ಯೋಗವು ಬಹಳ ಹಳೆಯ ಅಭ್ಯಾಸವಾಗಿದ್ದು, ಪ್ರಾಚೀನ ಕಾಲದಿಂದಲೂ ದೇಶದಲ್ಲಿ ಅನುಸರಿಸುತ್ತಾ ಬರಲಾಗಿದೆ.
ʼಯೋಗʼವು ಭಾರತ ವಿಶ್ವಕ್ಕೆ ಕೊಟ್ಟ ಅಮೂಲ್ಯ ಸಂಪತ್ತಾಗಿದೆ ಎಂದು ನಿವೃತ್ತ ಪ್ರಾಚಾರ್ಯ ವಿದ್ಯಾನಂದ ಗುರುಕುಲದ ಕೆ ಆರ್ ಕಲಕರ್ಣಿ ಹೇಳಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ ತುಂಗಭದ್ರಾ ವಲಯ, ಕೊಪ್ಪಳ ಜಿಲ್ಲೆಯ ಕುಕನೂರ ಶಾಖೆ ಹಾಗೂ ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ಇವರ ಸಹಯೋಗದಲ್ಲಿ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.
“2015ರ ಜೂನ್ 21ರಂದು ಮೊದಲ ಬಾರಿಗೆ ಜಾರಿಗೆ ಬಂದಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವಾದ್ಯಂತ ಪ್ರತಿವರ್ಷ ಆಚರಿಸಲಾಗುತ್ತದೆ. ಯೋಗ ಮಾಡಲು ಯಾವುದೇ ಭೌತಿಕ ಸಂಪತ್ತು ಬೇಕಾಗಿಲ್ಲ, ಹಣ ಇದ್ದವರಷ್ಟೇ ಇದನ್ನು ಮಾಡಲು ಸಾಧ್ಯ, ಬಡವರು ಯೋಗ ಮಾಡಲು ಸಾಧ್ಯವಿಲ್ಲ ಎಂಬ ಯಾವುದೇ ನಿಬಂಧನೆಗಳು ಇಲ್ಲ. ಎಲ್ಲರೂ ಉಚಿತವಾಗಿ ಯೋಗ ಮಾಡಬಹುದು” ಎಮದರು.

ಮಕ್ಕಳ ತಜ್ಞ ಡಾ. ಮಂಜುನಾಥ ವಕ್ಕಳದ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ಮತ್ತು ದೈಹಿಕ ಸೌಂದರ್ಯಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚಿನ ಕಲೆಯಾಗಿದೆ. ಭಾರತವು ಜಗತ್ತಿಗೆ ನೀಡಿದ ಒಂದು ದೊಡ್ಡ ಕೊಡುಗೆಯಾಗಿದೆ. ಮನುಷ್ಯನಿಗೆ ಬಾಹ್ಯ ಸೌಂದರ್ಯ ಎಷ್ಟು ಮುಖ್ಯವೊ, ಆಂತರಿಕ ಸೌಂದರ್ಯವೂ ಅಷ್ಟೇ ಮುಖ್ಯವಾಗಿರುತ್ತದೆ. ಇವೆರಡನ್ನು ಚೆನ್ನಾಗಿ ಇಟ್ಟುಕೊಳ್ಳುವಲ್ಲಿ ಯೋಗ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ನಿತ್ಯ ಯೋಗ ಮಾಡುವುದರಿಂದ ಉತ್ತಮ ಆರೋಗ್ಯಕರ ಜೀವನ ನಡೆಸಬಹುದಾಗಿದೆ” ಎಂದರು.
ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಸಂಚಾಲಕ ಚಿದಾನಂದ ಪತ್ತಾರ ಮಾತನಾಡಿ, “ಈಗಾಗಲೇ ಪ್ರತಿಯೊಬ್ಬರೂ ಮಾನಸಿಕ ಮತ್ತು ಆಧ್ಯಾತ್ಮಿಕ ಅನಾರೋಗ್ಯಗಳಿಂದ ಬಳಲುವಂತಹ ಪರಿಸ್ಥಿತಿ ಒದಗಿ ಬಂದಿದೆ. ಪ್ರತಿವರ್ಷ ಧ್ಯಾನ, ಸಭೆ, ಚರ್ಚೆ, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಸಿಸುವುದರ ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ. ಪ್ರತಿನಿತ್ಯವು ಯೋಗ ಮಾಡುವುದರೊಂದಿಗೆ ಆರೋಗ್ಯ ವೃದ್ಧಿ ಹೊಂದೋಣ” ಎಂದು ಹೇಳಿದರು.

ಇದನ್ನೂ ಓದಿ: ಕೊಪ್ಪಳ | ಸಾಲಬಾಧೆ : ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ
ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಶವಂತ ಜೈನ್ ಮಾತನಾಡಿ, “ಯೋಗದಿಂದ ಮನಸ್ಸು ಶಾಂತಗೊಳ್ಳುತ್ತದೆ ಹಾಗೂ ದೈನಂದಿನ ಜೀವನದಲ್ಲಿ ಅರಿವು ಮತ್ತು ಜವಾಬ್ದಾರಿಯ ಉನ್ನತ ಪ್ರಜ್ಞೆಯನ್ನು ಬೆಳೆಸುತ್ತದೆ. ಈ ಸಾವಧಾನತೆಯು ಆರೋಗ್ಯಕರ ಮತ್ತು ಹೆಚ್ಚು ಸುಸ್ಥಿರ ಜೀವನ ಶೈಲಿಯನ್ನು ಆಯ್ಕೆ ಮಾಡಲು ನಮಗೆ ಅನುವು ಮಾಡಿಕೊಡುತ್ತದೆ. ಯೋಗ ಪ್ರತಿಯೊಬ್ಬರಿಗೂ ಅವಶ್ಯ. ಪ್ರತಿಯೊಬ್ಬರು ಯೋಗದೊಂದಿಗೆ ಆರೋಗ್ಯ ಕಾಪಾಡಿಕೊಳ್ಳಬಹುದು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗವಿಸಿದ್ದಪ್ಪ ಕರಮಡಿ, ಡಾ. ಜಂಬಣ್ಣ ಅಂಗಡಿ, ಶಿವಯ್ಯ ಹಿರೇಮಠ,ಡಾ. ಶಕುಂತಲಾ ಅಂಗಡಿ, ಶಾರದ ಆರ್ಯರ, ವಂದನ ಹಿರೇಮಠ, ಗಿರಿಜಾ, ಲಕ್ಷ್ಮಣ ಕಾಳೆ, ಕಾಜಾಸಾಬ್ ಶಿಕ್ಷಕರು, ಸಿದ್ದು ಬಣ್ಣದಬಾವಿ, ಪ್ರಭುರಾಜ್ ವಕ್ಕಳದ, ಭಾಗ್ಯ ಹಿರೇಮಠ, ಯಲ್ಲಪ್ಪ ಹಳ್ಳದ, ಉಮಾ ಗುಡ್ಲಾನೂರು, ಕಾಳಮ್ಮ ಕಳ್ಳೆಮಠ, ಜಗದೀಶ್ ಜವಳಿ, ವೀರೇಶ್ ಪವಾಡಶೆಟ್ಟಿ, ಸುಮಾ ಓಜನಹಳ್ಳಿ, ಅಶೋಕ್ ವಕ್ಕಳದ, ಲಕ್ಷ್ಮಣ ಕಂಬಳಿ, ಮಂಜುನಾಥ ಗದುಗಿನ, ತಿಪ್ಪಣ್ಣ, ಹಾಗೂ ಯೋಗ ಶಿಬಿರಾರ್ಥಿಗಳು ಮತ್ತು ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇತರರಿದ್ದರು.