ಪತ್ರಕರ್ತರು ಸಮಾಜದ ಎರಡು ಕಣ್ಣುಗಳಿದ್ದಂತೆ, ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಬಹುಮುಖ್ಯ ಎಂದು ಸಮಾಜ ಸೇವಕಿ ಕಾಣತಂಡ ಬೀನಾ ಜಗದೀಶ್ ಅಭಿಪ್ರಾಯಪಟ್ಟರು.
ನಗರದ ಎ ಟು ಜೆಡ್ ಸಭಾಂಗಣದಲ್ಲಿ ನಡೆದ ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, “ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು ಜನ ಸಾಮಾನ್ಯರಿಗೆ ತಲುಪುವಲ್ಲಿ ಪತ್ರಕರ್ತರು ಪ್ರಮುಖ ಕಾರಣಕರ್ತರು. ತಮ್ಮ ವೈಯಕ್ತಿಕ ಬದುಕನ್ನು ಬದಿಗೊತ್ತಿ ಸಮಾಜ ನಿರ್ಮಾಣದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಕೆಲಸ ಶ್ಲಾಘನೀಯ. ಮುಂದಿನ ದಿನಗಳಲ್ಲಿ ವಿರಾಜಪೇಟೆ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ದತ್ತಿನಿಧಿ ಪ್ರಶಸ್ತಿ ಸ್ಥಾಪಿಸಲಾಗುವುದು” ಎಂದು ಭರವಸೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತಾನಾಡಿ, “ಪತ್ರಕರ್ತರು ಬದಲಾದ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಬೇಕಾಗಿದೆ.
ಇಂದಿನ ದಿನಗಳಲ್ಲಿ ತನಿಖಾ ವರದಿ ಸಂಪೂರ್ಣವಾಗಿ ಮಾಯಾವಾಗುತ್ತಿದೆ. ತನಿಖಾ ವರದಿ ಮಾಡುವಲ್ಲಿ ಪತ್ರಕರ್ತರು ಕೂಡ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಪತ್ರಕರ್ತರು ವಿಶೇಷ ವರದಿಯತ್ತ ಹೆಚ್ಚು ಆಸಕ್ತಿ ವಹಿಸಿಕೊಂಡು, ಧ್ವನಿಯಿಲ್ಲದವರಿಗೆ ತಮ್ಮ ವರದಿಯ ಮೂಲಕ ಧ್ವನಿಯಾಗಬೇಕಿದೆ. ಪ್ರಶಸ್ತಿಯು ಪತ್ರಕರ್ತನ ಜವಬ್ದಾರಿ ಹೆಚ್ಚಿಸಲಿದೆ.
ಪತ್ರಕರ್ತರ ಸಂಘದಿಂದ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜಕ್ಕೂ ಕೂಡ ತಮ್ಮ ಕೊಡುಗೆ ನೀಡಬೇಕು” ಎಂದು ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, “ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಪತ್ರಕರ್ತರು ಇತ್ತೀಚಿನ ದಿನಗಳಲ್ಲಿ ಕೂತಲ್ಲೇ ಸುದ್ದಿ ಮಾಡುತ್ತಿದ್ದಾರೆ. ವರದಿಯ ಸತ್ಯಾಂಶವನ್ನು ತಿಳಿಯಲು ಆಸಕ್ತಿ ತೋರುತ್ತಿಲ್ಲ. ಪತ್ರಿಕೋದ್ಯಮದಿಂದ ತನಿಖಾ ವರದಿ ದೂರವಾಗುತ್ತಿದೆ” ಎಂದು ವಿಷಾದ ವ್ಯಕ್ತಪಡಿಸಿದು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸಿ ಎ ನಾಸಿರ್ ಅವರು ದತ್ತಿ ಪ್ರಶಸ್ತಿ ಸ್ಥಾಪನೆ ಮಾಡುವುದಾಗಿ ತಿಳಿಸಿದರು. ಪ್ರಶಸ್ತಿ ವಿತರಣಾ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೂ ಮೊದಲು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫಾ ವಾರ್ಷಿಕ ವರದಿ ಹಾಗೂ ಕಳೆದ ಮಹಾಸಭೆ ವರದಿ ಮಂಡಿಸಿದರು.

ಇದನ್ನೂ ಓದಿ: ಕೊಡಗು | ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ : ಡಾ ಮಂತರ್ ಗೌಡ
ಸಂಘದ 2024 ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಆರು ಮಂದಿ ಪತ್ರಕರ್ತರಿಗೆ ಪ್ರದಾನ ಮಾಡಲಾಯಿತು. ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಯನ್ನು ಕೆ.ಎಂ ಇಸ್ಮಾಯಿಲ್ ಕಂಡಕರೆ ಹಾಗೂ ಸತೀಶ್ ನಾರಾಯಣ್, ಅತ್ಯುತ್ತಮ ಕೃಷಿ ವರದಿ ಟಿ.ಜೆ ಕಿಶೋರ್ ಕುಮಾರ್, ಅತ್ಯುತ್ತಮ ಮಾನವೀಯ ವರದಿಗೆ ರವಿಕುಮಾರ್ ಎಂ, ಅರಣ್ಯ ವನ್ಯ ಜೀವಿ ಪ್ರಶಸ್ತಿ ಅಂತೋಣಿ ಪಿ.ವಿ ಹಾಗೂ ಅತ್ಯುತ್ತಮ ಶೈಕ್ಷಣಿಕ ವರದಿ ಪ್ರಶಸ್ತಿಯನ್ನು ರಜಿತಾ ಕಾರ್ಯಪ್ಪ ಅವರಿಗೆ ಪ್ರದಾನ ಮಾಡಲಾಯಿತು. ಹಾಗೂ ಶೇಕಡಾ 80ಕ್ಕೂ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ರಘು ಮಾಚಯ್ಯ, ಖಜಾಂಜಿ ಡಾ.ಹೇಮಂತ್, ಮಹಾಸಭೆಯ ವೀಕ್ಷಕರಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎಚ್ ಕೆ ಜಗದೀಶ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ, ಖಜಾಂಜಿ ಆನಂದ್ ಕೊಡಗು ಇದ್ದರು.