ನೌಕಾನೆಲೆಗಾಗಿ ಭೂಸ್ವಾಧೀನ ಪ್ರಕರಣಗಳಲ್ಲಿ ಪತೀಕ್ಷಿಸಿದ್ದ ಹೆಚ್ಚುವರಿ ಪರಿಹಾರ ಹಣವೀಗ ಹಂತ ಹಂತವಾಗಿ ವಿತರಣೆ ಆಗುತ್ತಿದೆ. ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ನೇತೃತ್ವದಲ್ಲಿ 57 ಸಂತ್ರಸ್ತರಿಗೆ ಒಟ್ಟು ₹10,47 ಕೋಟಿಗಳಷ್ಟು ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಯಿತು.
1894ರ ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 28(ಎ) ಅಡಿಯಲ್ಲಿ ಈ ಭೂಸ್ವಾಧೀನ ನಡೆದಿದ್ದು, ಒಟ್ಟು 443 ಪ್ರಕರಣಗಳ ಪೈಕಿ 338 ಪ್ರಕರಣಗಳಿಗೆ ಈಗಾಗಲೇ ಅಂತಿಮ ಆದೇಶ ಹೊರಡಿಸಲಾಗಿದ್ದು, ₹68,38,13,841 ರೂಪಾಯಿಗಳಷ್ಟು ಪರಿಹಾರ ಮೊತ್ತ ನಿಗದಿಯಾಗಿತ್ತು.
ಈ ಸಂಬಂಧಿತ ವರದಿಯನ್ನು ಬೆಂಗಳೂರು ಡಿಫೆನ್ಸ್ ಎಸ್ಟೇಟ್ಸ್ ಆಫೀಸರ್‌ಗೆ ಕಳುಹಿಸಲಾಗಿತ್ತು. ಇದೀಗ ಅವರಿಂದಲೇ RTGS ಮೂಲಕ ಹಣವನ್ನು ಫಲಾನುಭವಿಗಳ ಖಾತೆಗೆ ಆನ್‌ಲೈನ್ ಮೂಲಕ ವರ್ಗಾಯಿಸಲಾಗಿದೆ.

ಈ ಹೋರಾಟದಲ್ಲಿ ಹಲವು ಭೂದಾತರು ತಮ್ಮ ಜೀವನವನ್ನೇ ಕಳೆದುಕೊಂಡಿದ್ದು, ಕೆಲವರು ಮೃತರಾಗಿದ್ದಾರೆ. ಹಲವರು ಈಗ ವೃದ್ಧರಾಗಿ, ಅನಾರೋಗ್ಯದೊಂದಿಗೆ ಬದುಕು ಸಾಗಿಸುತ್ತಿದ್ದಾರೆ.
“ಭೂಸ್ವಾಧೀನವಾದ ಮೇಲೆ ಜನರು ನ್ಯಾಯಕ್ಕಾಗಿ ದೀರ್ಘಕಾಲ ಕಾದಿದ್ದಾರೆ. ಈಗಲಾದರೂ ಹಂತ ಹಂತವಾಗಿ ಪರಿಹಾರ ನೀಡುವ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಕ್ರಮ ಕೈಗೊಂಡಿದ್ದೇವೆ” ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.
ಇದನ್ನೂ ಓದಿ: ಉತ್ತರ ಕನ್ನಡ | ನಗರಸಭೆ ಮಾಜಿ ಸದಸ್ಯನ ಕೊಲೆ ಪ್ರಕರಣ: ಐವರು ಪೊಲೀಸರ ಅಮಾನತು
ಇನ್ನೂ ₹58 ಕೋಟಿ ರೂಪಾಯಿಗಳಷ್ಟು ಪರಿಹಾರ ಹಣ ಬಾಕಿ ಉಳಿದಿದ್ದು, ಸರ್ಕಾರದಿಂದ ಸಮರ್ಪಕ ಪಾವತಿಗಾಗಿ ಮುಂದಿನ ಹಂತದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಪರಿಹಾರ ವಿತರಣೆಯಿಂದ ಏಕ ಕಾಲದಲ್ಲಿ ಹೆಚ್ಚಿನ ಫಲಾನುಭವಿಗಳಿಗೆ ಧನ ಸಹಾಯ ದೊರೆತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಬಾಕಿ ಉಳಿದವರಿಗೂ ಶೀಘ್ರ ಪರಿಹಾರ ದೊರಕುವ ನಿರೀಕ್ಷೆ ವ್ಯಕ್ತವಾಗಿದೆ.