ಕುಸುಮಾ ಅವರು ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸುವಾಗ ತಮ್ಮ ನೇರ, ನಿಷ್ಟುರ ಸ್ವಭಾವದಿಂದಾಗಿ ಕೆಲವು ಸಹೋದ್ಯೋಗಿಗಳಿಂದ ತೊಂದರೆಯನ್ನೂ ಅನುಭವಿಸಬೇಕಾಯ್ತು. ಮಂಡ್ಯದಲ್ಲಿ ಕಾರ್ಯನಿರ್ವಹಿಸುವಾಗ ಅಲ್ಲಿನ ಹೆಸರಾಂತ ಹಿರಿಯ ರಾಜಕಾರಣಿಯೊಬ್ಬರಿಗೆ ತಲೆಬಾಗದೆ ಪತ್ರಿಕೋದ್ಯಮದ ಮೌಲ್ಯಗಳಿಗನುಗುಣವಾಗಿ ವರದಿ ಮಾಡಿ ಪತ್ರಿಕಾರಂಗದ ಘನತೆಯನ್ನು ಎತ್ತಿಹಿಡಿದವರು.
ಕನ್ನಡ ಪತ್ರಿಕೋದ್ಯಮದಲ್ಲಿ ಕಾರ್ಯನಿರತ ಪತ್ರಕರ್ತೆಯರು ಕೇಂದ್ರ ಕಚೇರಿಗೆ, ದೊಡ್ಡ ದೊಡ್ಡ ನಗರಗಳಿಗೆ ಸೀಮಿತವಾಗಿದ್ದ ಸಮಯದಲ್ಲೇ ಕುಸುಮಾ ಶಾನಭಾಗರು ಪ್ರಜಾವಾಣಿಯ ಜಿಲ್ಲಾ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದರು. ವೃತ್ತಿಪರತೆ, ದಿಟ್ಟತನ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದರು. ಪತ್ರಕರ್ತೆ ಎಂಬ ಹೆಸರಿಗೆ ಅನ್ವರ್ಥಕವಾಗಿದ್ದ ಹೆಸರೇ ಕುಸುಮಾ ಶಾನಭಾಗ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ನಂತರ LTTE ಯ ಶಿವರಸನ್ ಮತ್ತು ತಂಡ ಮಂಡ್ಯಜಿಲ್ಲೆಯ ಮುತ್ತತ್ತಿಯ ಅರಣ್ಯದಲ್ಲಿ ಬೀಡುಬಿಟ್ಟಿದ್ದಾರೆ ಎಂಬ ಮಾಹಿತಿ ಆಧಾರದ ಮೇಲೆ ಅವರ ಅಡಗುದಾಣಗಳಿಗೆ ಪೋಲಿಸರು ದಾಳಿ ನಡೆಸಿದ್ದಾರೆ ಎಂಬ ಸುದ್ದಿ ಮೂಲದ ಜಾಡು ಹಿಡಿದು ಮಧ್ಯರಾತ್ರಿ ಎರಡುಗಂಟೆಯ ಸಮಯದಲ್ಲಿ ದಾಳಿ ನಡೆದ ಜಾಗದಲ್ಲಿ ಬೀಟ್ನಲ್ಲಿ ಕುಸುಮಾ ಶಾನಭಾಗ ಹಾಜರಿದ್ದರು. ಇದು ಅವರ ವೃತ್ತಿಪರತೆ, ನಿಷ್ಠೆ, ದಿಟ್ಟತನಕ್ಕೆ ಸಾಕ್ಷಿಯಾಗಿತ್ತು.
ಬೀದಿಬದಿಯ ವೇಶ್ಯೆಯರ ಸಂಕಟ, ಅಸಹಾಯಕತೆಗಳಿಗೆ ನೊಂದು ಕಣ್ಣೀರು ಹಾಕುತ್ತಿದ್ದ ಕುಸುಮಾ ಶಾನಭಾಗರು ಅವರ ಮೈದಡವಿ ಅವರ ಎಲ್ಲ ನೋವುಗಳಿಗೆ ದನಿಯಾಗಿದ್ದವರು. ವೇಶ್ಯೆಯರು ಎಂಬ ಹೆಸರೆತ್ತಲು ಹಿಂಜರಿಯುತ್ತಿದ್ದ ಕಾಲಘಟ್ಟದಲ್ಲೇ ಆ ಸಂತ್ರಸ್ತ ಜೀವಗಳ ಸಮಸ್ತ ನೋವುಗಳನ್ನು ಲೋಕದ ಕಣ್ಣಿಗೆ ಪರಿಚಯಿಸಿದವರು ಕುಸುಮಾ ಶಾನಭಾಗರು. ಸರಿ ಸುಮಾರು ಹತ್ತುವರ್ಷಗಳ ಕಾಲ ವೇಶ್ಯೆಯರ ಬದುಕಿನ ಅಧ್ಯಯನ ನಡೆಸಿ ಆ ಜೀವಂತ ದಾರುಣ ಘಟನೆಗಳನ್ನು ‘ಕಾಯದ ಕಾರ್ಪಣ್ಯ’ ಎಂಬ ವಿಶಿಷ್ಟ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಜನಸಾಮಾನ್ಯರ ನೋವುಗಳಿಗೆ ಒಳದನಿಗೆ ತೆರೆದ ಕಿವಿಯಾಗಿದ್ದ ಕುಸುಮಾ ಶಾನಭಾಗರು ಸಮಾಜದ ಸಮಸ್ಯೆಗಳಿಗೆ ಸದಾ ಮಿಡಿಯುತ್ತಿದ್ದರು. ಕುಸುಮಾ ಶಾನುಭಾಗ ಓರ್ವ ಸಮರ್ಪಿತ, ಮಾನವೀಯ ಒಳನೋಟಗಳುಳ್ಳ ಪತ್ರಕರ್ತೆ ಮಾತ್ರವಲ್ಲದೆ ಜನಪರ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಅಭಿವೃದ್ದಿ ಪತ್ರಿಕೋದ್ಯಮ ಕಣ್ಣು ಬಿಡುತ್ತಿದ್ದ ಕಾಲದಲ್ಲೇ ಆ ದಿಕ್ಕಿನಲ್ಲಿ ಕಾರ್ಯನಿರ್ವಹಿಸಿ ಸಮಕಾಲೀನ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವಂತಹ ವರದಿಗಳನ್ನು ಬರೆದವರು.
ಕುಸುಮಾ ಅವರು ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸುವಾಗ ತಮ್ಮ ನೇರ, ನಿಷ್ಠುರ ಸ್ವಭಾವದಿಂದಾಗಿ ಕೆಲವು ಸಹೋದ್ಯೋಗಿಗಳಿಂದ ತೊಂದರೆಯನ್ನೂ ಅನುಭವಿಸಬೇಕಾಯ್ತು. ಮಂಡ್ಯದಲ್ಲಿ ಕಾರ್ಯನಿರ್ವಹಿಸುವಾಗ ಅಲ್ಲಿನ ಹೆಸರಾಂತ ಹಿರಿಯ ರಾಜಕಾರಣಿಯೊಬ್ಬರಿಗೆ ತಲೆಬಾಗದೆ ಪತ್ರಿಕೋದ್ಯಮದ ಮೌಲ್ಯಗಳಿಗನುಗುಣವಾಗಿ ವರದಿ ಮಾಡಿ ಪತ್ರಿಕಾರಂಗದ ಘನತೆಯನ್ನು ಎತ್ತಿಹಿಡಿದವರು. ಮಂಡ್ಯದ ಹಿರಿಯ ಪತ್ರಕರ್ತರೊಬ್ಬರು ಇವರನ್ನು ಸಹಿಸಿಕೊಳ್ಳಲಾಗದೆ ಅನಗತ್ಯ ತೊಂದರೆಗಳನ್ನು ಕೊಡುತ್ತಿದ್ದರು.

ವೃತ್ತಿಪರತೆಯನ್ನೇ ಉಸಿರೆಂದು ಬಗೆದ ಕುಸುಮಾ ಶಾನುಭಾಗರು ವೃತ್ತಿಯಲ್ಲಿದ್ದಾಗಲೂ, ನಿವೃತ್ತಿಯ ನಂತರವೂ ಎಲೆಮರೆಯ ಕಾಯಿಯಂತೆ, ಅತ್ಯಂತ ಸರಳವಾಗಿ ನುಡಿದಂತೆ ಬದುಕಿದವರು. ಕುಸುಮಾ ಅವರು ‘ಮಣ್ಣಿಂದ ಎದ್ದವರು’ ಕಾದಂಬರಿ, ‘ಪುಟಗಳ ನಡುವಿನ ನವಿಲುಗರಿ’ ಎಂಬ ಸಾಮಾಜಿಕ ಚಿಂತನೆಗಳ ಬರಹಗಳು, ‘ನೆನಪುಗಳ ಬೆನ್ನೇರಿ’ ಎಂಬ ಕಥಾಸಂಕಲನ, ಬೀದಿ ಬದಿ ವೇಶ್ಯೆಯರ ದಾರುಣ ಬದುಕಿನ ಅನಾವರಣ ಕುರಿತು ಅಧ್ಯಯನ ನಡೆಸಿ ‘ಕಾಯದ ಕಾರ್ಪಣ್ಯ’ ಎಂಬ ಅಪರೂಪದ ಪುಸ್ತಕಗಳನ್ನು ಬರೆದಿದ್ದಾರೆ. ಕೆಂಡಸಂಪಿಗೆ ಬ್ಲಾಗ್ ಗೆ ಹಲವಾರು ಮಾನವೀಯ ಬರಹಗಳನ್ನು ಬರೆದಿದ್ದಾರೆ.
ನವಕರ್ನಾಟಕ ಪ್ರಕಾಶನದ ವನಿತಾ ಚಿಂತನ ಮಾಲೆಯಲ್ಲಿ ಪ್ರಕಟವಾದ ‘ಮಣ್ಣಿಂದ ಎದ್ದವರು’ ಕಾದಂಬರಿಯಲ್ಲಿ ಯುವತಿಯೊಬ್ಬಳು ಪಿತೃಪ್ರಧಾನ ಸಮಾಜದಲ್ಲಿ ಅನುಭವಿಸುವ ನೋವು, ತಲ್ಲಣ, ತಹತಹಗಳನ್ನು ತೆರೆದಿಟ್ಟಿದ್ದಾರೆ. ಲೇಖಕಿ ಪ್ರತಿಯೊಬ್ಬ ಮಹಿಳೆಯು ಘನತೆ, ಸ್ವಾಭಿಮಾನದಿಂದ ಹೋರಾಟ ಮಾಡುತ್ತಲೇ ದಿಟ್ಟವಾಗಿ ಬದುಕಬೇಕು,ಕಾಲ ಎಷ್ಟೇ ಬದಲಾದರೂ ಮಹಿಳೆಯರ ಸ್ಥಿತಿಗತಿಗಳು ಮಾತ್ರ ಬದಲಾಗಲಿಲ್ಲ ಎಂಬುದನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ. ಅಂದಿನ ಕಾಲದಲ್ಲೇ ಕಾದಂಬರಿಯ ನಾಯಕಿ ಕಾವೇರಿಯು ಮಹಿಳೆಯರಿಗೂ ಆಸ್ತಿಯಲ್ಲಿ ಹಕ್ಕಿದೆ ಎಂಬ ದೃಢವಾದ ದನಿಯೆತ್ತುವ ಕ್ರಾಂತಿಕಾರಿಯಾದ ನಡೆಯನ್ನು ಕಾದಂಬರಿ ಒಳಗೊಂಡಿದೆ. ಇಲ್ಲಿ ಮಹಿಳಾ ಸಮುದಾಯದ ಒಟ್ಟಾರೆ ಸಮಸ್ಯೆಗಳ ಆಳ, ಅಗಲಗಳನ್ನು ತೆರೆದಿಟ್ಟಿರುವ ಕೌಟುಂಬಿಕ ವಿಸ್ತಾರದ ಅಪ್ಪಟ ಕಾಳಜಿಯ ಅನಾವರಣವಾಗಿದೆ.
‘ಪುಟಗಳ ನಡುವಿನ ನವಿಲುಗರಿ’ ಸಾಮಾಜಿಕ ಚಿಂತನ ಬರಹಗಳ ಸಂಕಲನದಲ್ಲಿ ನಂದಿನಿ ಲೇಔಟ್ನಿಂದ ಕಣ್ಣೆದುರೇ ಕಾಣೆಯಾದ ಬಾಲೆಯರು, ಹದಿನಾರಕ್ಕೆ ಅಭಿ ಎರಡು ಮಕ್ಕಳ ತಾಯಿ, ಕೊಡಗಿನ ಬಡರೋಗಿಗಳಿಗೆ ಮರುಗಿದ ಗ್ರೀಕ್ ಮಹಿಳೆ, ಮಣ್ಣಿನ ಮಗಳ ಕೊನೆಯ ದಿನಗಳು, ಉಪಕಾರ ಎಂಬ ಸಿಹಿಗೆ ಮುತ್ತುವ, ಅವರಿಗೆ ಎಲ್ಲರೂ ಇದ್ದರೂ ಯಾರೂ ಇರಲಿಲ್ಲ, ಪುಟ್ಪಾತಿನ ಸಂಸಾರ, ಹೊಟ್ಟೆ ಹಸಿವಿಗೆ ಉರುಳು ಮದ್ದು, ಮುಸುಕಿದ ಮಬ್ಬಿನಲ್ಲಿ ಬೆಳಕ ಹುಡುಕಿ, ಹೇರಿಕೊಂಡರೆ ಹೊರೆ, ಮುಂತಾದ ಮನೋಜ್ಞ, ಮಾನವೀಯ ಲೇಖನಗಳಿವೆ. ಈ ಬರಹಗಳು ಸಾಮಾನ್ಯರ ಬದುಕಿನ ಒಳಮನೆಯ ಕದ ತಟ್ಟುವ, ಓದುಗರ ಮನ ಮುಟ್ಟಿ ಕಾಡುವ ಮಹತ್ವಪೂರ್ಣ, ಜನಪರವಾದ ಆರ್ದ್ರ ಬರಹಗಳಾಗಿವೆ.
ಕುಸುಮಾ ಶಾನಭಾಗರು ಪ್ರಸಿದ್ಧ ಸಾಹಿತಿ ಭಾರತೀಸುತ ಎಂದೇ ಹೆಸರಾದ ಎಸ್ ಆರ್ ನಾರಾಯಣ ರಾವ್ ಅವರ ಮಗಳು. ತಂದೆ, ಮಗಳ ಆಲೋಚನೆಗಳು ಭಿನ್ನ ದಾರಿಯವಾಗಿದ್ದವು. ಎಡಕಲ್ಲು ಗುಡ್ಡದ ಮೇಲೆ, ಹುಲಿಯ ಹಾಲಿನ ಮೇವು, ಗಿರಿಕನ್ಯೆ, ಬಯಲು ದಾರಿ ಭಾರತೀಸುತರ ಖ್ಯಾತ ಕಾದಂಬರಿಳು. ಅವು ಸಿನಿಮಾಗಳಾಗಿಯೂ ಅಪಾರ ಹೆಸರು ಪಡೆದಿವೆ. ಮಹಿಳಾ ಜಾಗೃತಿಯ ಕುರಿತು ಮಾಧ್ಯಮಗಳ ಹೊಣೆಗಾರಿಕೆಯ ಕುರಿತು ಸದಾ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕುಸುಮಾ ಶಾನಭಾಗರು ಸಮಾಜದ ಎಲ್ಲ ವರ್ಗದ ಜನರ ನೋವುಗಳಿಗೆ ಮಿಡಿದ ಪತ್ರಕರ್ತೆಯರಲ್ಲಿ ಪ್ರಖರವಾದ, ಪ್ರಮುಖ ಹೆಸರು.
2017ರಲ್ಲಿ ಅವರ ಸೇವೆ ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಕೆಲವು ವರ್ಷಗಳಿಂದ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದ ಕುಸುಮಾ ಶಾನಭಾಗರು ತಮ್ಮ ಅನಾರೋಗ್ಯದ ದಿನಗಳಲ್ಲೂ ಪ್ರಸ್ತುತದಲ್ಲಿ ನಡೆಯುತ್ತಿರುವ ಜನ ಚಳವಳಿ, ಹೋರಾಟಗಳಲ್ಲಿ ಭಾಗಿಯಾಗಲಾರದ ಅಸಹಾಯಕತೆಗೆ ನೊಂದುಕೊಳ್ಳುತ್ತಿದ್ದರು.
ಕೆಲವು ತಿಂಗಳಿಂದೀಚೆಗೆ ಅವರಿಗೆ ಕೋಲನ್ ಕ್ಯಾನ್ಸರ್ ಇರುವುದು ಪತ್ತೆಯಾಗಿ ಅದಕ್ಕೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಅವರೇ ನನಗೆ ಕರೆಮಾಡಿ ತಿಳಿಸಿದ್ದರು. ಹೆಚ್ಚು ಕೃಶರಾಗಿ, ನಿಶ್ಯಕ್ತರಾಗಿದ್ದರೂ ಅವರ ಜೀವನ ಪ್ರೀತಿ ಕುಂದಿರಲಿಲ್ಲ. ಮೇ ತಿಂಗಳಲ್ಲಿ ಭೇಟಿಯಾದಾಗಲೂ ಬಹಳ ಹೊತ್ತು ಮಾತನಾಡಿದ್ದರು. ಕಳೆದ ವಾರ ಕರೆ ಮಾಡಿದ್ದಾಗ ಕರೆ ಸ್ವೀಕರಿಸಿರಲಿಲ್ಲ. ನಂತರ ಆಸ್ಪತ್ರೆಯಲ್ಲಿರುವುದಾಗಿ ಮೆಸೇಜ್ ಮಾಡಿದ್ದರು.
2008ರಲ್ಲಿ ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಉಪನ್ಯಾಸಕಿಯಾಗಿದ್ದಾಗ ಹಿರಿಯ ಪತ್ರಕರ್ತರು, ಚಿಂತಕರೂ ಆದ ಎಚ್ ಎಲ್ ಕೇಶವಮೂರ್ತಿಯವರಿಗೆ 60 ತುಂಬಿದ ಅಭಿನಂದನಾ ಕಾರ್ಯಕ್ರಮದಲ್ಲಿ ಆಹ್ವಾನಿತ ಅತಿಥಿಯಾಗಿ ಭಾಗವಹಿಸಿದ್ದೆ. ಅಲ್ಲಿ ಸ್ವತಃ ಪ್ರೊ ಎಚ್ ಎಲ್ಕೆಯವರೇ ಕುಸುಮಾ ಶಾನಭಾಗರನ್ನು ಪರಿಚಯಿಸಿದ್ದರು. ಅಂದಿನಿಂದ ಇದುವರೆಗೆ ಸದಾ ಸಂಪರ್ಕದಲ್ಲಿದ್ದರು, ಆಪ್ತರಾಗಿದ್ದರು. ಆಗಾಗ ಪರಸ್ಪರ ಕರೆಮಾಡಿ ಗಂಟೆಗಟ್ಟಲೇ ಮಾತನಾಡುತ್ತಿದ್ದರು. ಅವರ ಮಾತುಗಳಿಗೆ ಕಿವಿಯಾಗುವ, ಅವರ ಅನುಭವಗಳನ್ನು ಕೇಳುವ ಅವಕಾಶ ನನ್ನದಾಗಿತ್ತು. ಕೊನೆಯ ಬಾರಿ ಜೂನ್ ಹತ್ತರಂದು ನನ್ನ ಕರೆಗೆ ಪ್ರತ್ಯುತ್ತರವಾಗಿ ಬಂದ ಅವರ ಕೊನೆಯ ಮೇಸೇಜು ಹಸಿರಾಗಿರುವಾಗಲೇ ಅವರು ಭೌತಿಕವಾಗಿ ಇನ್ನಿಲ್ಲವಾದ ಸುದ್ದಿ ಬಂದಿದೆ.
ಇದನ್ನೂ ಓದಿ ವಿಷಮ ಭಾರತ | ಶೂದ್ರ-ದಲಿತರ ಬಿಡುಗಡೆಯ ಭಾಷೆ ಇಂಗ್ಲಿಷು- ಕಲಿತರೆ ತಲೆ ತಗ್ಗಿಸಬೇಕಿಲ್ಲ!
ಪತ್ರಕರ್ತರು ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದ ನನ್ನ ಪ್ರೀತಿಯ, ಅಚ್ಚುಮೆಚ್ಚಿನ ಮಾ ಕುಸುಮಾ ಶಾನುಭಾಗರು ನನ್ನಂತಹ ಕಿರಿಯರ ಮನಸ್ಸಿನಲ್ಲಿ ಸದಾ ಹಸಿರಾಗಿರುತ್ತಾರೆ. ಸುಮಾರು ಎರಡು ದಶಕಗಳ ಕಾಲ ಅವರೊಂದಿಗೆ ಆಪ್ತವಾಗಿ ಒಡನಾಡುವ ಸದವಕಾಶ ನನ್ನದಾಗಿತ್ತು. ಅವರ ಪ್ರೀತಿ, ಕಾಳಜಿಯ ಸವಿಯುಣಿಸಿದ, ಸಾಮಾಜಿಕ ಕಳಕಳಿ, ಬಾಧ್ಯತೆಯ ಪಾಠವನ್ನು ತಮ್ಮ ಮೆಲುದನಿಯಲ್ಲಿ ಹೇಳುತ್ತಿದ್ದ ಕುಸುಮಾ ಶಾನಭಾಗರಿಗೆ ಇದು ನನ್ನ ಅಕ್ಷರ ನಮನ, ಶ್ರದ್ಧಾಂಜಲಿ.

ಕುಸುಮಳ ಬಗ್ಗೆ ಪ್ರಾಮಾಣಿಕವಾದ ಲೇಖನ ಪ್ರಸ್ತುತ ಪಡಿಸಿದ ರೂಪಾ ಮತ್ತಿಕೆರೆಯವರಿಗೆ ಅಭಿನಂದನೆಗಳು, ಧನ್ಯವಾದಗಳು. ತಂಗಿ ಕುಸುಮ ನಮ್ಮೆಲ್ಲರಿಗಿಂತ ಭಿನ್ನ ಪ್ರಕೃತಿಯವಳು. ಮೃತ್ಯುವಿನೊಡನೆ ಹೋರಾಡಿ ಕಾಲನ ಕೆರೆಗೆ ಓಗೊಟ್ಟು ದೂರ ದೂರ ಬಹು ದೂರ ನಡೆದೇ ಬಿಟ್ಟಳು. ಚಿರಶಾಂತಿ ಯನ್ನರುಸುತ. ಅವಳ ಆತ್ಮಕ್ಕೆ ಶಾಂತಿ ದೊರೆಯಲಿ. ಅಕ್ಕ ನಳಿನಿ.