ಬೀದರ್ ತಾಲ್ಲೂಕಿನ ಮಾಳೆಗಾಂವ್ ಗ್ರಾಮದಲ್ಲಿ ಎಂಟು ವರ್ಷಗಳ ಹಿಂದೆ ಮಂಜೂರಾದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ವಂತ ಕಟ್ಟಡ ಭಾಗ್ಯ ಕಾಣದೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೂರು ಹಳೆಯ ಕೋಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
2017ರ ಏಪ್ರಿಲ್ 20ರಂದು ಬೆಂಗಳೂರಿನ ಬಸವನಗುಡಿ ಪ್ರಾಥಮಿಕ ಕೇಂದ್ರವನ್ನು ಮಳೆಗಾಂವ್ ಗ್ರಾಮಕ್ಕೆ ಸ್ಥಳಾಂತರಿಸಿ ಸರ್ಕಾರ ಆದೇಶಿಸಿತು. ಅಂದಿನಿಂದ ಆರಂಭವಾದ ಈ ಆರೋಗ್ಯ ಕೇಂದ್ರಕ್ಕೆ ಸುತ್ತಲಿನ ಅಮದಲಪಾಡ, ನಂದಗಾಂವ್, ಅಮಲಸಪುರ, ಕಾಪಲಾಪುರ(ಜೆ), ರಸಲಾಬಾದ್ ಗ್ರಾಮಗಳ ರೋಗಿಗಳು ಬರುತ್ತಾರೆ. ಆದರೆ, ಈವರೆಗೆ ಸ್ವಂತ ಕಟ್ಟಡ ಸೇರಿದಂತೆ ಅಗತ್ಯ ಸೌಕರ್ಯ ಇಲ್ಲದೆ ʼನಾಮ್ ಕೇ ವಾಸ್ತೆʼ ನಡೆಯುತ್ತಿರುವುದು ವಿಪರ್ಯಾಸವೇ ಸರಿ.

ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಮಾಳೆಗಾಂವ್ ಗ್ರಾಮದಲ್ಲಿ 5 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಇಲ್ಲಿಯ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ 40ಕ್ಕೂ ಅಧಿಕ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಆದರೆ, ಗ್ರಾಮದ ಆರೋಗ್ಯ ಕೇಂದ್ರ ಸ್ವಂತ ಕಟ್ಟಡ, ಅಂಬುಲನ್ಸ್ ವ್ಯವಸ್ಥೆ, ಕುಡಿಯುವ ನೀರು ಸೇರಿ ಅಗತ್ಯ ಸೌಲಭ್ಯ ಕೊರತೆ ಎದುರಿಸುತ್ತಿದೆ. ಇದರಿಂದ ರೋಗಿಗಳು ಗುಣಮಟ್ಟ ವೈದ್ಯಕೀಯ ಸೇವೆ ಸಿಗದೆ ಚಿಕಿತ್ಸೆಗಾಗಿ ಬೀದರ್ ನಗರದ ಆಸ್ಪತ್ರೆಗಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ.
ಸೋರುವ ಕೋಣೆ, ಬಯಲು ಶೌಚಾಲಯ !
ಚಿಕಿತ್ಸೆಗೆಂದು ಕೇಂದ್ರಕ್ಕೆ ಬರುವ ಗರ್ಭಿಣಿಯರಿಗೆ ಇಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ಕುಳಿತುಕೊಳ್ಳಲು ಜಾಗ ಕೊರತೆ ಜತೆಗೆ ಚಿಕಿತ್ಸೆಗೆ ಬೇಕಾದ ಅಗತ್ಯ ವ್ಯವಸ್ಥೆಯೂ ಇಲ್ಲ. ಕೇಂದ್ರದಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಕ್ಕೆ ಮೂತ್ರ ಪರೀಕ್ಷೆಗಾಗಿ ಬಂದವರು ಬಯಲು ಶೌಚಾಲಯವೇ ಗತಿಯಾಗಿದೆ.
ಕೇಂದ್ರವು ಬೆಳಿಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ರಾತ್ರಿ ಸಮಯದಲ್ಲಿ ತುರ್ತು ಚಿಕಿತ್ಸೆಗಾಗಿ ಬೇರೆಡೆ ಹೋಗಬೇಕಾಗಿದೆ. ಕಟ್ಟಡ ಸುತ್ತಲಿನ ಹೊರಾಂಗಣ ಸಾರ್ವಜನಿಕರ ಮಲ ವಿಸರ್ಜನೆಗೆ ಬಳಕೆಯಾಗುತ್ತಿದೆ, ಇಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು, ಕೇಂದ್ರದ ಆವರಣ ಅನ್ಯ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತದೆ.

ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರು ವೈದ್ಯ, ಫಾರ್ಮಾಸಿಸ್ಟ್, ಮೇಡಿಕಲ್ ಸಹಾಯಕ ಹಾಗೂ ಗ್ರೂಪ್ ಡಿ ನೌಕರ ಸೇರಿ ಒಟ್ಟು ನಾಲ್ಕು ಜನ ಸಿಬ್ಬಂದಿ ಇದ್ದಾರೆ. ಕಟ್ಟಡದ ಮೇಲ್ಛಾವಣಿ ಅಲ್ಲಲ್ಲಿ ಕಿತ್ತು ಹೋಗಿದ್ದು, ಕಬ್ಬಿಣದ ಸರಳುಗಳು ಹೊರ ತೇಲಿವೆ. ಸ್ವಲ್ಪ ಮಳೆಯಾದರೆ ಸೋರುವ ಸ್ಥಿತಿಯಲ್ಲಿದೆ.ಅವ್ಯವಸ್ಥೆಯಿಂದ ಇಲ್ಲಿನ ಸಿಬ್ಬಂದಿ ಕೂಡ ಭಯದ ವಾತಾವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
‘ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾಗಿ 8 ವರ್ಷಗಳೇ ಕಳೆದರೂ ಸ್ವಂತ ಕಟ್ಟಡ, ಅಗತ್ಯ ಸೌಲಭ್ಯ ಇಲ್ಲದೆ ಸೊರಗುತ್ತಿದೆ. ಈ ಬಗ್ಗೆ ಸ್ಥಳೀಯ ಶಾಸಕರು ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈಗಲಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತು ಶೀಘ್ರದಲ್ಲಿ ಕಟ್ಟಡ, ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ, ಅಂಬುಲನ್ಸ್ ಹಾಗೂ ಅಗತ್ಯ ಸೌಲಭ್ಯ ಒದಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಅಮದಾಲಪಾಡ್ ಗ್ರಾಮದ ನಿವಾಸಿ ಗುರುದಾಸ ಆಗ್ರಹಿಸುತ್ತಾರೆ.
ಕಟ್ಟಡಕ್ಕೆ ₹3 ಕೋಟಿ ಅನುದಾನ ಮಂಜೂರು :
ʼಮಾಳೆಗಾಂವ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕಟ್ಟಡಕ್ಕೆ ಅನುದಾನ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಬಾಕಿಯಿದೆ. ಕಟ್ಟಡ ನಿರ್ಮಾಣ ಬಳಿಕ ಕೇಂದ್ರದಲ್ಲಿ ಎಲ್ಲ ಸೌಕರ್ಯಗಳು ದೊರೆಯಲಿವೆʼ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ ನೀರಗುಡಿ ʼಈದಿನ.ಕಾಮ್ʼಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಜಾಗತಿಕ ಮಟ್ಟದಲ್ಲಿ ಕನ್ನಡದ ಅಸ್ಮಿತೆ ದಾಖಲಿಸಿದ ʼಎದೆಯ ಹಣತೆʼ : ಲಕ್ಷ್ಮಿಕಾಂತ ಪಂಚಾಳ
ʼಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆಕೆಆರ್‌ಡಿಬಿಯಿಂದ ಈಗಾಗಲೇ ₹3 ಕೋಟಿ ಮಂಜೂರಾಗಿದೆ. ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಕಾಮಗಾರಿ ಆರಂಭವಾಗಲಿದೆʼ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ ಕಾಮಶೆಟ್ಟಿ ʼಈದಿನ.ಕಾಮ್ʼ ಜೊತೆ ಮಾತನಾಡಿ ಹೇಳಿದರು.

ಗ್ರಾಮೀಣ ಪ್ರದೇಶ ಜನರಿಗೆ ಗುಣಮಟ್ಟ ಆರೋಗ್ಯ ಸೇವಾ ಸೌಲಭ್ಯ ನೀಡುವ ಘನವಾದ ಉದ್ದೇಶದಿಂದ ನಿರ್ಮಾಣದ ಆರೋಗ್ಯ ಕೇಂದ್ರಗಳಿಗೆ ಕನಿಷ್ಠ ಸೌಕರ್ಯ ಒದಗಿಸುವುದು ಸರ್ಕಾರದ ಮೊದಲ ಆದತ್ಯೆ ಆಗಿರಬೇಕು. ಜನರ ಮನವಿ ಮೇರೆಗೆ ಆರೋಗ್ಯ ಕೇಂದ್ರ ಏನೋ ತೆರೆದಿರಬಹುದು. ಆದರೆ ಹಲವು ವರ್ಷಗಳೇ ಕಳೆದರೂ ʼಇಲ್ಲʼಗಳ ನಡುವೆ ಗುಣಮಟ್ಟ ವೈದ್ಯಕೀಯ ಸೇವೆ ನೀಡುವುದು ಅಸಾಧ್ಯವೇ ಸರಿ. ಇದು ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಚಾಶಕ್ತಿ ಕೊರತೆ ಅಲ್ಲದೆ ಮತ್ತೇನಲ್ಲ ಎಂಬುದು ನಾಗರಿಕರ ಆಕ್ರೋಶ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
ನಮ್ಮೂರಿನಲ್ಲಿ ಒಂದು ಸರ್ಕಾರ ದವಾಖನಿ (ಸರ್ಕಾರಿ ಆಸ್ಪತ್ರೆ) ಹಾಗೂ ಪದವಿ ಪೂರ್ವ ಕಾಲೇಜು ಮತ್ತು ಪೋಲಿಸ್ ಠಾಣೆ ಈ ಮೂರು ನಮ್ಮ ತಂದೆಯವರ ಕನಸು.
ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಂಪರ್ಕಿಸಿ ಬೆಂಗಳೂರಿನ ವರೆಗೆ ಹೋಗಿ ಮನವಿ ಪತ್ರಗಳನ್ನು ಸಲ್ಲಿಸಿ ಕೊನೆಗೂ ಸರ್ಕಾರಿ ಆಸ್ಪತ್ರೆ ಮತ್ತು ಪದವಿ ಪೂರ್ವ ಕಾಲೇಜು ಮಂಜೂರು ಆಗುವಂತೆ ಮಾಡಿ ಯಶಸ್ವಿಯಾಗಿದರು.
ಆದರೆ ನಂತರ ಬಂದ ಗ್ರಾಮ ಪಂಚಾಯಿತಿ ಸದಸ್ಯರು ಕಾಲೇಜು ಕಟ್ಟಡಕ್ಕೆ ಸ್ಥಳ ತೋರಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಕಾಲೇಜು ಇಂದಿಗೂ ನೆನೆಗುದಿಗೆ ಬಿದ್ದಿದೆ. ಸರ್ಕಾರಿ ಆಸ್ಪತ್ರೆ ಪ್ರಾರಂಭವಾದರೂ ಅದಕ್ಕೆ ಸ್ವಂತ ಕಟ್ಟಡ ಇಲ್ಲ.
ಮೂರ್ನಾಲ್ಕು ವರ್ಷಗಳ ಹಿಂದೆ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರು ಆಗಿದರು ಇಲ್ಲಿಯವರೆಗೆ ಅ ಟೆಂಡರ್ ಯಾರಿಗೂ ನೀಡಿಲ್ಲ ಹಾಗೆ ನೆನೆಗುದಿಗೆ ಬಿದ್ದಿದೆ.
—ಅಶ್ವಜೀತ ದಂಡಿನ