ಜುಲೈ 15ರವರೆಗೆ 19 ಮಾರ್ಗಗಳಿಗೆ ವಿಮಾನಗಳ ಹಾರಾಟವನ್ನು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಕಡಿತಗೊಳಿಸಿದೆ. 118 ವಾರದ ವಿಮಾನಗಳನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವುದಾಗಿ ಮತ್ತು ಮೂರು ಮಾರ್ಗಗಳಲ್ಲಿ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಏರ್ ಇಂಡಿಯಾ ಹೇಳಿದೆ.
ಇತ್ತೀಚೆಗೆ ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ವಿಮಾನವು ಗುಜರಾತ್‌ನ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾಗಿದೆ. ಈ ವಿಮಾನ ದುರಂತದಲ್ಲಿ 260ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ದುರ್ಘಟನೆ ಬಳಿಕ ಬೋಯಿಂಗ್ 787 ಸೇರಿದಂತೆ ಎಲ್ಲಾ ವಿಮಾನಗಳ ತಪಾಸಣೆ ಮಾಡಲಾಗುತ್ತಿದೆ.
ಇದನ್ನು ಓದಿದ್ದೀರಾ? ವಿಮಾನ ದುರಂತ | ಭವಿಷ್ಯದಲ್ಲಿ ಸಂಭವಿಸುವ ಅನಾಹುತ ತಡೆಗೆ ಉನ್ನತ ಮಟ್ಟದ ಸಮಿತಿ ರಚನೆ
ಈ ಬೆಳವಣಿಗೆ ನಡುವೆ ಅಂತಾರಾಷ್ಟ್ರೀಯ ವಿಮಾನಗಳನ್ನು ತಾತ್ಕಾಲಿಕವಾಗಿ ಶೇಕಡ 15ರಷ್ಟು ಕಡಿತಗೊಳಿಸುವುದಾಗಿ ಏರ್ ಇಂಡಿಯಾ ಹೇಳಿತ್ತು. ಇದೀಗ 19 ಮಾರ್ಗಗಳಿಗೆ ವಿಮಾನಗಳ ಹಾರಾಟ ಕಡಿತಗೊಳಿಸುವುದಾಗಿ ಹೇಳಿದೆ.
“3 ಮಾರ್ಗಗಳಲ್ಲಿ ಏರ್ ಇಂಡಿಯಾದ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಮತ್ತು 19 ಮಾರ್ಗಗಳಲ್ಲಿ ಆವರ್ತನವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಬದಲಾವಣೆಗಳು ಕನಿಷ್ಠ ಜುಲೈ 15, 2025ರವರೆಗೆ ಜಾರಿಯಲ್ಲಿರುತ್ತವೆ” ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಬೆಂಗಳೂರು-ಸಿಂಗಾಪುರ, ಪುಣೆ-ಸಿಂಗಾಪುರ ಮತ್ತು ಮುಂಬೈ-ಬಾಗ್ಡೋಗ್ರ (AI551/552) ಮೂರು ಮಾರ್ಗಗಳಲ್ಲಿ ವಾರಕ್ಕೆ ಏಳು ವಿಮಾನಗಳನ್ನು ಕನಿಷ್ಠ ಜುಲೈ 15 ರವರೆಗೆ ಸ್ಥಗಿತಗೊಳಿಸಲಾಗುವುದು. ದೆಹಲಿ-ಬೆಂಗಳೂರು ಮತ್ತು ದೆಹಲಿ-ಮುಂಬೈ ಸೇರಿದಂತೆ ವಿವಿಧ ಮಾರ್ಗಗಳಲ್ಲಿನ ವಿಮಾನಗಳನ್ನು ಕಡಿಮೆ ಮಾಡಲಾಗುವುದು.
ಏರ್ ಇಂಡಿಯಾದ ಕಾರ್ಯಾಚರಣೆಯ ಸ್ಥಿರತೆಯನ್ನು ಬಲಪಡಿಸುವ ಮತ್ತು ಪ್ರಯಾಣಿಕರಿಗೆ ಕೊನೆಯ ಕ್ಷಣದಲ್ಲಿ ಅನಾನುಕೂಲತೆ ಉಂಟಾಗುವುದನ್ನು ಕಡಿಮೆ ಮಾಡಲು ಈ ನಿರ್ಧಾರ ಮಾಡಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.
