ಇರಾನ್‌ನ ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿದ ನಂತರ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿಕೊಂಡಿರುವ ನರೆಂದ್ರ ಮೋದಿ ” ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರಿಗೆ ಕರೆ ಮಾಡಿದ್ದು, ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಾವಿಬ್ಬರು ವಿವರವಾಗಿ ಚರ್ಚಿಸಿದ್ದೇವೆ. ದಾಳಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದೇವೆ. ತಕ್ಷಣವೇ ಉದ್ವಿಗ್ನತೆಯನ್ನು ಕಡಿಮೆ ಮಾಡಲು, ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಮುಂದುವರಿಸಲು ನಮ್ಮ ಕರೆಯನ್ನು ಪುನರುಚ್ಚರಿಸಿದ್ದೇವೆ ಮತ್ತು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಶೀಘ್ರ ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.
ಇರಾನ್‌ನ ಪರಮಾಣು ನೆಲೆಗಳಾದ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ಕಳೆದ ರಾತ್ರಿ ಮೂರು ಪ್ರಮುಖ ಇರಾನಿನ ಪರಮಾಣು ತಾಣಗಳಾದ ಫೋರ್ಡೊ, ನಟಾಂಜ್ ಮತ್ತು ಇಸ್ಫಹಾನ್ ಅನ್ನು ಗುರಿಯಾಗಿಸಿಕೊಂಡ ಅಮೆರಿಕ ಮಿಲಿಟರಿ ಕಾರ್ಯಾಚರಣೆ ನಡೆಸಿತ್ತು.
ಅಮೆರಿಕಕ್ಕೆ ಇರಾನ್ ಎಚ್ಚರಿಕೆ
ತಮ್ಮ ದೇಶದ ಪರಮಾಣು ನೆಲೆಗಳ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯನ್ನು ಇರಾನ್ ಖಂಡಿಸಿದ್ದು, ಈ ಕ್ರಿಮಿನಲ್ ವರ್ತನೆಗೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಇರಾನ್‌ನ ವಿದೇಶಾಂಗ ಸಚಿವ ಸಯೀದ್ ಅಬ್ಬಾಸ್ ಅರಘ್ಚಿ, ಇದು ಅಂತಾರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಪರಮಾಣು ಪ್ರಸರಣ ನಿಷೇಧ ಒಪ್ಪಂದದ (ಎನ್‌ಪಿಟಿ) ಗಂಭೀರ ಉಲ್ಲಂಘನೆಯಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾದ ಅಮೆರಿಕವು ಶಾಂತಿಯುತ ಪರಮಾಣು ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು ಕ್ರಿಮಿನಲ್ ನಡವಳಿಕೆಯನ್ನು ಎಸಗಿದೆ ಎಂದು ಅರಘ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿ.ಆರ್ ಪಾಟೀಲ್ ಆರೋಪಗಳೂ, ಸರ್ಕಾರದ ನೈತಿಕತೆಯೂ
“ಇಂದು ಮುಂಜಾನೆಯ ಘಟನೆಗಳು ಅತಿರೇಕವಾದವು. ಇದು ಗಂಭೀರ ಪರಿಣಾಮಗಳನ್ನು ಬೀರುತ್ತದೆ. ವಿಶ್ವಸಂಸ್ಥೆಯ ಪ್ರತಿಯೊಬ್ಬ ಸದಸ್ಯರು ಈ ಅತ್ಯಂತ ಅಪಾಯಕಾರಿ, ಕಾನೂನುಬಾಹಿರ ಮತ್ತು ಕ್ರಿಮಿನಲ್ ನಡವಳಿಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಅರಘ್ಚಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇಸ್ರೇಲ್ ಮೇಲೆ ಇರಾನ್ ದಾಳಿ
ಅಮೆರಿಕ ತನ್ನ ದೇಶದ ಪರಮಾಣು ನೆಲಗಳ ಮೇಲೆ ದಾಳಿ ನಡೆಸಿದ ನಂತರ ಇರಾನ್ ಇಸ್ರೇಲ್‌ನ ಉತ್ತರ ಹಾಗೂ ಕೇಂದ್ರ ಭಾಗದ ಕನಿಷ್ಠ 10 ನಗರಗಳ ಮೇಲೆ ಕ್ಷಿಪಣಿಗಳ ದಾಳಿ ನಡೆಸಿದೆ. ಘಟನೆಯಿಂದ ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಇಸ್ರೇಲ್‌ನ ಹೈಫಾ, ನೆಸ್ ಜಿಯೋನಾ, ರಿಶೋನ್ ಲೆಜಿಯೋನ್ ಹಾಗೂ ಟೆಲ್ ಅವೀವ್ ನಗರಗಳ ಮೇಲೆ ಕ್ಷಿಪಣಿಗಳಿಂದ ದಾಳಿ ನಡೆಸಲಾಗಿದೆ. ಇಸ್ರೇಲ್‌ನಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದವು. ಅನೇಕ ಸ್ಥಳಗಳಲ್ಲಿ ಸೈರನ್‌ಗಳು ಮೊಳಗುತ್ತಿವೆ. ಇರಾನ್‌ನಿಂದ ಉಡಾಯಿಸಲಾದ ಬ್ಯಾಲಿಸ್ಟಿಕ್ ಕ್ಷಿಪಣಿ ಹೈಫಾ ನಗರದ ಮೇಲೆ ದಾಳಿ ಮಾಡಿತು. ಇರಾನ್‌ನಿಂದ ಸುಮಾರು 20-30 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇರಾನ್‌ನಿಂದ ಉಡಾಯಿಸಲಾದ ಕ್ಷಿಪಣಿಗಳನ್ನು ಗುರುತಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಬೆದರಿಕೆಯನ್ನು ತಡೆಯಲು ನಮ್ಮ ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರು ಸಂರಕ್ಷಿತ ಪ್ರದೇಶಗಳಿಗೆ ತೆರಳಿ ಮುಂದಿನ ಆದೇಶದವರೆಗೆ ಅಲ್ಲಿಯೇ ಇರಬೇಕೆಂದು ಸೇನೆ ಎಚ್ಚರಿಕೆ ನೀಡಿದೆ.