“ಯೋಗಶಾಸ್ತ್ರದ ನಿರಂತರವಾದ ಅನುಷ್ಠಾನದಿಂದ ಜೀವನೋತ್ಸಾಹ, ಸಾಹಸ, ಧೈರ್ಯ, ಬುದ್ಧಿಶಕ್ತಿ, ಪರಾಕ್ರಮಗಳು ವರ್ಧಿಸುತ್ತವೆ. ಯೋಗಶಾಸ್ತ್ರವು ಪ್ರಾಯೋಗಿಕವಾಗಿದ್ದು, ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ರಕ್ಷಣೆಯಲ್ಲಿ ಸಹಕಾರಿಯಾಗಿದೆ” ಎಂದು ಚಿತ್ರದುರ್ಗದ
ಭೋವಿ ಗುರುಪೀಠದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ತಿಳಿಸಿದರು.
ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ಎಸ್ ಜೆ ಎಸ್ ಸಮೂಹ ಸಂಸ್ಥೆಗಳಿಂದ ನಡೆದ ಯೋಗ ದಿನಾಚರಣೆಯ ಸಾನ್ನಿಧ್ಯವಹಿಸಿ ಮಾತನಾಡಿದ ಪೂಜ್ಯರು ಆಸನಗಳ ಅಭ್ಯಾಸವೊಂದೇ ಯೋಗವಲ್ಲ. ದೇಹದಲ್ಲಿರುವ ಸಪ್ತಧಾತುಗಳಾದ ರಸ, ರಕ್ತ, ಮಾಂಸ ಮೇಧ, ಅಸ್ತಿ, ಮಜ್ಜ ಮತ್ತು ವೀರ್ಯಗಳ ಅಸಮತೋಲನವನ್ನು ಹೋಗಲಾಡಿಸಿ ದೇಹಾರೋಗ್ಯ ಕಾಪಾಡುವುದು ಆಸನಗಳ ಗುರಿ. ದೇಹದಲ್ಲಿರುವ ರೋಗಗಳ ನಿರ್ಮೂಲನ ಮತ್ತು ಆಗಾಮಿ ರೋಗಗಳ ಪ್ರತಿಬಂಧವು ಆಸನಾಭ್ಯಾಸದಿಂದ ಸಾಧ್ಯವಾಗುತ್ತದೆ. ಅಂತೆಯೇ ಪ್ರಾಣಾಯಾಮವು ಶ್ವಾಸೋಚ್ಛಾಸದ ಗತಿಯನ್ನು ನಿಯಂತ್ರಿಸಿ ಆಹಾರದ ಪಚನ ಕ್ರಿಯೆಯನ್ನು ಸರಿಪಡಿಸಿ ಚಂಚಲವಾದ ಚಿತ್ತವನ್ನು ನಿಶ್ಚಲಗೊಳಿಸುತ್ತದೆ ಎಂದು ವಿವರಿಸಿದರು.

“ದೈನಂದಿನ ಜೀವನದಲ್ಲಿ ಯೋಗವು ಮನಸ್ಸನ್ನು ಶಾಂತ ಮತ್ತು ಸ್ಥಿರವಾಗಿರಿಸುತ್ತದೆ, ಒತ್ತಡವನ್ನು ತೆಗೆದುಹಾಕುತ್ತದೆ ಮತ್ತು ಆಲೋಚನಾ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನಿಯಮಿತ ಯೋಗ ಅಭ್ಯಾಸದಿಂದ ನಮ್ಮ ದೇಹ ಹಾಗೂ ಮನಸ್ಸಿಗೆ ಸಂತೋಷ-ಶಕ್ತಿಯನ್ನು ನೀಡುತ್ತದೆ. ಆಹಾರ ಮತ್ತು ನಿದ್ರೆಗಳಂತೆ ಈ ಅಭ್ಯಾಸಕ್ಕೂ ನಿಗದಿತವಾದ ಸಮಯವನ್ನು ಮೀಸಲಿಡುವುದು ಅಗತ್ಯ” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕರ್ನಾಟಕ ರೈತ ಸುರಕ್ಷಾ, ಪ್ರಧಾನ ಮಂತ್ರಿ ಫಸಲ್ ಬಿಮಾ ವಿಮೆ ಯೋಜನೆಯಡಿ ರೈತರ ನೋಂದಣಿಗೆ ಜುಲೈವರೆಗೆ ಕಾಲಾವಕಾಶ
ಈ ಸಂದರ್ಭದಲ್ಲಿ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಧರ, ಎಸ್ ಜೆ ಎಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ದಿನೇಶ, ಎಸ್ ಜೆ ಎಸ್ ಸಮೂಹ ಸಂಸ್ಥೆಗಳ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಪೋಷಕರು, ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಶಾಲಾ ಮಕ್ಕಳಿಂದ ಯೋಗ ಪ್ರಾತ್ಯಕ್ಷಿಕೆ ಜರುಗಿತು.