- ಇಂಟರ್ ಪೋಲ್ ಮೂಲಕ ಜುನೈದ್ ಪತ್ತೆ ಮಾಡಲು ಸಿಸಿಬಿ ಪ್ರಯತ್ನ
- ಐವರು ಶಂಕಿತ ಉಗ್ರರಿಗೆ ನಿರ್ದೇಶನ ನೀಡುತ್ತಿದ್ದ ಪ್ರಮುಖ ಆರೋಪಿ ಜುನೈದ್
ಬೆಂಗಳೂರಿನ 10 ಕಡೆ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಶಂಕಿತ ಐವರು ಉಗ್ರರ ಬಂಧನದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಜುನೈದ್ ಅಹ್ಮದ್ ಇನ್ನೂ ಪತ್ತೆಯಾಗಿಲ್ಲ. ಹಾಗಾಗಿ, ಆತನ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಲುಕ್ ಔಟ್ ನೋಟಿಸ್ (ಎಲ್ಒಸಿ) ಹೊರಡಿಸಲು ಸಿದ್ಧತೆ ನಡೆಸಿದೆ.
ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಇತ್ತೀಚೆಗೆ ಭೇದಿಸಿದ ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿದಂತೆ. ಜುನೈದ್ ಎಲ್ಲಿದ್ದಾನೆ ಎಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಪ್ರಮುಖ ಆರೋಪಿ ಕೊಲ್ಲಿ ರಾಷ್ಟ್ರದಲ್ಲಿದ್ದಾರೆ ಎಂದು ತಿಳಿದುಬಂದಿತ್ತು. ಇದೀಗ ಆತ ಇನ್ನೂ ಅಲ್ಲಿಯೇ ಇದ್ದಾನಾ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ. ತನಿಖೆಯ ಭಾಗವಾಗಿ ಆತನ ವಿರುದ್ಧ ಎಲ್ಒಸಿ ಹೊರಡಿಸಲಾಗುವುದು ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಪೊಲೀಸರು ಸೈಯದ್ ಸುಹೇಲ್ ಖಾನ್, ಮೊಹಮ್ಮದ್ ಉಮರ್, ಜಾಹಿದ್ ತಬ್ರೇಜ್, ಸೈಯದ್ ಮುದಾಸಿರ್ ಪಾಷಾ ಮತ್ತು ಮೊಹಮ್ಮದ್ ಫಾಜಿಲ್ ಎಂಬ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದರು. ಈ ಐವರು ಪ್ರಸ್ತುತ ಪೊಲೀಸ್ ವಶದಲ್ಲಿದ್ದಾರೆ.
ಈ ಐವರು ಶಂಕಿತ ಉಗ್ರರಿಗೆ ಪ್ರಮುಖ ಆರೋಪಿ ಜುನೈದ್ ನಿರ್ದೇಶನ ನೀಡುತ್ತಿದ್ದನು. ಈತನನ್ನು ಬಂಧಿಸಲು ಕಾನೂನು ಕ್ರಮ ಕೈಗೊಳ್ಳುವಂತೆ ಸಿಸಿಬಿ ಪೊಲೀಸರು, ಎನ್ಐಎ ಸಹಾಯ ಕೋರಿದ್ದು, ತನಿಖೆ ಭಾಗವಾಗಿ ಅಧಿಕಾರಿಗಳು ಲುಕ್ಔಟ್ ನೋಟಿಸ್ ಹೊರಡಿಸಲಿದ್ದಾರೆ.
ಸುಲ್ತಾನಪಾಳ್ಯದ ನಿವಾಸಿ ಜುನೈದ್ ಅಹ್ಮದ್, ಲಷ್ಕರ್-ಎ-ತೊಯ್ಬಾ ಸಂಘಟನೆಯ ಕಾರ್ಯಕರ್ತ ಮತ್ತು 2008 ರ ಬೆಂಗಳೂರು ಸರಣಿ ಸ್ಫೋಟದ ಪ್ರಮುಖ ಆರೋಪಿ. ಈತನು ಬಾಂಬ್ ಸ್ಪೋಟ್ದ ಪ್ರಮುಖ ಆರೋಪಿ ಟಿ. ನಜೀರ್ ಆಪ್ತನಾಗಿದ್ದನು. ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದಾಗ ಸಂಪರ್ಕಕ್ಕೆ ಬಂದಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ.
ಜುನೈದ್ ಐವರು ಶಂಕಿತರಿಗೆ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಲು ಮಾರ್ಗದರ್ಶನ ನೀಡಿ, ಅವರಿಗೆ ಕೃತ್ಯ ನಡೆಸಲು ಪ್ರೇರೇಪಿಸುತ್ತಿದ್ದನು ಎಂದು ತಿಳಿದುಬಂದಿದೆ.
ಈಗಾಗಲೇ ಪೊಲೀಸ್ ವಶದಲ್ಲಿರುವ ಐವರು ಶಂಕಿತರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಜುನೈದ್ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ, ಜುನೈದ್ನ ಪ್ರಸ್ತುತ ಸ್ಥಳವನ್ನು ತಿಳಿಯದಿರುವುದು ಸಿಸಿಬಿಗೆ ಇಂಟರ್ಪೋಲ್ ಅನ್ನು ಸಂಪರ್ಕಿಸಲು ಅಡ್ಡಿಯಾಗಿದೆ.
“ನಾವು ಇಂಟರ್ಪೋಲ್ ಅನ್ನು ಸಂಪರ್ಕಿಸುವ ಹಂತವನ್ನು ತಲುಪಿಲ್ಲವಾದರೂ, ಅವನು ಇರುವ ಸ್ಥಳವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಏಕೆಂದರೆ ನಾವು ಅವನು ನಿರ್ದಿಷ್ಟ ದೇಶದಲ್ಲಿ ಇದ್ದಾನೆ ಎಂಬ ಕೆಲವು ನಿರ್ದಿಷ್ಟ ವಿವರಗಳನ್ನು ಹೊಂದಿದ್ದರೆ ಮಾತ್ರ ಅವನನ್ನು ಬಂಧಿಸಲು ಇಂಟರ್ಪೋಲ್ ಸಹಾಯ ಪಡೆಯಬಹುದು. ಅಲ್ಲಿಯವರೆಗೆ, ನಾವು ಇಂಟರ್ಪೋಲ್ ಅನ್ನು ಸಂಪರ್ಕಿಸಲು ಸಾಧ್ಯವಿಲ್ಲ” ಎಂದು ಅಧಿಕಾರಿಯೊಬ್ಬರು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯಾದ್ಯಂತ ಇನ್ನೂ ನಾಲ್ಕು ದಿನ ಮಳೆ ಮುಂದುವರೆಯುವ ಸಾಧ್ಯತೆ: ಹವಾಮಾನ ಇಲಾಖೆ
ಜುನೈದ್ ಗರ್ಲ್ ಫ್ರೆಂಡ್ ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಜುನೈದ್ ಪತ್ತೆಗೆ ತನಿಖಾ ತಂಡ ಮಾಹಿತಿ ಕಲೆಹಾಕುತ್ತಿದ್ದು, ಈ ವೇಳೆ ಬೆಂಗಳೂರಿನಲ್ಲಿ ಜುನೈದ್ಗೆ ಗರ್ಲ್ ಫ್ರೆಂಡ್ ಇರುವ ಅಂಶ ಬೆಳಕಿಗೆ ಬಂದಿದೆ.
ಸಿಸಿಬಿ ಪೊಲೀಸರು ಜುನೈದ್ ಗರ್ಲ್ಫ್ರೆಂಡ್ ಅನ್ನು ಪತ್ತೆ ಮಾಡಿ ಮಾಹಿತಿ ಕಲೆಹಾಕಿದ್ದು, ಜುನೈದ್ ಇರುವ ಸ್ಥಳದ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.
ಜುನೈದ್ 2021ರಲ್ಲಿ ಬೆಂಗಳೂರನ್ನು ತೊರೆದು ವಿದೇಶದಲ್ಲಿ ವಾಸವಾಗಿದ್ದನು. ಆದರೂ ನಿರಂತರವಾಗಿ ಬೆಂಗಳೂರಿನಲ್ಲಿರುವ ತನ್ನ ಗರ್ಲ್ ಫ್ರೆಂಡ್ ಜತೆಗೆ ಸಂಪರ್ಕದಲ್ಲಿದ್ದನು. ಶಂಕಿತ ಉಗ್ರರು ಪೊಲೀಸರಿಗೆ ಸಿಕ್ಕ ಬಳಿಕ ಯುವತಿಯೊಂದಿಗೆ ಜುನೈದ್ ಸಂಪರ್ಕ ಮಾಡುವುದನ್ನು ನಿಲ್ಲಿಸಿದ್ದಾನೆ.
ಜುನೈದ್ ಟೆರರ್ ಆ್ಯಕ್ಟಿವಿಟಿ ಬಗ್ಗೆ ಯುವತಿಗೆ ಮಾಹಿತಿ ಇಲ್ಲ. ಆದರೆ, ಈ ಹಿಂದೆ ಆಕೆಯ ಜತೆಗೆ ಜುನೈದ್ ಹೇಗಿದ್ದನು? ಆತನ ವರ್ತನೆಗಳು ಹೇಗಿದ್ದವು ಎಂಬ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಯುವತಿ ಮಾಹಿತಿ ನೀಡಿದ್ದಾಳೆ.
ದುಬೈನಿಂದ ಮಿಡಲ್ ಈಸ್ಟ್ ನಲ್ಲಿರುವ ಅಝರ್ಬೈಜಾನ್ ದೇಶದ ಬಾಕು ಎಂಬ ನಗರದಲ್ಲಿ ಪ್ರಮುಖ ಆರೋಪಿ ಇರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಸದ್ಯ ಇಂಟರ್ ಪೋಲ್ ಮೂಲಕ ಜುನೈದ್ ಪತ್ತೆಮಾಡಲು ಸಿಸಿಬಿ ಪ್ರಯತ್ನಿಸುತ್ತಿದೆ.