ನಾನು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷನಾಗಿ ಆಯ್ಕೆ ಆದ ದಿನದಿಂದಲೂ ನನ್ನ ಏಳಿಗೆ ಸಹಿಸದ ಕೆಲವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ನಾಡೋಜ ಮಹೇಶ ಜೋಶಿ ಆರೋಪಿಸಿದರು.
ಬಳ್ಳಾರಿ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, “ನಾನು ಪರಿಷತ್ತಿನ ಚುನಾವಣೆಗೆ ಸ್ಪರ್ಧೆ ಮಾಡಿದಾಗನಿಂದಲೂ ಸಹ ಹಲವರು ನನ್ನನ್ನು ವಿರೋಧಿಸುತ್ತಿದ್ದಾರೆ. ನನ್ನ ಕೆಲಸದಲ್ಲಿ ಲೋಪಗಳನ್ನು ಹುಡುಕುತ್ತಾ ನನ್ನ ತೇಜೋವಧೆಗೆ ಮುಂದಾಗಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಅಕ್ರಮ ನಡೆಸಿಲ್ಲ, ಅಸಲಿಗೆ ನನ್ನ ಹೆಸರಿಗಾಗಲಿ ಅಥವಾ ಕೇಂದ್ರ ಪರಿಷತ್ತಿಗಾಗಲಿ ಸರ್ಕಾರದ ಹಣ ಜಮೆ ಆಗುವುದಿಲ್ಲ. ಸಮ್ಮೇಳನ ನಡೆಸಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಸ್ವಾಗತ ಸಮಿತಿಗೆ ಹಣ ಜಮೆಯಾಗುತ್ತದೆ ಅವರೇ ಸಮ್ಮೇಳನದ ಎಲ್ಲಾ ಖರ್ಚು ವೆಚ್ಚವನ್ನು ನೋಡಿಕೊಂಡು ಉಳಿದ ಹಣವನ್ನು ಪರಿಷತ್ತಿನ ಖಾತೆಗೆ ಜಮೆ ಮಾಡುತ್ತಾರೆ. ಹೀಗಿರುವಾಗ ನಾನು ಹಣದಲ್ಲಿ ಅಕ್ರಮ ಎಸಗುವುದು ಹೇಗೆ ಸಾಧ್ಯ” ಎಂದು ಪ್ರಶ್ನಿಸಿದರು.
“ನನ್ನ ವಿರುದ್ಧ ಅಥವಾ ನಾನು ಮಾಡಿದ ಯಾವುದಾದರೂ ಅಕ್ರಮದ ಬಗ್ಗೆ ಸಾಕ್ಷಿಗಳಿದ್ದಲ್ಲಿ ತನಿಖಾ ಸಂಸ್ಥೆಗೆ ನೀಡಲಿ ಅದು ಬಿಟ್ಟು ವೃಥಾ ಸುಳ್ಳು ಆರೋಪ ಮಾಡುತ್ತಾ ತಿರುಗಾಡುವುದು ಅವರ ಘನತೆಗೆ ಶೋಭೆ ತರುವಂತದ್ದಲ್ಲ. ಬೈಲಾ ತಿದ್ದುಪಡಿಯನ್ನು ನಾನು ನನ್ನ ಅನುಕೂಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಿಕೊಳ್ಳುತ್ತೇನೆ ಎಂದು ಆರೋಪಿಸುತ್ತಿರುವ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದ ಬೈಲಾವನ್ನು ನಾನಷ್ಟೇ ಅಲ್ಲ ಪರಿಷತ್ತಿನ ಅಧ್ಯಕ್ಷರಾದವರು ಆಗಾಗ ತಿದ್ದುಪಡಿ ಮಾಡುತ್ತಲೇ ಬಂದಿದ್ದಾರೆ. ಈ ದೇಶದ ಸಂವಿಧಾನವನ್ನು ಆಗಾಗ ತಿದ್ದುಪಡಿ ಮಾಡಲಾಗುತ್ತದೆ ಎಂದರೆ ಪರಿಷತ್ತಿನ ಬೈಲಾ ತಿದ್ದುಪಡಿ ಮಾಡುವುದು ಏನು ಅಪರಾಧ? ಬೈಲಾ ತಿದ್ದುಪಡಿಯಿಂದ ಪರಿಷತ್ತಿಗೆ ಅನುಕೂಲಕರ ವಾತಾವರಣ ನಿರ್ಮಿಸುವುದೇ ನನ್ನ ಇಚ್ಛೆಯಾಗಿದೆ” ಎಂದರು.
“ಜೂನ್ 26ರಂದು ಸಂಡೂರಿನಲ್ಲಿ ಸರ್ವ ಸದಸ್ಯರ ಸಭೆ ಕರೆಯಲಾಗಿದೆ. ಈ ಸಭೆಯ ಮುಖ್ಯ ಉದ್ದೇಶ ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಾಹಿತ್ಯಿಕ ವಾತಾವರಣ ನಿರ್ಮಾಣವಾಗಲಿ ಎಂಬುದಾಗಿದೆಯೇ ಹೊರತು ಯಾವುದೇ ದುರುದ್ದೇಶ ಹೊಂದಿಲ್ಲ. ಸಮ್ಮೇಳನದ ಸರ್ವಾಧ್ಯಕ್ಷರನ್ನು ಕೇಂದ್ರ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಲಿದೆ ಅದರಲ್ಲಿ ಯಾರೂ ಕೂಡ ತಲೆ ಹಾಕುವಂತಿಲ್ಲ. ಕಾರ್ಯಕ್ರಮ ರೂಪಿಸುವುದು ಪರಿಷತ್ತಿನ ಕೆಲಸ, ಹಣ ಖರ್ಚು ಮಾಡುವುದು ಜಿಲ್ಲಾಧಿಕಾರಿ ಮತ್ತು ಸ್ವಾಗತ ಸಮಿತಿಯ ಕೆಲಸ, ಇದರಲ್ಲಿ ಯಾವುದೇ ಹಣದ ಅಕ್ರಮ ನಡೆಯುವ ಸಾಧ್ಯತೆ ಇಲ್ಲವೇ ಇಲ್ಲ. ಸರ್ಕಾರದಿಂದ ಬಿಡುಗಡೆಯಾದ ಹಣದಲ್ಲಿ ಸಮ್ಮೇಳನ ನಂತರ ಉಳಿದ ಹಣವನ್ನು ಆಯಾ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೂ ಅದನ್ನು ಕೇಂದ್ರ ಸಮಿತಿ ಪಡೆಯುವದಿಲ್ಲ” ಎಂದರು.
ಇದನ್ನೂ ಓದಿ: ಬಳ್ಳಾರಿ | ಬಾಲ್ಯ ವಿವಾಹ; ಮೂವರ ವಿರುದ್ಧ ಪ್ರಕರಣ ದಾಖಲು
“ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ವಿರುದ್ಧ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಲ್ಲಿ ಪರಿಷತ್ ವತಿಯಿಂದ ಪಿಐಎಲ್ ಸಲ್ಲಿಸಿಕೊಳ್ಳಲಾಗಿದೆ. ಯಾರೇ ಆಗಲಿ ನಮ್ಮ ಮೇಲೆ ಕಲ್ಲು ಹೊಡೆಯಲು ಪ್ರಯತ್ನಿಸುವ ಮುನ್ನ ತಾವಿರುವ
ಗಾಜಿನ ಮನೆಯ ಕಡೆ ನೋಡಿಕೊಳ್ಳಲಿ” ಎಂದು ಮಾರ್ಮಿಕವಾಗಿ ತಮ್ಮನ್ನು ವಿರೋಧಿಸುವವರಿಗೆ ಉತ್ತರ ನೀಡಿದರು.
“ಬಳ್ಳಾರಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರೂಪುರೇಷೆಗಳನ್ನು ಶೀಘ್ರದಲ್ಲಿ ರೂಪಿಸಲಾಗುವುದು ಮತ್ತು ಸಮ್ಮೇಳನವನ್ನು ಅತ್ಯಂತ ಯಶಸ್ವಿಗೊಳಿಸಲಾಗುವುದು. ಬಳ್ಳಾರಿಯ ಜನತೆ ಮತ್ತು ಪತ್ರಕರ್ತರು ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಬೇಕು” ಎಂದು ಕೋರಿದರು.
ಈ ಸಂದರ್ಭದಲ್ಲಿ ಕೇಂದ್ರ ಪರಿಷತ್ತಿನ ಕೋಶಾಧ್ಯಕ್ಷ ಪಟೇಲ್ ಪಾಂಡು, ಹಾಸನ ಜಿಲ್ಲಾಧ್ಯಕ್ಷ ಮಲ್ಲೇಶ್, ಚಿತ್ರದುರ್ಗದ ಶಿವ ಸ್ವಾಮಿ, ದಾವಣಗೆರೆಯ ವಾಮದೇವಪ್ಪ, ನೈಬಿಸಾಬ್ ಕುಷ್ಟಗಿ, ಬಳ್ಳಾರಿ ಕಾಸಪ್ಪ ಜಿಲ್ಲಾಧ್ಯಕ್ಷ ನಿಷ್ಟಿ ರುದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಹಂದಿಹಾಳ್ ಶಿವಲಿಂಗಪ್ಪ ಸೇರಿದಂತೆ ಹಲವರಿದ್ದರು.