ದೆಹಲಿಯಿಂದ ಉತ್ತರ ಪ್ರದೇಶಕ್ಕೆ ಹೋಗುತ್ತಿದ್ದ ರೈಲಿನಲ್ಲಿ ಸೀಟಿನ ವಿಚಾರವಾಗಿ ಪ್ರಯಾಣಿಕರ ನಡುವೆ ಆರಂಭವಾದ ವಾಗ್ವಾದವು ರಕ್ತಪಾತಕ್ಕೆ ತಿರುಗಿ, ಸಾವಿನಲ್ಲಿ ಅಂತ್ಯಗೊಂಡಿದೆ. ಪ್ರಯಾಣಿಕರ ಗುಂಪೊಂದು ಯುವಕನನ್ನು ಅಮಾನುಷವಾಗಿ ಥಳಿಸಿ ಕೊಂದಿದೆ. ರೈಲ್ವೇ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆಸಿದ್ದು, ತನಿಖೆ ಆರಂಭಿಸಿದ್ದಾರೆ.
ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ಖೇಕ್ಡಾ ಪಟ್ಟಣದ ನಿವಾಸಿ ದೀಪಕ್ ಯಾದವ್ ಶುಕ್ರವಾರ ರಾತ್ರಿ ಕೆಲಸ ಮುಗಿಸಿಕೊಂಡು ದೆಹಲಿಯಿಂದ ತಮ್ಮೂರಿಗೆ ಮರಳುತ್ತಿದ್ದರು. ಅವರು ಸಹರಾನ್‌ಪುರಕ್ಕೆ ಹೋಗುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಖೇಕ್ಡಾ ಬಳಿ ಚಲಿಸುತ್ತಿದ್ದಾಗ ಗುಂಪೊಂದು ಸೀಟಿನ ವಿಚಾರಕ್ಕೆ ಅವರೊಂದಿಗೆ ಗಲಾಟೆ ಆರಂಭಿಸಿತು ಎಂದು ವರದಿಯಾಗಿದೆ.
UP man beaten to death in a moving train over seat dispute
— Piyush Rai (@Benarasiyaa) June 21, 2025
In UP's Baghpat, a passanger identified as Deepak Yadav was beaten to death in a moving train allegedly over seat dispute. The train was bound Shamli from Delhi when the incident happened. pic.twitter.com/vxBGpbGwkW
ಗಲಾಟೆ ಎಷ್ಟು ಗಂಭೀರ ಸ್ವರೂಪಕ್ಕೆ ಹೋಯಿತೆಂದರೆ, ದುಷ್ಕರ್ಮಿಗಳ ಗುಂಪು ಯಾದವ್ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಯಾದವ್ ಸ್ಥಳದಲ್ಲಿಯೇ ಕುಸಿದುಬಿದ್ದಿದ್ದರು. ಘಟನೆ ಬಗ್ಗೆ ಮಾಹಿತಿ ದೊರೆತ ಕೂಡಲೇ ಖೇಕ್ಡಾ ನಿಲ್ಧಾಣದಲ್ಲಿ ರೈಲನ್ನು ನಿಲ್ಲಿಸಲಾಯಿತು. ರೈಲು ನಿಲ್ಲುತ್ತಿದ್ದಂತೆಯೇ ದುಷ್ಕರ್ಮಿಗಳು ಇಳಿದು ಪರಾರಿಯಾಗಿದ್ದಾರೆ. ಯಾದವ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಬಂದ ಜಿಆರ್‌ಪಿ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆಸಿದ್ದಾರೆ. ತನಿಖೆ ಆರಂಭಿಸಿದ್ದಾರೆ. ಕೆಲವು ಪ್ರಯಾಣಿಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚಿ, ಬಂಧಿಸುತ್ತೇವೆಂದು ಹೇಳಿದ್ದಾರೆ.