ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ನಡೆಸಿದ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ’ ಹೆಸರಿಟ್ಟು, ಪಹಲ್ಗಾಮ್‌ನಲ್ಲಿ ಹಿಂದು ಮಹಿಳೆಯರ ಸಿಂಧೂರ ಕಸಿದುಕೊಂಡವರ ವಿರುದ್ದ ಪ್ರತಿಕಾರ ತೀರಿಸಿಕೊಂಡಿದ್ದೇವೆ ಎಂದು ಮೋದಿ ಸರ್ಕಾರ ಹೇಳುತ್ತಿದೆ. ಆದರೆ, ಮೋದಿ ಅವರು ‘ಸಿಂಧೂರ’ ಹಾಕಿದ್ದ ತಮ್ಮ ಪತ್ನಿಗೆ ಏನು ಮಾಡಿದರು. ಅವರ ಪತ್ನಿ ಪ್ರಧಾನಿ ನಿವಾಸದಲ್ಲಿ ಯಾಕೆ ಇಲ್ಲ? ಅವರ ಅವರ ಪತ್ನಿಯ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾದಾಗ, ಭಾರತದ ಎಲ್ಲ ನೆರೆಯ ರಾಷ್ಟ್ರಗಳನ್ನು ಕರೆದು ಗೌರವದಿಂದ ಸತ್ಕರಿಸಿ, ಸಭೆ ನಡೆಸಿದ್ದರು. ಆಗ, ಭಾರತವು ನೆರೆಯ ರಾಷ್ಟ್ರಗಳ ವಿಶ್ವಾಸದೊಂದಿಗೆ ದೊಡ್ಡ ಶಕ್ತಿಯಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಈಗ 11 ವರ್ಷಗಳ ಬಳಿಕವೂ ನಾವು ಏಕಾಂಗಿಯಾಗಿ ನಿಂತಲ್ಲೇ ನಿಂದಿದ್ದೇವೆ.”ಮಾಲ್ಡೀವ್ಸ್ ರೀತಿಯ ಸಣ್ಣ ದೇಶವೂ ಭಾರತಕ್ಕೆ ಸವಾಲು ಹಾಕುತ್ತಿದೆ. ಇದಕ್ಕೆ ಏನು ಹೇಳುವುದು” ಎಂದು ವಾಗ್ದಾಳಿ ನಡೆಸಿದ್ದಾರೆ.
“ಆಪರೇಷನ್ ಸಿಂಧೂರ ಯಶಸ್ವಿಯಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ‘ಸಿಂಧೂರ’ ಎಂಬ ಪದವೇ ಅಳುತ್ತಿದೆ. ಭಾರತದಲ್ಲಿ ‘ಸಿಂಧೂರ’ ಎಂದರೆ ಬಹಳ ದೊಡ್ಡ ವಿಷಯ. ಒಂದು ಚಿಟಿಕೆ ಸಿಂಧೂರಕ್ಕೆ ದೊಡ್ಡ ಮಹತ್ವ ಇದೆ. ಇಂದು ಸಿಂಧೂರ್‌ನ ಸ್ಥಿತಿ ಏನಾಗಿದೆ? ಸಿಂಧೂರದ ಬಗ್ಗೆ ಮಾತಾಡುವವರು ಸಿಂಧೂರದ ಮಾನ ಕಾಪಾಡಿದ್ದಾರೆಯೇ? ಅವರು ಸಿಂಧೂರ ಹಾಕಿದವರ ಜೊತೆ ಹೇಗೆ ವರ್ತಿಸಿದ್ದಾರೆ. ಮೋದಿ ಅವರು ತಮ್ಮದೇ ಪತ್ನಿಯಿಂದ ಪತ್ನಿಯ ಗೌರವವನ್ನು ಹೇಗೆ ಕಸಿದುಕೊಳ್ಳಬಹುದು? ಅವರು ಪ್ರಧಾನಿ ನಿವಾಸದಲ್ಲಿ ಇರಬೇಕಿತ್ತು. ಆಕೆಗೆ ಆ ಹಕ್ಕು ಇದೆ. ಆಕೆಯ ಹಕ್ಕನ್ನು ಮೋದಿ ಕಸಿದುಕೊಂಡಿದ್ದಾರೆ” ಎಂದು ಕಿಡಿಕಾರಿದ್ದಾರೆ.