ಸರ್ಕಾರಿ ಶಾಲೆಯಲ್ಲಿ 24 ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಾಲಾ ಶಿಕ್ಷಕನನ್ನು ಬಂಧಿಸಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಲೈಂಗಿಕ ಕಿರುಕುಳ ಸಮಿತಿ ಸಭೆಯಲ್ಲಿ ವಿದ್ಯಾರ್ಥಿನಿಯರು ಗಣಿತ ಶಿಕ್ಷಕನ ವಿರುದ್ಧ ದೂರು ನೀಡಿದ ಬಳಿಕ, ಪ್ರಕರಣ ಬೆಳಕಿಗೆ ಬಂದಿದೆ.
ಹಿಮಾಚಲದ ಸಿರ್ಮೌರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಶಾಲೆಯಲ್ಲಿ ‘ಶಿಕ್ಷಾ ಸಂವಾದ’ ಕಾರ್ಯಕ್ರಮದಲ್ಲಿ 8ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರು ತಾವು ಶಿಕ್ಷಕನಿಂದ ಅನುಭವಿಸಿದ ಕಿರುಕುಳದ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. ಗಣಿತ ಶಿಕ್ಷಕ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಅನುಚಿತವಾಗಿ ಮುಟ್ಟಿದ್ದಾರೆ ಎಂದು ಲಿಖಿತ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ಬಳಿಕ, ಪೊಲೀಸರು ಶಾಲೆಯ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ನಡುವೆ, ಬಾಲಕಿಯರ ದೂರು ದಾಖಲಿಸಿ, ಶಾಲಾ ಆಡಳಿತ ಮಂಡಳಿಯು ಶಿಕ್ಷಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಆರೋಪಿ ಶಿಕ್ಷಕನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶಿಸಿದೆ.
ಪ್ರಕರಣವು ‘ಗಂಭೀರ ಮತ್ತು ಸ್ಮೂಕ್ಷ್ಮ ವಿಚಾರ ಎಂದಿರುವ ಶಾಲಾ ಶಿಕ್ಷಣ ನಿರ್ದೇಶಕರು, ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಸುವಂತೆ ಸಿರ್ಮೌರ್ ಜಿಲ್ಲೆಯ ಪ್ರಾಥಮಿಕ ಶಿಕ್ಷಣ ಉಪ ನಿರ್ದೇಶಕರಿಗೆ ಸೂಚಿಸಿದ್ದಾರೆ. ಶಾಲೆಗೆ ವೈಯಕ್ತಿಕವಾಗಿ ಭೇಟಿ ನೀಡಿ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇತರ ಸಿಬ್ಬಂದಿಯ ಹೇಳಿಕೆಯನ್ನು ದಾಖಲಿಸಿಕೊಂಡು, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ.