ಕೊಡಗು ಜಿಲ್ಲೆ, ಮಡಿಕೇರಿ ನಗರದ ಗೌಡ ಸಮಾಜದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಆಯುಷ್ ಇಲಾಖೆ ಸಹಯೋಗದೊಂದಿಗೆ ‘ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ’ ಘೋಷವಾಕ್ಯದೊಂದಿಗೆ ನಡೆದ 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಡಾ. ಮಂತರ್ ಗೌಡ ‘ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದೆ ‘ ಎಂದರು.
” ಭಾರತೀಯ ಮೂಲದ ಯೋಗ ವಿಶ್ವದಾದ್ಯಂತ ಪಸರಿಸಿದೆ. ಪ್ರತಿ ನಿತ್ಯ ಯೋಗ ಮಾಡುವುದರಿಂದ ಆರೋಗ್ಯ, ಆಯಸ್ಸು ಹೆಚ್ಚಾಗಲಿದೆ. ಇದರಿಂದಾಗಿ ಕ್ರಿಯಾಶೀಲತೆ ಮತ್ತು ಚಲನಶೀಲತೆಯಿಂದ ಬದುಕು ನಡೆಸಲು ಸಹಕಾರಿಯಾಗಲಿದೆ. ಜೊತೆಗೆ ಮಾನಸಿಕವಾಗಿಯೂ ಸಹ ಸದೃಢರಾಗಿರಬಹುದು. ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ, ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ದಿನನಿತ್ಯ ಅರ್ಧಗಂಟೆಯಾದರೂ ವ್ಯಾಯಾಮ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ” ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಶೈಲಜಾ ಮಾತನಾಡಿ ಯೋಗ, ವ್ಯಾಯಾಮ ಮಾಡುವುದರಿಂದ ಪ್ರತಿನಿತ್ಯ ಚಟುವಟಿಕೆಯಿಂದ ಇರಲು ಸಾಧ್ಯ. ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು ಹೀಗೆ ಎಲ್ಲರೂ ಜಿಲ್ಲಾಡಳಿತದ ಜೊತೆ ಕೈಜೋಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ ಎಂದು ತಿಳಿಸಿದರು.
ಯೋಗ ಶಿಕ್ಷಕ ಮಹೇಶ್ ಕುಮಾರ್ ಮಾತನಾಡಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಹಲವು ದಿನಗಳಿಂದ ಯೋಗ ಪೂರ್ವಾಭ್ಯಾಸ ನಡೆಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಕಬಿನಿ ಜಲಾಶಯದ ಭೂಮಿ ಅಡವಿಟ್ಟ ಪ್ರಕರಣ; ಸಮನ್ಸ್ ಜಾರಿ
ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ನಗರಸಭೆ ಸದಸ್ಯರು ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಜಿಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ರಾಮಚಂದ್ರ ಕಾಮತ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.