ಬಳ್ಳಾರಿ ಜಿಲ್ಲೆ ಹಾಗೂ ತಾಲೂಕಿನ ಪ್ರಮುಖ ಬೆಳೆಯು ಜೋಳವಾಗಿದ್ದು, ಡಿಸೆಂಬರ್ ಅಥವಾ ಜನವರಿಯಲ್ಲಿ ಕಟಾವುಗೊಂಡು ರೈತರು ತಾವು ಬೆಳದಿರುವ ಬೆಳೆಗಳನ್ನು ಮನೆಯಲ್ಲಿ ಗುಡ್ಡೆ ಹಾಕಿಕೊಂಡಿದ್ದಾರೆ. ಹಿಂಗಾರು ಬೆಳೆ ಪ್ರಾರಂಭಗೊಂಡಲ್ಲಿ ರೈತರು ಬೆಳೆದಿರುವ ಬೆಳೆಯು ಸಂಪೂರ್ಣ ನಷ್ಟ ಉಂಟಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಇನ್ನೂ ಖರೀದಿ ಕೇಂದ್ರದಲ್ಲಿ ಶೇಖರಿಸಿ ಇಡುವುದಕ್ಕಿಂತ ಜೋಳವನ್ನು ಗೋದಾಮಿಗೆ ಸಾಗಿಸಬೇಕು ಎಂದು ಕನ್ನಡ ನಾಡು ರೈತ ಸಂಘದ ಜಿಲ್ಲಾಧ್ಯಕ್ಷ ಮೆಣಸಿನ ಈಶ್ವರಪ್ಪ ಒತ್ತಾಯಿಸಿದರು.
ಕನ್ನಡ ಹಾಗೂ ರೈತ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ ವೇಳೆ ಮಾತನಾಡಿ, “ಖರೀದಿ ಕೇಂದ್ರದಲ್ಲಿರುವ ಜೋಳವನ್ನು ಬೇಗ ಸಾಗಾಣಿಕೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಖರೀದಿ ಅವಧಿ ವಿಸ್ತರಿಸಬೇಕು” ಎಂದು ಕೋರಿದರು.
“ಇದೇ ತಿಂಗಳ 30ರಂದು ಜೋಳವನ್ನು ತೆಗೆದುಕೊಳ್ಳುವುದನ್ನು ತಡೆಹಿಡಿಯುವುದಾಗಿ ಹೇಳಿದ್ದಾರೆ. ಆದುದರಿಂದ ಈ ಆದೇಶವನ್ನು ರದ್ದು ಮಾಡಬೇಕು. ಅದನ್ನು ಇನ್ನೂ ಒಂದು ತಿಂಗಳ ಕಾಲ ವಿಸ್ತರಿಸಬೇಕು. ಖರೀದಿ ಕೇಂದ್ರದಲ್ಲಿ ಸುಮಾರು 3,796 ಮಂದಿ ರೈತರು ನೋಂದಣಿ ಮಾಡಿದ್ದಾರೆ. ಒಟ್ಟು 2,95,428 ಕ್ವಿಂಟಾಲ್ ಜೋಳವನ್ನು ನೋಂದಣಿ ಮಾಡಿದ್ದಾರೆ. 81,863 ಕ್ವಿಂಟಲ್ ಜೋಳವನ್ನು ತೂಕ ಹಾಕಿದ್ದು, ಇನ್ನುಳಿದ 2,625 ಮಂದಿ ರೈತರ 2,13,565 ಕ್ವಿಂಟಲ್ ಜೋಳ ಮಾರುಕಟ್ಟೆಗೆ ಬರಲಿದೆ.
“ಈ ಜೋಳವನ್ನು ಇಂದಿನಿಂದ ಕೇವಲ 10 ದಿನಗಳಲ್ಲಿ ಹೇಗೆ ತೂಕಕ್ಕೆ ಹಾಕಲಾಗುತ್ತದೆ? ಇದು ಕಷ್ಟಸಾಧ್ಯವಾದುದು. ಆದುದರಿಂದ 01 ತಿಂಗಳವರೆಗೆ ಸಮಯಾವಕಾಶವನ್ನು ಮಾಡಿಕೊಟ್ಟಲ್ಲಿ ರೈತರಿಗೆ ತುಂಬಾ ಅನುಕೂಲ ಮಾಡಿದಂತಾಗುತ್ತದೆ. ಆದುದರಿಂದ ಆದಷ್ಟು ಬೇಗ ಜೋಳವನ್ನು ತೂಕ ಮಾಡಿ 80 ರಿಂದ 100 ಲಾರಿಗಳಲ್ಲಿ ಲೋಡ್ ಮಾಡಿಸಿ, ಆದಷ್ಟು ಬೇಗನೆ ಕಳುಹಿಸಿಕೊಡಬೇಕು. ಇದರಿಂದ ರೈತರಿಗೆ ಇನ್ನೂ ತುಂಬಾ ಅನುಕೂಲವಾಗುತ್ತದೆ” ಎಂದು ವಿನಂತಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಬೆಣಚಿ, ಹೊನ್ನಾಪುರ ಪ್ರೌಢಶಾಲೆಗಳಿಗೆ ಬಿಇಒ ಭೇಟಿ; ಸುರಕ್ಷಿತ ಕೊಠಡಿಗೆ ವಿದ್ಯಾರ್ಥಿಗಳ ಸ್ಥಳಾಂತರ
ಪದಾಧಿಕಾರಿಗಳು ಕನ್ನಿ ಶಿವಮೂರ್ತಿ ಜಿ, ದೊಡ್ಡ ಬಸವನಗೌಡ ಜೆ, ರಾಜಯ್ಯ ಕುಂಟನಹಾಲ್, ಯಾಲ್ಪಿ ಸುರೇಶ್, ವೈ ಮಲ್ಲಿಕಾರ್ಜುನ, ಮೇಟಿ ದಿವಾಕರ್ ಗೌಡ, ಜಿ ಚೆನ್ನಾ ರೆಡ್ಡಿ, ಎನ್ ವಿಶ್ವನಾಥ್ ಗೌಡ, ದಿವಾಕರ್ ರೆಡ್ಡಿ, ಶಿವಪ್ರಸಾದ್ ರೆಡ್ಡಿ ಹಾಗೂ ಇತರರು ಇದ್ದರು.