ತಮ್ಮ ದೇಶದ ಪರಮಾಣು ನೆಲೆಗಳ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯನ್ನು ಇರಾನ್ ಖಂಡಿಸಿದ್ದು, ಈ ಕ್ರಿಮಿನಲ್ ವರ್ತನೆಗೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಇರಾನ್‌ನ ವಿದೇಶಾಂಗ ಸಚಿವ ಸಯೀದ್ ಅಬ್ಬಾಸ್ ಅರಘ್ಚಿ, ಇದು ಅಂತಾರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಪರಮಾಣು ಪ್ರಸರಣ ನಿಷೇಧ ಒಪ್ಪಂದದ (ಎನ್‌ಪಿಟಿ) ಗಂಭೀರ ಉಲ್ಲಂಘನೆಯಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾದ ಅಮೆರಿಕವು ಶಾಂತಿಯುತ ಪರಮಾಣು ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು ಕ್ರಿಮಿನಲ್ ನಡವಳಿಕೆಯನ್ನು ಎಸಗಿದೆ ಎಂದು ಅರಘ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇಂದು ಮುಂಜಾನೆಯ ಘಟನೆಗಳು ಅತಿರೇಕವಾದವು. ಇದು ಗಂಭೀರ ಪರಿಣಾಮಗಳನ್ನು ಬೀರುತ್ತದೆ. ವಿಶ್ವಸಂಸ್ಥೆಯ ಪ್ರತಿಯೊಬ್ಬ ಸದಸ್ಯರು ಈ ಅತ್ಯಂತ ಅಪಾಯಕಾರಿ, ಕಾನೂನುಬಾಹಿರ ಮತ್ತು ಕ್ರಿಮಿನಲ್ ನಡವಳಿಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಅರಘ್ಚಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಜಾಗತಿಕ ಸಮುದಾಯವು ಇದರ ಬಗ್ಗೆ ಗಮನಹರಿಸಬೇಕೆಂದು ಎಂದು ಕರೆ ನೀಡಿರುವ ಅವರು, ವಿಶ್ವಸಂಸ್ಥೆಯ ಪ್ರತಿಯೊಬ್ಬ ಸದಸ್ಯರು ವಾಷಿಂಗ್ಟನ್ ತೆಗೆದುಕೊಂಡ ಅಪಾಯಕಾರಿ ಮತ್ತು ಕಾನೂನುಬಾಹಿರ ಕ್ರಮಗಳನ್ನು ಖಂಡಿಸಬೇಕು ಎಂದು ಹೇಳಿದರು.
ವಿಶ್ವಸಂಸ್ಥೆಯ ಚಾರ್ಟರ್ ಅಡಿಯಲ್ಲಿರುವ ನಿಬಂಧನೆಗಳನ್ನು ಉಲ್ಲೇಖಿಸಿದ ಅರಾಘ್ಚಿ, ಇರಾನ್‌ಗೆ ಆತ್ಮರಕ್ಷಣೆಯ ಹಕ್ಕಿದೆ. ಅದನ್ನು ಚಲಾಯಿಸಲು ಅದು ಸ್ವತಂತ್ರವಾಗಿದೆ. ಇರಾನ್ ಅಂತಹ ಎಲ್ಲ ಆಯ್ಕೆಗಳನ್ನು ಕಾಯ್ದಿರಿಸಿದೆ. ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಸ್ವರಕ್ಷಣೆಯಲ್ಲಿ ಕಾನೂನುಬದ್ಧ ಪ್ರತಿಕ್ರಿಯೆಯನ್ನು ಅನುಮತಿಸುವ ಅದರ ನಿಬಂಧನೆಗಳಿಗೆ ಅನುಗುಣವಾಗಿ, ಇರಾನ್ ತನ್ನ ಸಾರ್ವಭೌಮತ್ವ ಮತ್ತು ಜನರನ್ನು ರಕ್ಷಿಸಲು ಎಲ್ಲ ಆಯ್ಕೆಗಳನ್ನು ಕಾಯ್ದಿರಿಸಿದೆ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿ.ಆರ್ ಪಾಟೀಲ್ ಆರೋಪಗಳೂ, ಸರ್ಕಾರದ ನೈತಿಕತೆಯೂ
ಕಳೆದ ರಾತ್ರಿ ಮೂರು ಪ್ರಮುಖ ಇರಾನಿನ ಪರಮಾಣು ತಾಣಗಳಾದ ಫೋರ್ಡೊ, ನಟಾಂಜ್ ಮತ್ತು ಇಸ್ಫಹಾನ್ ಅನ್ನು ಗುರಿಯಾಗಿಸಿಕೊಂಡ ಅಮೆರಿಕ ಮಿಲಿಟರಿ ಕಾರ್ಯಾಚರಣೆಯ ನಂತರ ಈ ಹೇಳಿಕೆ ನೀಡಲಾಗಿದೆ.
ಇರಾನ್‌ನ ಪರಮಾಣು ನೆಲೆಗಳಾದ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ಗಳ ಮೇಲೆ ಅಮೆರಿಕ ದಾಳಿ ನಡೆಸಿದೆ.
“ಇರಾನ್‌ನಲ್ಲಿರುವ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಸೇರಿದಂತೆ ಮೂರು ಪರಮಾಣು ತಾಣಗಳ ಮೇಲೆ ನಾವು ನಮ್ಮ ಅತ್ಯಂತ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದ್ದೇವೆ. ನಮ್ಮ ಎಲ್ಲ ವಿಮಾನಗಳು ಈಗ ಇರಾನ್ ವಾಯುಪ್ರದೇಶದ ಹೊರಗೆ ಸುರಕ್ಷಿತವಾಗಿವೆ”, ಎಂದು ಡೊನಾಲ್ಡ್ ಟ್ರಂಪ್ ಅವರು ಟ್ರೂತ್ ಸೋಷಿಯಲ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ