ಎದೆಯ ಹಣತೆ ಕೃತಿ ಮುಖಾಂತರ ಕನ್ನಡದ ಅಸ್ಮಿತೆಯನ್ನು ಜಾಗತಿಕ ಮಟ್ಟದಲ್ಲಿ ನೆಲೆಯೂರುವಂತೆ ಮಾಡಿದ ಶ್ರೇಯಸ್ಸು ಸಾಹಿತಿ ಬಾನು ಮುಸ್ತಾಕ್ ಅವರಿಗೆ ಸಲ್ಲುತ್ತದೆ ಎಂದು ಪ್ರಾಧ್ಯಾಪಕ ಡಾ.ಲಕ್ಷ್ಮಿಕಾಂತ ಸಿ ಪಂಚಾಳ ಅಭಿಪ್ರಾಯಪಟ್ಟರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಬೀದರ ಹಾಗೂ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಬೀದರ್ ನಗರದ ಕರುನಾಡು ಸಾಂಸ್ಕೃತಿಕ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರ ʼಎದೆಯ ಹಣತೆʼ ಕೃತಿ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ʼಕನ್ನಡದ ಪ್ರಗತಿಪರ ಚಿಂತಕಿ, ಸಾಹಿತಿ ಬಾನು ಮುಸ್ತಾಕ್ ಅವರ ʼಎದೆಯ ಹಣತೆʼ ಕೃತಿಯಲ್ಲಿ ಒಟ್ಟು ಹನ್ನೆರಡು ಕತೆಗಳಿದ್ದು, ಎಲ್ಲ ಕಥೆಗಳಲ್ಲಿ ಜೀವಪರ, ಮಾನವೀಯ ಮೌಲ್ಯಗಳ ಸತ್ವವಿದೆ. ಇದೇ ಕೃತಿಯನ್ನು ಲೇಖಕಿ ದೀಪ ಭಾಸ್ತಿ ಅವರು ಆಂಗ್ಲ ಭಾಷೆಗೆ ʼಹಾರ್ಟ್ ಲ್ಯಾಂಪ್ʼ ಎಂಬ ಹೆಸರಿನಿಂದ ಅನುವಾದಿಸಿದ್ದಾರೆʼ ಎಂದು ಹೇಳಿದರು.
ʼಈ ಕೃತಿಗೆ ಪ್ರಸಕ್ತ ಸಾಲಿನ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದ್ದು, ಇದು ಇಡೀ ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ಸಂಗತಿ. ಬಾನು ಮುಷ್ತಾಕ್ ಅವರು ತಮ್ಮ ಕಥೆಗಳಲ್ಲಿ ಮಹಿಳೆಯರ ಬದುಕು-ಬವಣೆ, ವೈಚಾರಿಕತೆ, ಮಹಿಳಾಪರ ಜಾಗೃತಿ, ಸ್ತ್ರೀ ಸಂವೇದನೆ ಸೇರಿದಂತೆ ಅನೇಕ ಸಂಗತಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆʼ ಎಂದು ವಿಶ್ಲೇಷಿಸಿದರು.
ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಕನ್ನಡ ಸಾಹಿತ್ಯವು ಶ್ರೇಷ್ಠ ಹಾಗೂ ಅನೇಕ ವರ್ಷಗಳ ಐತಿಹಾಸಿಕ ಪರಂಪರೆಯನ್ನು ಹೊಂದಿದೆ. ಕನ್ನಡದ ಸಣ್ಣ ಕಥೆಗಳಿಗೆ ಹೆಚ್ಚು ಓದುಗರಿದ್ದಾರೆ. ಸಣ್ಣ ಕಥೆಗಳು ಜನರ ಮನಸ್ಸಿಗೆ ಬಹು ಬೇಗ ಮುಟ್ಟುತ್ತವೆ. ಬೀದರನಲ್ಲಿ ಕನ್ನಡ ಮಿಶ್ರಿತ ಭಾಷೆ ಹೆಚ್ಚು ಬಳಕೆಯಲ್ಲಿದ್ದು, ಶುದ್ಧ ಭಾಷೆ ಬಳಕೆಗೆ ತರುವುದು ಅವಶ್ಯಕತೆಯಿದೆʼ ಎಂದು ನುಡಿದರು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ ಮಾತನಾಡಿ, ʼಬೀದರ ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ, ಸೂಕ್ತ ವೇದಿಕೆ ದೊರೆತರೆ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯುವ ಸಾಮರ್ಥ್ಯ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಹೊಸ ಬರಹಗಾರ, ಸಾಹಿತಿ, ಕಲಾವಿದರಿಗೆ ಸೂಕ್ತ ವೇದಿಕೆ ಒದಗಿಸುವ ಕಾರ್ಯಕ್ರಮಗಳು ಏರ್ಪಡಿಸಲಾಗುವುದುʼ ಎಂದು ತಿಳಿಸಿದರು.
ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕಿ ಡಾ. ಮಕ್ತುಂಬಿ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ, ʼಕನ್ನಡ ಸಾಹಿತ್ಯಿಕ ಕಾರ್ಯಕ್ರಮ ಯಶಸ್ವಿಗೆ ಕನ್ನಡ ಮನಸ್ಸುಗಳು ಜಾಗೃತರಾಗಬೇಕು. ಗಡಿ ಭಾಗದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉಪನ್ಯಾಸ ಸೇರಿದಂತೆ ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆʼ ಎಂದು ತಿಳಿಸಿದರು.
ಕಲಾವಿದರಾದ ಶಂಭುಲಿಂಗ ವಾಲ್ದೊಡ್ಡಿ, ಸೃಜನ್ಯ ಅತಿವಾಳೆ, ವೇದಿಕಾ ಚಿಲ್ಲರ್ಗಿ ಗಾಯನ ನಡೆಸಿಕೊಟ್ಟರು.
ಇದನ್ನೂ ಓದಿ : ಬೀದರ್ | ಐದು ಕಳವು ಪ್ರಕರಣ : ಐವರ ಬಂಧನ, ₹5.95 ಲಕ್ಷ ಮೌಲ್ಯದ 14 ಬೈಕ್ ಜಪ್ತಿ
ಕಾರ್ಯಕ್ರಮದಲ್ಲಿ ಪ್ರಮುಖರಾದ ಸಂತೋಷ ಜೋಳದಾಪಕೆ, ಜಗದೀಶ್ವರ ಬಿರಾದರ್, ನಿಜಾಮೋದ್ದೀನ್, ಓಂಕಾರ ಪಾಟೀಲ್, ಜಗದೇವಿ ಯದಲಾಪುರೆ, ಅವಿನಾಶ ಸೋನೆ, ಬಾಲಾಜಿ ಕುಂಬಾರ, ಅಶ್ವಜೀತ್ ದಂಡೀನ್ ಸೇರಿದಂತೆ ಸಾಹಿತಿಗಳು, ಕಲಾವಿದರು ಪಾಲ್ಗೊಂಡಿದ್ದರು. ದೀಲಿಪಕುಮಾರ ಮೊಘ ನಿರೂಪಿಸಿದರು. ಉಮಕಾಂತ ಮೀಸೆ ಸ್ವಾಗತಿಸಿದರು ಬಸವರಾಜ ಮೂಲಗೆ ವಂದಿಸಿದರು.