ನವಂಬರ್ ಕಳೆದು ಡಿಸೆಂಬರ್ ತಿಂಗಳೊಳಗೆ ಈ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಗ್ಯಾರಂಟಿ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಭವಿಷ್ಯ ನುಡಿದರು.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಸಿ.ಎನ್.ಪಾಳ್ಯ ಗ್ರಾಮದ ಬಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಸರ್ಕಾರದ ನಡವಳಿಕೆ ಗಮನಿಸುತ್ತಿರುವ ಪ್ರತಿಯೊಬ್ಬ ಪ್ರಜೆಯ ಕಣ್ಣಿಗೂ ಸರ್ಕಾರ ಬಿದ್ದು ಹೋಗುವ ಲಕ್ಷಣ ಕಾಣುತ್ತಿದೆ. ಈ ಬಗ್ಗೆ ಭವಿಷ್ಯ ಹೇಳುವ ಅಗತ್ಯವಿಲ್ಲ ಎಂದರು.
ಸಹಕಾರ ಸಚಿವ ರಾಜಣ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋದಾಗ ಪೊಲೀಸರು ಆತಂಕ ಪಟ್ಟರು. ಖಾಸಗಿ ಕಾರ್ಯಕ್ರಮದಲ್ಲಿ ಯಾವ ರೀತಿಯ ಗದ್ದಲ ಮಾಡುವ ಸಣ್ಣ ಬುದ್ಧಿ ನಮ್ಮದಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹೇಳಿದೆ. ಹೇಮಾವತಿ ಹೋರಾಟ ಹಿನ್ನಲೆ ಮಾಧ್ಯಮದಲ್ಲಿ ಹೇಳಿಕೆ ನೀಡಿಯೇ ಹೋರಾಟ ಮಾಡುತ್ತೇವೆ ಎಂದ ಅವರು ಜುಲೈ 5 ರಂದು ಮುಖ್ಯಮಂತ್ರಿಗಳು ಹೇಮಾವತಿ ವಿಚಾರಕ್ಕೆ ಮೀಟಿಂಗ್ ಆಯೋಜನೆ ಮಾಡುತ್ತಾರೆ ಎಂಬ ವದಂತಿ ಇದೆ. ಈವರೆವಿಗೂ ನಮಗೆ ಆಹ್ವಾನ ಬಂದಿಲ್ಲ. ಬಂದರೆ ಸಭೆಗೆ ತೆರಳಿ ಜಿಲ್ಲೆಯ ಪರ ವಾದ ಮಾಡುತ್ತೇನೆ ಎಂದರು.
ತುರುವೇಕೆರೆಗೆ ಕಾನೂನು ಕಾಲೇಜು ಮಂಜೂರು ಹಾಗೂ ಸಿ.ಎಸ್.ಪುರದಲ್ಲಿ ಪಾಲಿಟೆಕ್ನಿಕ್ ಕಾಲೇಜು ಬಗ್ಗೆ ಮುಖ್ಯಮಂತ್ರಿಗಳಿಗೆ ಕೇಳಿದರೆ ಕಾಂಗ್ರೆಸ್ ಪಕ್ಷಕ್ಕೆ ಬಂದುಬಿಡು. ಎಲ್ಲವೂ ಮಂಜೂರು ಮಾಡುತ್ತೇನೆ ಎನ್ನುತ್ತಾರೆ. ದೇವೇಗೌಡರ ಜೊತೆ ಪಕ್ಷ ಕಟ್ಟಿದವನು ನಾನು. ಜೆಡಿಎಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದ ಅವರು ರೊಟ್ಟಿ ಕಟ್ಟಿಕೊಂಡು ಪಕ್ಷ ಕಟ್ಟಿದ ದೇವೇಗೌಡರಿಗೆ ವಯಸ್ಸಾಗಿದೆ. ಕುಮಾರಣ್ಣ ಕೇಂದ್ರದ ಸಚಿವರಾಗಿ ಜವಾಬ್ದಾರಿ ಹೆಚ್ಚಿದೆ. ಆ ಕಾರಣ ನಿಖಿಲ್ ಕುಮಾರಸ್ವಾಮಿ ಅವರೇ ರಾಜ್ಯ ಪ್ರವಾಸ ಮಾಡಿ ಪಕ್ಷ ಬಲಗೊಳಿಸುತ್ತಿದ್ದಾರೆ. ಬೇಸಿಗೆಯಲ್ಲಿ ಒಣಗಿ ಮಳೆಗಾಲದಲ್ಲಿ ಚಿಗುರುವ ಗರಿಕೆ ಹುಲ್ಲಿನ ರೀತಿ ಜೆಡಿಎಸ್ ಪಕ್ಷ ಮತ್ತೇ ಶಕ್ತಿಯುತವಾಗಲಿದೆ ಎಂದರು.
2014 ರಲ್ಲಿ ಮಂಜೂರಾದ ಸಿ.ಎಸ್.ಪುರ ಡಿಗ್ರಿ ಕಾಲೇಜು ಈಗ ಸ್ವಂತ ಕಟ್ಟಡ ಹೊಂದಿದೆ. ಈ ಹೋಬಳಿಯ ರೈತಾಪಿ ವರ್ಗ ತಮ್ಮ ಮಕ್ಕಳನ್ನು ಕಾಲೇಜಿಗೆ ಸೇರಿಸಿ ದಾಖಲಾತಿ ಹೆಚ್ಚಿಸಿ. ಉತ್ತಮ ಉಪನ್ಯಾಸಕರ ತಂಡ ಇಲ್ಲಿದೆ. ನೂರು ಸಂಖ್ಯೆ ದಾಟಿರುವ ದಾಖಲಾತಿ 300 ಕ್ಕೆ ಹೆಚ್ಚಿದಲ್ಲಿ ಮತ್ತಷ್ಟು ಕಟ್ಟಡಗಳು, ಅವಶ್ಯ ಎಲ್ಲಾ ಸವಲತ್ತು ಒದಗಿಸುವ ಭರವಸೆ ನೀಡಿದ ಅವರು ಹೌಸಿಂಗ್ ಬೋರ್ಡ್ ಮೂಲಕ ಮತ್ತೆ ಎರಡು ಕೋಟಿ ಮಂಜೂರಾತಿಗೆ ಸಚಿವರ ಜೊತೆ ಮಾತನಾಡುತ್ತೇನೆ. ಕೇಂದ್ರ ಸಚಿವ ಕುಮಾರಣ್ಣ ಅವರ ಮೂಲಕ ತುರುವೇಕೆರೆ ಕ್ಷೇತ್ರಕ್ಕೆ ಹೆಚ್ಚುವರಿ 50 ಬಸ್ಸುಗಳನ್ನು ಮಜೂರು ಮಾಡಿಸುವ ಭರವಸೆ ನೀಡಿದರು.
ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ.ರಾಮಕೃಷ್ಣ ರೆಡ್ಡಿ ಮಾತನಾಡಿ ಹೋಬಳಿ ಮಟ್ಟದಲ್ಲಿ ಮೂರು ಎಕರೆ ಪ್ರದೇಶದಲ್ಲಿ 3.50 ಕೋಟಿ ವೆಚ್ಚದ ಸುಸಚ್ಚಿತ ಕಟ್ಟಡ ಕಾಲೇಜು ವಾತಾವರಣಕ್ಕೆ ಮಕ್ಕಳ ಶಿಕ್ಷಣ ಉತ್ತಮವಾಗಲಿದೆ. ಪ್ರತಿಭಾವಂತ ಉಪನ್ಯಾಸಕರು ಇರುವ ಕಾಲೇಜಿನಲ್ಲಿ ಮಕ್ಕಳ ಅಧ್ಯಯನ ಮಾಡಿಸಿದಲ್ಲಿ ಮಕ್ಕಳ ಭವಿಷ್ಯ ಉಜ್ವಲ ಆಗಲಿದೆ. ಈ ಜೊತೆಗೆ ಕಾಲೇಜು ಅಬಿವೃದ್ದಿ ಸಮಿತಿ ಈ ವರ್ಷ ದಾಖಲಾಗುವ ಎಲ್ಲಾ ಮಕ್ಕಳ ಶುಲ್ಕ ಭರಿಸುವ ವಾಗ್ದಾನ ಮೆಚ್ಚುವಂತದ್ದು ಎಂದು ಸ್ಥಳೀಯ ಮುಖಂಡರ ಆಸಕ್ತಿಯನ್ನು ಶ್ಲಾಘಿಸಿದರು.
ಕಾಲೇಜು ಅಭಿವೃದ್ದಿ ಸಮಿತಿಯ ನಂಜೇಗೌಡ, ಜನ್ನೇನಹಳ್ಳಿ ನರಸಿಂಹಮೂರ್ತಿ, ಬಿರ್ಲೇಗೌಡ ಮಾತನಾಡಿದರು.
ನಂತರ ವೇದಿಕೆಯಲ್ಲಿ ನೂತನ ಕಾಲೇಜು ಕಟ್ಟಡ ನಿರ್ಮಾಣ ಮಾಡಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ದುರ್ಗಮ್ಮ, ಪ್ರಾಂಶುಪಾಲ ಡಾ.ಆರ್.ಪುಟ್ಟರಾಜು, ಗೃಹ ಮಂಡಳಿ ಕಾರ್ಯಪಾಲಕ ಅಭಿಯಂತರರಾದ ಸೌಮ್ಯ, ಸಹಾಯಕ ಅಭಿಯಂತರರಾದ ಆಶಾ, ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರಾದ ರಾಜ್ ಗೋಪಾಲ್, ನರಸೇಗೌಡ, ಈಶ್ವರ್ ಗೌಡ, ನವೀನ್, ತಾಪಂ ಮಾಜಿ ಅಧ್ಯಕ್ಷ ಸಿದ್ದರಾಮಣ್ಣ, ಬೋರಪ್ಪನಹಳ್ಳಿ ಕುಮಾರ್, ಜಗದೀಶ್, ಗಿರೀಶ್, ಅನುಸೂಯಮ್ಮ, ಮಹಾಲಕ್ಷಮ್ಮ, ಪಿಯು ಕಾಲೇಜಿನ ಪ್ರಾಚಾರ್ಯ ವೆಂಕಟಾಚಲಯ್ಯ, ಉಪ ಪ್ರಾಚಾರ್ಯ ಗೋವಿಂದರಾಜು
ಇತರರು ಇದ್ದರು.