ಸಕಲೇಶಪುರದಿಂದ ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣದ ನಡುವೆ ಬರುವ ಎಡಕುಮೇರಿ-ಶಿರಿಬಾಗಿಲು ನಡುವೆ ಗುಡ್ಡ ಕುಸಿದು ಸುಮಾರು ಐದಾರು ಗಂಟೆಗಳ ಕಾಲ ಸ್ಥಗಿತವಾಗಿದ್ದ ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರವನ್ನು ಕಾರ್ಯಾಚರಣೆ ನಡೆಸಿ ಇಂದು ಬೆಳಗ್ಗೆ 9.30ರ ಸುಮಾರಿಗೆ ಎಲ್ಲವನ್ನೂ ತೆರವುಗೊಳಿಸಿ, ಹಳಿ ದುರಸ್ತಿ ಪಡಿಸಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಪಶ್ಚಿಮಘಟ್ಟ ಭಾಗದಲ್ಲಿ ಭಾರೀ ಮಳೆಯಿಂದ 74-75ನೇ ಮೈಲಿನಲ್ಲಿ ಹಳಿ ಮೇಲೆ ಗುಡ್ಡ ಕುಸಿದಿತ್ತು. ಇದರಿಂದ ಬೆಂಗಳೂರು-ಕಣ್ಣೂರು ಬೆಂಗಳೂರು-ಮುರುಡೇಶ್ವರ ರೈಲುಗಳ ಸಂಚಾರ ಕೆಲವು ಗಂಟೆ ಸ್ಥಗಿತಗೊಂಡಿತ್ತು.
ಬಂಡೆ ಬಿದ್ದಿದ್ದ ಅನತಿ ದೂರದಲ್ಲಿ ಬೆಂಗಳೂರು ಕಣ್ಣೂರು ಎಕ್ಸ್‌ಪ್ರೆಸ್ ರೈಲು ನಿಂತಿತ್ತು. ಬಂಡೆ ಉರುಳಿ ಬಿದ್ದ ರಭಸಕ್ಕೆ ರೈಲ್ವೇ ಹಳಿ ಡ್ಯಾಮೇಜ್ ಆಗಿತ್ತು. ಹೀಗಾಗಿ ಅರ್ಧ ಮಾರ್ಗದಲ್ಲೇ ರೈಲುಗಳು ನಿಲ್ಲಬೇಕಾಗಿತ್ತು.
ಇದನ್ನೂ ಓದಿ: ಹಾಸನ | ಪ್ರಜ್ವಲ್ ರೇವಣ್ಣ ಲೈಂಗಿಕ ಹಲ್ಲೆ ಪ್ರಕರಣ; ದಿನನಿತ್ಯ ವಿಚಾರಣೆ
ಸಕಲೇಶಪುರ ರೈಲ್ವೆ ನಿಲ್ದಾಣದಲ್ಲಿ ನಿಂತ ರೈಲು ಪ್ರಯಾಣಿಕರಿಗೆ, ಅಧಿಕಾರಿಗಳೇ ಕಾಫಿ-ತಿಂಡಿ ವ್ಯವಸ್ಥೆ ಮಾಡಿದರು. ನಂತರ ಬೆಳಕಾಗುವವರೆಗೂ ಎಲ್ಲರೂ ರೈಲಿನಲ್ಲೇ ರಾತ್ರಿ ಕಳೆಯಬೇಕಾಯಿತು. ಕೆಲವರು ಬೇರೆ ವಾಹನದಲ್ಲಿ ತಮ್ಮ ತಮ್ಮ ಊರಿಗೆ ತೆರಳಿದರು.
ಸಕಲೇಶಪುರದಲ್ಲಿ ನಿಂತಿದ್ದ ಬೆಂಗಳೂರು ಮುರುಡೇಶ್ವರ, ವಿಜಯಪುರ ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ಆರಂಭಿಸಿದವು.