ಹರಡುತ್ತಿರುವುದು ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿಯಾಗಿದೆʼ ಎಂದರು.
ಉಪನ್ಯಾಸಕರಾದ ಡಾ.ಶಾಂತಕುಮಾರ ಚಿದ್ರಿ, ಡಾ.ನಾಗೇಶ ಸಾವಳೆ ಯೋಗ, ಪ್ರಾಣಾಯಾಮದ ಕುರಿತಾದ ಮಾಹಿತಿ ನೀಡುತ್ತಾ ಸರ್ವರಿಗೂ ಯೋಗವಿಧಾನದಂತೆ ಆಸನಗಳನ್ನು ಮಾಡಿಸಿದರು.
ಇದನ್ನೂ ಓದಿ : ಬೀದರ್ | ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರಕ್ಕೆ ಡಿಸಿ ಶಿಲ್ಪಾ ಶರ್ಮಾ ಭೇಟಿ; ಪರಿಶೀಲನೆ.
ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಸುರೇಖಾ ಕೆ.ಎ.ಎಸ್., ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ ನಾಯ್ಕ.ಟಿ, ವಿಶೇಷಾಧಿಕಾರಿ ಡಾ.ರವೀಂದ್ರನಾಥ.ವಿ.ಗಬಾಡಿ, ಡಾ.ರಾಮಚಂದ್ರ ಗಣಾಪೂರ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.