ಆಂಧ್ರ ಪ್ರದೇಶದ ಶ್ರೀ ಸತ್ಯ ಜಿಲ್ಲೆಯಲ್ಲಿ 15 ವರ್ಷದ ದಲಿತ ಬಾಲಕಿಯ ಮೇಲೆ ಎರಡು ವರ್ಷಗಳ ಕಾಲ ನಿರಂತರ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದಕ್ಕೆ ಸಂಬಂಧಿಸಿದಂತೆ 13 ಮಂದಿ ಕಾಮುಕರನ್ನು ಬಂಧಿಸಲಾಗಿದೆ.
ಬಾಲಕಿ ಎಂಟು ತಿಂಗಳ ಗರ್ಭಿಣಿಯಾದ ಬಳಿಕವೇ ಈ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿ ಜೂನ್ 9 ರಂದು ದೂರು ನೀಡಿದ್ದು, ಸದ್ಯ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಬಿಎನ್‌ಎಸ್ ಸೇರಿದಂತೆ ಹಲವು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನು ಓದಿದ್ದೀರಾ? ದಲಿತ ಬಾಲಕಿ ಮೇಲೆ 14 ಜನರಿಂದ 2 ವರ್ಷ ನಿರಂತರ ಅತ್ಯಾಚಾರ: ಎಂಟು ತಿಂಗಳ ಗರ್ಭಿಣಿಯಾದಾಗ ಪ್ರಕರಣ ಬೆಳಕಿಗೆ
ಪೊಲೀಸರ ಪ್ರಕಾರ, ಅಚಂಪಲ್ಲಿ ವರ್ಧನ್ (21), ತಲಾರಿ ಮುರಳಿ (25), ಬಡಗೋರ್ಲ ನಂದವರ್ಧನ್ ರಾಜ್ (23), ಅರೆಂಚೆರು ನಾಗರಾಜು (51), ಬೋಯ ಸಂಜೀವ್ (40) ಮತ್ತು ಬುಡಿದ ರಾಜಣ್ಣ (49) ಎಂಬ ಆರೋಪಿಗಳನ್ನು ಜೂನ್ 9ರಂದು ಬಂಧಿಸಲಾಗಿದೆ. ಜೂನ್ 10ರಂದು ಇತರ ಏಳು ಮಂದಿಯನ್ನು ಬಂಧಿಸಲಾಗಿದೆ. ಹಲವು ಪ್ರಮುಖ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಏನಿದು ಪ್ರಕರಣ?
ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಅದರ ವಿಡಿಯೋವನ್ನು ಇಟ್ಟುಕೊಂಡು ನಿರಂತರ ಎರಡು ವರ್ಷಗಳ ಕಾಲ ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಲಾಗಿದೆ. ಬಾಲಕಿ ಎಂಟು ತಿಂಗಳ ಗರ್ಭಿಣಿಯಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಸ್ತುತ ಅನಂತಪುರ ಜಿಲ್ಲೆಯ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸದ್ಯ ಬಾಲಕಿಯು ಗರ್ಭಪಾತ ಮಾಡಲಾಗದ ಸ್ಥಿತಿಯಲ್ಲಿದ್ದಾಳೆ. ಹೆರಿಗೆಯ ಬಳಿಕ ಬಾಲಕಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಕಾನೂನು ಕ್ರಮಗಳಿಗೆ ಅಗತ್ಯವಾದ ಕಾರಣ ಮಗುವಿನ ಡಿಎನ್‌ಎ ಪರೀಕ್ಷೆಗೆ ಅನುಮತಿ ಕೋರಲಾಗಿದೆ.
ಇದನ್ನು ಓದಿದ್ದೀರಾ? ಕೋಲಾರ | ದಲಿತ ಬಾಲಕಿ ಮೇಲೆ ಅತ್ಯಾಚಾರ; ಐವರು ಕಾಮುಕರ ಬಂಧನ
ಬಾಲಕಿ ಎಂಟು ತಿಂಗಳ ಗರ್ಭಿಣಿಯಾಗಿದ್ದರೂ ಯಾವುದೇ ಸ್ಥಳೀಯರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿಲ್ಲ. ಪ್ರಕರಣವನ್ನು ಮುಚ್ಚಿಹಾಕಲು ಕೆಲವು ಗ್ರಾಮಸ್ಥರು ಬಾಲಕಿಯ ಮೇಲೆ ಆರೋಪಿಗಳಲ್ಲಿ ಒಬ್ಬನನ್ನು ಮದುವೆಯಾಗುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.
ಸದ್ಯ ಈ ಪ್ರಕರಣವು ದೇಶದಲ್ಲಿ ಹೆಣ್ಣುಮಕ್ಕಳ ರಕ್ಷಣೆ ಬಗ್ಗೆ ಅದರಲ್ಲೂ ಮುಖ್ಯವಾಗಿ ದಲಿತ ಬಾಲಕಿಯರ ಸುರಕ್ಷತೆಯ ಬಗ್ಗೆ ಪ್ರಶ್ನೆ ಎತ್ತಿದೆ. ಸ್ಥಳೀಯರಿಗೆ ತಿಳಿದಿದ್ದರೂ ಪೊಲೀಸರಿಗೆ ಮಾಹಿತಿ ನೀಡದಿರುವುದರಿಂದ ಈ ಕೃತ್ಯದ ಹಿಂದೆ ಬಲಾಢ್ಯರ ಕೈ ಇರುವ ಅನುಮಾನ ಹುಟ್ಟುಹಾಕಿದೆ.
