ಇಸ್ರೇಲ್-ಇರಾನ್ ನಡುವಿನ ಸಂಘರ್ಷ ಯುದ್ಧವಾಗಿ ತಿರುವು ಪಡೆದುಕೊಂಡಿದೆ. ಇರಾನ್ ರಾಷ್ಟ್ರದ 3 ಅಣುಸ್ಥಾವರಗಳ ಮೇಲೆ ದಾಳಿ ನಡೆಸಿ ಸಂಘರ್ಷಕ್ಕೆ ಅಧಿಕೃತ ಪ್ರವೇಶ ಪಡೆದಿರುವ ಅಮೆರಿಕ ಇದೀಗ ಇರಾನ್‌ನಲ್ಲಿ ಅಧಿಕಾರ ಬದಲಾವಣೆ ಕುರಿತು ಸುಳಿವು ನೀಡಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇರಾನ್‌ನಲ್ಲಿ ಆಡಳಿತ ಬದಲಾವಣೆ ಮೂಲಕ ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿ ನೆಲೆಸುವಂತೆ ಮಾಡುವ ಸಾಧ್ಯತೆ ಕುರಿತು ನಾವು ಚಿಂತಿಸುತ್ತಿದ್ದೇವೆ. ಆಡಳಿತ ಬದಲಾವಣೆ ಎಂಬ ಪದವನ್ನು ಬಳಸುವುದು ರಾಜಕೀಯವಾಗಿ ಸರಿಯಲ್ಲ, ಆದರೆ, ಪ್ರಸ್ತುತ ಆಯತೊಲ್ಲಾ ಅಲಿ ಖಮೇನಿ ಆಡಳಿತ ಇರಾನ್‌ನ್ನು ಮತ್ತೆ ಶ್ರೇಷ್ಠಗೊಳಿಸಲು (Make Iran Great Again-MIGA) ಸಾಧ್ಯವಾಗದಿದ್ದರೆ, ಆಡಳಿತ ಬದಲಾವಣೆ ಬಗ್ಗೆ ಏಕೆ ಚಿಂತಿಸಬಾರದು?” ಎಂದು ಹೇಳಿದ್ದಾರೆ.
ಇದೇ ವೇಳೆ ಇರಾನ್ ಮೇಲೆ ‘ಆಪರೇಷನ್ ಮಿಡ್‌ನೈಟ್ ಹ್ಯಾಮರ್’ ಯಶಸ್ವಿ ಕಾರ್ಯಾಚರಣೆಯ ಬಳಿಕ ಅಮೆರಿಕದ ಬಿ-2 ಯುದ್ಧ ವಿಮಾನಗಳು ಸುರಕ್ಷಿತವಾಗಿ ಮಿಸ್ಸೋರಿಯಲ್ಲಿ ಬಂದಿಳಿವೆ ಎಂದು ಟ್ರಂಪ್ ಮಾಹಿತಿ ನೀಡಿದ್ದಾರೆ.
“ಮತ್ತೊಂದು ಪೋಸ್ಟ್‌ನಲ್ಲಿ ಇರಾನ್ ಮೇಲಿನ ದಾಳಿ ಅತ್ಯಂತ ಕಠಿಣ ಹಾಗೂ ನಿಖರವಾಗಿದ್ದವು. ನಮ್ಮ ಸೇನೆಯ ಸಾಮರ್ಥ್ಯವನ್ನು ತೋರಿಸಿದೆ” ಎಂದು ತಿಳಿಸಿದ್ದಾರೆ.