ರೈತರೊಬ್ಬರು ಸಾಲ ಬಾಧೆಯಿಂದ ಜುಗುಪ್ಸೆಗೊಂಡು ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರಟಗಿ ತಾಲ್ಲೂಕಿನ ಬೇವಿನಾಳ ಗ್ರಾಮದಲ್ಲಿ ನಡೆದಿದೆ.
ರೈತ ಮಹಾದೇವಪ್ಪ (55) ಮೃತರು. ಮಹಾದೇವಪ್ಪ ತಮ್ಮ ಪಿತ್ರಾರ್ಜಿತ 6.36 ಎಕರೆ ಭೂಮಿಯಲ್ಲಿ ಭತ್ತ ಬೆಳೆದಿದ್ದರು. ಈಚೆಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಭತ್ತದ ಬೆಳೆ ನೆಲದ ಪಾಲಾಗಿ ತುಂಬಾ ನಷ್ಟವಾಗಿತ್ತು. ಕೃಷಿಗಾಗಿ ಕಾರಟಗಿ ಪಟ್ಟಣದ ಐಡಿಬಿಐ ಬ್ಯಾಂಕ್‌ನಲ್ಲಿ ₹6.25 ಲಕ್ಷ, ಖಾಸಗಿಯಾಗಿ ₹10 ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ.
ಜೂ.7ರಂದು ರಾತ್ರಿ ಮನೆಯಲ್ಲಿ ಒಬ್ಬರೇ ಇದ್ದಾಗ ಕ್ರಿಮಿನಾಶಕ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದರು. 8ರಂದು ಪಕ್ಕದ ನಿವಾಸಿಗಳು ಸಂಶಯಗೊಂಡು ನೋಡಿದಾಗ ವಿಷಯ ತಿಳಿದಿದೆ. ಅಂದೇ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ವೈದ್ಯರ ಶಿಫಾರಸಿನಂತೆ ಗಂಗಾವತಿಯ ಖಾಸಗಿ ಆಸ್ಪತ್ರೆಗೆ ಬಳಿಕ ಹೈದರಾಬಾದ್ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ : ವಿಜಯನಗರ | ಚೆಕ್‌ಡ್ಯಾಂನಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರುಪಾಲು
ಆಸ್ಪತ್ರೆಯ ಖರ್ಚು ನಿಭಾಯಿಸಲಾಗದೇ ಶನಿವಾರ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಸಂಬಂಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.