ಹಿರಿಯ ನಾಗರಿಕ ಪ್ರಯಾಣಿಕರೊಬ್ಬರಿಗೆ ತಪ್ಪಾದ ಟಿಕೆಟ್ ನೀಡಿ ಮಾನಸಿಕ ಮತ್ತು ಆರ್ಥಿಕ ಸಮಸ್ಯೆ ಉಂಟು ಮಾಡಿದ ಕಾರಣಕ್ಕೆ, ಪಿಎಚ್‌ಡಿ ಪರೀಕ್ಷೆಗೆ ಪ್ರಯಾಣಿಕರು ಹಾಜರಾಗಲು ಸಾಧ್ಯವಾಗದ ಕಾರಣಕ್ಕೆ 30 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಸ್ಪೈಸ್‌ಜೆಟ್‌ಗೆ ಗ್ರಾಹಕ ಆಯೋಗವು ಆದೇಶಿಸಿದೆ.
2020ರ ಪ್ರಕರಣದ ಆದೇಶವನ್ನು ಮುಂಬೈನ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗ ಜೂನ್ 17ರಂದು ನೀಡಿದೆ. ಪ್ರಯಾಣಿಕರಿಗೆ ಮಾನಸಿಕ ಆಘಾತ ಉಂಟುಮಾಡಿದ ವಿಮಾನಯಾನ ಸಂಸ್ಥೆಯು ನಿರ್ಲಕ್ಷ್ಯದ ವರ್ತನೆ ವಿಚಾರದಲ್ಲಿ ತಪ್ಪಿತಸ್ಥರು ಎಂದು ತೀರ್ಮಾನ ನೀಡಲಾಗಿದೆ.
ಇದನ್ನು ಓದಿದ್ದೀರಾ? ಗುಜರಾತ್ ವಿಮಾನ ದುರಂತ | ವೈದ್ಯರು ಸೇರಿ ಒಂಬತ್ತು ಮಂದಿ ಸಾವು; ಹಾಸ್ಟೆಲ್ ತೆರವು
ಹವಾಮಾನ ಕಾರಣದಿಂದಾಗಿ ವಿಮಾನ ರದ್ದಾದ ಕಾರಣ ವಿಮಾನಯಾನ ಸಂಸ್ಥೆಯು ಪರ್ಯಾಯ ಬುಕಿಂಗ್ ಮಾಡಿತ್ತು. ಈ ವೇಳೆ ತಪ್ಪಾದ ಟಿಕೆಟ್ ನೀಡಿದೆ. ದೂರುದಾರರಿಗೆ ಪರ್ಯಾಯ ಟಿಕೆಟ್ ಒದಗಿಸುವಾಗ ತಪ್ಪಾದ ಟಿಕೆಟ್ ಅನ್ನು ನೀಡಿದೆ. ಇದರಿಂದಾಗಿ ದೂರುದಾರರು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಬಳಲುವಂತಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ದೂರುದಾರರೂ ‘ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ’ ಎಂದು ಆಯೋಗ ಹೇಳಿದೆ. “ಟಿಕೆಟ್ ಲಭಿಸಿದಾಗ ದೂರುದಾರರು ಅದನ್ನು ಪರಿಶೀಲಿಸಬೇಕಿತ್ತು. ಆಗ ತಪ್ಪನ್ನು ಸ್ಥಳದಲ್ಲೇ ಸರಿಪಡಿಸಬಹುದಿತ್ತು. ದೂರುದಾರರು ಹೆಚ್ಚಿನ ತೊಂದರೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದಿತ್ತು” ಎಂದು ಆರೋಗ ಅಭಿಪ್ರಾಯಿಸಿದೆ.
2020ರ ಡಿಸೆಂಬರ್ ಐದರಂದು ಹಿರಿಯ ನಾಗರಿಕರೊಬ್ಬರು ಮುಂಬೈನಿಂದ ದರ್ಭಂಗಾಗೆ ಸ್ಪೈಸ್‌ಜೆಟ್ ಟಿಕೆಟ್‌ಗಳನ್ನು ಮತ್ತು ಎರಡು ದಿನಗಳ ನಂತರ ಹಿಂದಿರುಗುವ ಪ್ರಯಾಣದ ಟಿಕೆಟ್ ಅನ್ನು ಬುಕ್ ಮಾಡಿದ್ದರು. ಮುಂಬೈನಿಂದ ದರ್ಭಂಗಾಗೆ ಪ್ರಯಾಣಿಸಿದ ಬಳಿಕ ಕೆಟ್ಟ ಹವಾಮಾನದಿಂದಾಗಿ ಹಿಂದಿರುಗುವ ವಿಮಾನ ರದ್ದಾಗಿತ್ತು.
2020ರ ಡಿಸೆಂಬರ್ 5ರಂದು ಮುಂಬೈನಲ್ಲಿ ಪಿಎಚ್‌ಡಿ ಆನ್‌ಲೈನ್ ಪರೀಕ್ಷೆಗೆ ಹಾಜರಾಗಬೇಕಾಗಿದ್ದರಿಂದ, ದೂರುದಾರರು ಪರ್ಯಾಯ ವ್ಯವಸ್ಥೆಯನ್ನು ಕೋರಿದ್ದರು. ನಂತರ ಸ್ಪೈಸ್‌ಜೆಟ್ ಅದೇ ದಿನ ಪಾಟ್ನಾದಿಂದ ಕೋಲ್ಕತ್ತಾಗೆ ಮತ್ತು ನಂತರ ಕೋಲ್ಕತ್ತಾದಿಂದ ಮುಂಬೈಗೆ ಪ್ರಯಾಣಿಸಲು ಪರ್ಯಾಯ ಟಿಕೆಟ್ ಅನ್ನು ಒದಗಿಸಿತ್ತು.
ಆದರೆ ಪಾಟ್ನಾ ತಲುಪಿದ ನಂತರ, ವಿಮಾನ ನಿಲ್ದಾಣದ ಅಧಿಕಾರಿಗಳು ಅವರಿಗೆ ನೀಡಲಾದ ಟಿಕೆಟ್‌ಗಳು ತಪ್ಪಾಗಿವೆ ಎಂದು ತಿಳಿಸಿದರು. ಕೋಲ್ಕತ್ತಾದಿಂದ ಮುಂಬೈಗೆ ಹೊರಡಲಿದ್ದ ವಿಮಾನವು ಅದಾಗಲೇ ಹೊರಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಇದನ್ನು ಓದಿದ್ದೀರಾ? ವಿಮಾನ ದುರಂತ : ಕೇಂದ್ರ ವಿಮಾನಯಾನ ಸಚಿವ ರಾಜೀನಾಮೆಗೆ ಸಚಿವ ಈಶ್ವರ ಖಂಡ್ರೆ ಆಗ್ರಹ
ಇದರಿಂದಾಗಿ ದೂರುದಾರರು ಮರುದಿನ ಬೆಳಿಗ್ಗೆ ತಮ್ಮ ಸ್ವಂತ ಖರ್ಚಿನಲ್ಲಿ ಮತ್ತೊಂದು ವಿಮಾನವನ್ನು ಬುಕ್ ಮಾಡಿ ಹೊರಡುವಂತಾಯಿತು. ಇದರಿಂದ ದೂರುದಾರರಿಗೆ ಮಾನಸಿಕ ಯಾತನೆ ಮತ್ತು ಆರ್ಥಿಕ ನಷ್ಟವನ್ನುಂಟುಮಾಡಿದೆ. ಮುಂಬೈಗೆ ತಡವಾಗಿ ಆಗಮಿಸಿದ ಕಾರಣ ತಮ್ಮ ಆನ್‌ಲೈನ್ ಪಿಎಚ್‌ಡಿ ಪರೀಕ್ಷೆಯನ್ನು ಸಹ ತಪ್ಪಿಸಿಕೊಂಡರು ಎಂದು ದೂರುದಾರರು ಹೇಳಿದ್ದಾರೆ.
ದೂರುದಾರರು 14,577 ರೂ.ಗಳ ಶುಲ್ಕದ ಮೊತ್ತವನ್ನು ಮರುಪಾವತಿಸುವಂತೆ ಮತ್ತು ಮಾನಸಿಕ ಯಾತನೆಗೆ 2 ಲಕ್ಷ ರೂ.ಗಳ ಪರಿಹಾರವನ್ನು, ಮೊಕದ್ದಮೆಯ ವೆಚ್ಚವಾಗಿ 25,000 ರೂ.ಗಳನ್ನು ಕೋರಿದ್ದರು. ಆದರೆ ಟಿಕೆಟ್ ಮೊತ್ತ ಮರುಪಾವತಿ ಮಾಡಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
“ವಿಮಾನಯಾನ ಸಂಸ್ಥೆ ತನ್ನಿಂದ ತಪ್ಪಾದ ಬಳಿಕ ಮರುಪಾವತಿ ಮಾಡಿದೆ. ಆದರೆ ದೂರುದಾರರಿಗೆ ತಪ್ಪು ಟಿಕೆಟ್ ನೀಡಿದ ನಿರ್ಲಕ್ಷ್ಯದ ಕೃತ್ಯದಿಂದ ವಿಮಾನಯಾನ ಸಂಸ್ಥೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದೂರುದಾರರು ಹೇಳಿದ ಮಾನಸಿಕ ಯಾತನೆಗೆ ಪರಿಹಾರವನ್ನು ಹಾಗೂ ಕಾನೂನು ವೆಚ್ಚಗಳನ್ನು ಪಡೆಯಲು ಅರ್ಹರು” ಎಂದು ಆಯೋಗ ಹೇಳಿದೆ.
ಆದ್ದರಿಂದ ಆಯೋಗವು ಪ್ರಯಾಣಿಕರಿಗೆ ಮಾನಸಿಕ ಯಾತನೆಗೆ ಪರಿಹಾರವಾಗಿ 25,000 ರೂ. ಮತ್ತು ಮೊಕದ್ದಮೆ ವೆಚ್ಚಕ್ಕಾಗಿ 5,000 ರೂ. ಪಾವತಿಸಲು ವಿಮಾನಯಾನ ಸಂಸ್ಥೆಗೆ ನಿರ್ದೇಶಿಸಿತು.
