ಮೂರು ಅಧಿಕಾರಿಗಳನ್ನು ತೆಗೆದುಹಾಕುವಂತೆ ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಸೂಚಿಸಿದೆ. ಮಾರ್ಗಸೂಚಿ ಉಲ್ಲಂಘನೆ ಸೇರಿದಂತೆ ಗಂಭೀರ ಲೋಪಗಳನ್ನು ಮಾಡಿರುವ ಕಾರಣದಿಂದಾಗಿ ಏರ್ ಇಂಡಿಯಾದ ವಿಭಾಗೀಯ ಉಪಾಧ್ಯಕ್ಷರು ಸೇರಿದಂತೆ ಮೂವರು ಹಿರಿಯ ಅಧಿಕಾರಿಗಳನ್ನು ತೆಗೆದುಹಾಕುವಂತೆ, ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಡಿಜಿಸಿಎ ಹೇಳಿದೆ.
ಇನ್ನೊಂದೆಡೆ ಮೇ 16 ಮತ್ತು 17ರಂದು ಬೆಂಗಳೂರು-ಲಂಡನ್ ವಿಮಾನಗಳ ಸ್ಪಾಟ್ ಚೆಕ್‌ಗಳ ಸಮಯದಲ್ಲಿ 10 ಗಂಟೆಗಳ ಮಿತಿಯನ್ನು ಮೀರಿರುವುದನ್ನು ಪತ್ತೆಹಚ್ಚಲಾಗಿದೆ. ಸಿಬ್ಬಂದಿಗೆ ವಿಮಾನ ಕರ್ತವ್ಯ ಸಮಯ ಮಿತಿಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಏರ್ ಇಂಡಿಯಾಗೆ ಶೋ-ಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಇದನ್ನು ಓದಿದ್ದೀರಾ? ವಿಮಾನ ದುರಂತ | ಭವಿಷ್ಯದಲ್ಲಿ ಸಂಭವಿಸುವ ಅನಾಹುತ ತಡೆಗೆ ಉನ್ನತ ಮಟ್ಟದ ಸಮಿತಿ ರಚನೆ
ಏರ್ ಇಂಡಿಯಾ ಅಧಿಕಾರಿಗಳು ಮಾರ್ಗಸೂಚಿ ಪಾಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಈ ಶೋಕಾಸ್ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದ್ದು, ಪ್ರತಿಕ್ರಿಯಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ.
ಜೂನ್ 12ರಂದು ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಕೆಲವೇ ನಿಮಿಷಗಳಲ್ಲಿ ಅಪಘಾತಗೊಂಡಿದೆ. ಹಾಸ್ಟೆಲ್ ಮೇಲೆ ವಿಮಾನ ಪತನಗೊಂಡಿದ್ದು, 270ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ವಿಮಾನದಲ್ಲಿದ್ದ 242 ಪ್ರಯಾಣಿಕರಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದಾರೆ. ಈ ಘಟನೆ ನಡೆದು ಎರಡು ವಾರದಲ್ಲೇ ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ಬಂದಿದೆ. ಜೊತೆಗೆ ಮೂವರು ಹಿರಿಯ ಅಧಿಕಾರಿಗಳನ್ನು ತೆಗೆದುಹಾಕುವಂತೆ ಸೂಚಿಸಲಾಗಿದೆ.
ಹೀಗೆಯೇ ಮುಂದುವರೆದರೆ ಪರವಾನಗಿ ರದ್ಧತಿಯಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ. ಈ ಬೆನ್ನಲ್ಲೇ ಸುರಕ್ಷತೆ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು ಮತ್ತು ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಏರ್ ಇಂಡಿಯಾ ಬದ್ಧವಾಗಿದೆ ಎಂದು ಹೇಳಿದೆ.
