ಪ್ರೀತಿಯ ಕುಸುಮಾ ಶಾನಭಾಗ ಅಮ್ಮ ನಮ್ಮನ್ನು ಅಗಲಿದ್ದಾರೆ. ಇಷ್ಟು ದಿನಗಳ ಕಾಲ ನಮ್ಮನ್ನು ಮಕ್ಕಳ ರೀತಿ ಪೊರೆದಿದ್ದ ಅವರು ಇಂದು ನಮಗೆ ಹೇಳದೇ ಎದ್ದು ಹೋಗಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿದ್ದ ಅವರನ್ನು ಅದೇ ಕ್ಯಾನ್ಸರ್ ಕೊನೆಗೂ ಕರೆದುಕೊಂಡಿದೆ.. ಹೋಗಿ ಬನ್ನಿ ಅಮ್ಮ…
2017ರಲ್ಲಿ ನಾವು ಉದ್ಯೋಗಕ್ಕಾಗಿ ಯುವಜನರು ಹೋರಾಟ ಆರಂಭಿಸಿದಾಗ ಅಮ್ಮನ ಪರಿಚಯವಾಯ್ತು. ಅಲ್ಲಿಂದ ಅವರು ತಮ್ಮ ಸರಳ ವ್ಯಕ್ತಿತ್ವದ ಮೂಲಕ ನಮ್ಮನ್ನು ಆವರಿಸಿಕೊಂಡರು. ಪ್ರಜಾವಾಣಿ ಪತ್ರಿಕೆಯಲ್ಲಿ ನಮ್ಮ ಹೋರಾಟದ ವರದಿ, ನಮ್ಮ ಸಂದರ್ಶನ ಬರುವಂತೆ ಅಮ್ಮ ಶ್ರಮ ವಹಿಸಿದ್ದರು. ಅದೆಷ್ಟು ಬಾರಿ ನಮ್ಮನ್ನು ಮನೆಗೆ ಕರೆದು ಪ್ರೀತಿಯಿಂದ ನೋಡಿಕೊಂಡರು ಎಂಬುದಕ್ಕೆ ಲೆಕ್ಕವಿಲ್ಲ. ತಾನು ಮಾಂಸ ತಿನ್ನದಿದ್ದರೂ ನಮಗೆಲ್ಲ ನೀವು ಮಾಡಿಕೊಳ್ಳಿ ಎಂದು ಪ್ರೀತಿಯಿಂದ ಹೇಳುತ್ತಿದ್ದರು. ಅವರ ಜೀವದ ಭಾಗವೆಂಬಂತೆ ಇದ್ದ ಪ್ರೀತಿಯ ನಾಯಿ ‘ಪುಟ್ಟು’ಗೆ ಮೊಟ್ಟೆ ಎಲ್ಲಾ ಕೊಡುತ್ತಿದ್ದರು..
ಇದನ್ನು ಓದಿದ್ದೀರಾ? ಹಿರಿಯ ಪತ್ರಕರ್ತೆ ಕುಸುಮಾ ಶಾನಭಾಗ ಇನ್ನಿಲ್ಲ
ನಂದಿನಿ ಲೇ ಔಟ್‌ನಲ್ಲಿದ್ದ ಅವರ ಮನೆಯಿಂದ ಹಿಡಿದು, ಹೆಬ್ಬಾಳ ಆನಂತರ ಕೆಂಗೇರಿ ಉಪನಗರದವರೆಗೂ ಅಮ್ಮ ಮತ್ತು ನಮ್ಮ ಒಡನಾಟ ಮರೆಯಲಾಗದು. ಪುಟ್ಟುವಿನ ಆಸ್ಪತ್ರೆಗೆ ತೋರಿಸಲು ಅಮ್ಮ ತೋರಿದ ಸಂಯಮ ಹೇಳತೀರದು. ಊರಿಗೆ ಹೋಗಬೇಕಾದರೆ ಅದನ್ನು ನೋಡಿಕೊಳ್ಳಲು ಬಹಳ ಕಾಳಜಿ ವಹಿಸಿ, ಹೆಚ್ಚು ಊರಿಗೆ ಹೋಗುತ್ತಿರಲಿಲ್ಲ. ಆನಂತರ ಪುಟ್ಟು ತೀರಿಕೊಂಡಾಗ ಗೌರವಯುತವಾಗಿ ಅಂತ್ಯಕ್ರಿಯೆ ನಡೆಸಿದ್ದರು. ಆದರೆ ಒಂದು ವರ್ಷದ ಹಿಂದೆ ಅದು ತೀರಿಕೊಂಡ ನಂತರ ಅಮ್ಮನಲ್ಲಿ ಬದುಕುವ ಆಸೆಯೇ ತೀರಿಹೋಯ್ತು ಎಂಬಂತೆ ಇದ್ದರು.

ಕಳೆದ ಆರು ತಿಂಗಳಿಂದ ಅಮ್ಮನ ಆರೋಗ್ಯ ಕ್ಷೀಣಿಸುತ್ತಿತ್ತು. ಊಟ ಸೇರುತ್ತಿರಲಿಲ್ಲ, ತೂಕ ಕಡಿಮೆಯಾಗುತ್ತಲೇ ಇತ್ತು. ಕಳೆದ ತಿಂಗಳು ಹೋದಾಗ ಡಾಕ್ಟರ್ ದಪ್ಪ ಆಗಲು ಹೇಳಿದ್ದಾರೆ. ಆದರೆ ಆಪರೇಷನ್ ಮಾಡಬಹುದು ಎಂದಿದ್ದಾರೆ ಎಂದು ಹೇಳಿದ್ದರು. ನಾವು ಅದೇ ಅಶಯದಲ್ಲಿದ್ದವು. ವಾರದ ಹಿಂದೆ ಫೋನ್ ಮಾಡಿದಾಗಲೂ ಅದನ್ನೇ ಕೇಳುತ್ತಿದ್ದೆವು. ಆದರೆ ಇಂದು ಅಮ್ಮ ಸಾಕು ಈ ನೋವು ಅನಿಸಿ ತೆರಳಿದ್ದಾರೆ.
ಅಮ್ಮ ನೀವು ನಮ್ಮ ಮನಸ್ಸಿನಾಳದಲ್ಲಿದ್ದೀರಿ.. ನಿಮ್ಮ ನೆನಪು ಎದೆಯಾಳದಲ್ಲಿರುತ್ತದೆ.. ನಿಮಗೆ ಪ್ರೀತಿಯ ವಿದಾಯಗಳು.

ಮುತ್ತುರಾಜು
ಪತ್ರಕರ್ತ, ಲೇಖಕ